ಕನ್ನಡಪ್ರಭ ವಾರ್ತೆ ಹೊಸಪೇಟೆ/ಕೊಪ್ಪಳ
ಮಂಗಳವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಿಎಂ, ಗೇಟ್ ನಂಬರ್ 19ರ ಸರಪಳಿ ತುಂಡರಿಸಿ ಕಳಚಿ ಬಿದ್ದಿರುವ ಸ್ಥಳವನ್ನು ವೀಕ್ಷಣೆ ಮಾಡಿದರು. ನೀರಾವರಿ ಅಧಿಕಾರಿಗಳಿಂದ ಘಟನೆ ಬಗ್ಗೆ ವಿವರಣೆ ಪಡೆದರು. ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಜೊತೆ ಸುಮಾರು 15 ನಿಮಿಷಗಳ ಕಾಲ ಡ್ಯಾಂನ ಸುರಕ್ಷತೆ, ನಿರ್ವಹಣೆ ಕುರಿತು ಚರ್ಚೆ ನಡೆಸಿದರು. ಆಂಧ್ರದ ನೀರಾವರಿ ಸಚಿವರು, ಅಚ್ಚುಕಟ್ಟು ಪ್ರದೇಶವ್ಯಾಪ್ತಿಯ ರೈತ ಮುಖಂಡರ ಜೊತೆಗೂ ಸಮಾಲೋಚನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಪೈಕಿ 19ನೇ ಗೇಟ್ ಕಳಚಿ ಬಿದ್ದಿದೆ. ಈಗಾಗಲೇ ಜಲಾಶಯ ಗೇಟ್ ಗಳ ನಿರ್ಮಾಣ ತಜ್ಞ ಹಾಗೂ ಸುರಕ್ಷತೆ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಜೊತೆ ಚರ್ಚಿಸಿರುವೆ. ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ. ಗೇಟ್‌ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗುತ್ತವೆ. ಹಿಂದೂಸ್ತಾನ್ ಎಂಜಿನಿಯರಿಂಗ್ಸ್ ಹಾಗೂ ನಾರಾಯಣ ಎಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದೆ ಎಂದು ತಿಳಿಸಿದರು.ತುಂಗಭದ್ರಾ ಜಲಾಶಯದ ಸಂಪೂರ್ಣ ನಿರ್ವಹಣೆಯ ಹೊಣೆ ತುಂಗಭದ್ರಾ ಮಂಡಳಿಯದಾಗಿದೆ. ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು, ಕೇಂದ್ರ ಜಲ ಆಯೋಗ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಸದಸ್ಯರು ಮಂಡಳಿಯಲ್ಲಿರುತ್ತಾರೆ. ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಡ್ಯಾಂನಲ್ಲಿ ಇಲ್ಲಿವರೆಗೆ ಯಾವುದೇ ಗೇಟ್‌ನ ಚೈನ್ ತುಂಡಾಗಿರಲಿಲ್ಲ. ಇಂತಹ ಘಟನೆ ಇದೇ ಮೊದಲು. ತಜ್ಞರ ಸಲಹೆಯಂತೆ 50 ವರ್ಷಗಳಿಗೊಮ್ಮೆ ಗೇಟ್ ಹಾಗೂ ಸರಪಳಿಗಳನ್ನು ಬದಲಾಯಿಸಬೇಕಾಗಿದ್ದು, ಇನ್ನು ಮುಂದೆ ತಜ್ಞರ ಸಲಹೆಯಂತೆ ತುಂಗಭದ್ರಾ ಮಂಡಳಿ ಹಾಗೂ ಸಂಬಂಧಪಟ್ಟ ಸರ್ಕಾರಗಳು ಕ್ರಮ ಕೈಗೊಳ್ಳಲಿವೆ ಎಂದು ತಿಳಿಸಿದರು.
ಬಾಗಿನ ಅರ್ಪಿಸಲು ನಾನೇ ಬರುವೆ: ಗೇಟ್‌ನ ದುರಸ್ತಿ ಬಳಿಕ ಉತ್ತಮ ಮಳೆಯಾಗುವ ವಿಶ್ವಾಸವಿದ್ದು, ಜಲಾಶಯ ಖಂಡಿತ ಭರ್ತಿಯಾಗಲಿದೆ. ತುಂಗಭದ್ರಾ ಜಲಾಶಯ ಮತ್ತೆ ತುಂಬುವ ವಿಶ್ವಾಸವಿದ್ದು, ಬಾಗಿನ ಅರ್ಪಿಸಲು ನಾನು ಮತ್ತೊಮ್ಮೆ ಆಗಮಿಸುವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.