ಚಿತ್ರದುರ್ಗ: ಪ್ರಮುಖ 19 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಐದು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿದ್ದ ಪೌರ ಸೇವಾ ನೌಕರರು, ಕಾರ್ಮಿಕರು ತಾತ್ಕಾಲಿಕವಾಗಿ ಹೋರಾಟದಿಂದ ಹಿಂದೆ ಸರಿದಿದ್ದಾರೆ. ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ ಅವರು ಶನಿವಾರ ಪೌರ ಕಾರ್ಮಿಕರ ಜೊತೆ ಮಾತುಕತೆ ನಡೆಸಿ, ಸರ್ಕಾರ ನೀಡಿರುವ ಭರವಸೆ ಮನವರಿಕೆ ಮಾಡಿಕೊಟ್ಟ ನಂತರ ಮುಷ್ಕರ ಕೈ ಬಿಡಲಾಯಿತು.
19 ಬೇಡಿಕೆಗಳಲ್ಲಿ ಏಳನ್ನು ಒಂದು ತಿಂಗಳ ಒಳಗಾಗಿ ರಾಜ್ಯ ಸರ್ಕಾರ ಈಡೇರಿಸುವ ಭರವಸೆ ನೀಡಿದೆ. ಹಾಗಾಗಿ ಮುಷ್ಕರದಿಂದ ಹಿಂದೆ ಸರಿಯೋಣವೆಂದು ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ್ ಕಾರ್ಮಿಕರಲ್ಲಿ ಮನವಿ ಮಾಡಿದರು. ಬಳಿಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಲಾರ್ಪಣೆ ಮಾಡಿ ಮುಷ್ಕರಕ್ಕೆ ತೆರೆ ಎಳೆಯಲಾಯಿತು.
ಪೌರಸೇವಾ ನೌಕರರನ್ನು ರಾಜ್ಯ ಸರಕಾರಿ ನೌಕರರನ್ನಾಗಿ ಪರಿಗಣಿಸಿ ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಯೋಜನೆ ಒಳಗೊಂಡಂತೆ ಸರಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ವಿಸ್ತರಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿ ದೀಪ ಸಹಾಯಕರು, ಲೋಡರ್ಸ್ ಮತ್ತು ಸ್ಯಾನಿಟರಿ ಸೂಪರ್‌ವೈಸರ್ ಸೇರಿದಂತೆ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ನೇರಪಾವತಿ ಯೋಜನೆಗೆ ಒಳಪಡಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು 20 ರಿಂದ 25 ವರ್ಷ ದಿನಗೂಲಿ, ಕ್ಷೇಮಾಭಿವೃದ್ಧಿ ಅಧಿನಿಯಮ, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸಕ್ರಮಾತಿ ಮಾಡುವ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ನಡೆಸಲಾಗಿತ್ತು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾಕರ್, ರಾಜ್ಯದ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಕಳೆದ ಐದು ದಿನಗಳ ಕಾಲ ನಡೆಸಿದ ಮುಷ್ಕರಕ್ಕೆ ಸರಕಾರ ಕಣ್ಣು ತೆರೆದಿದೆ. ಒಂದು ತಿಂಗಳೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಶುಕ್ರವಾರ ಪೌರಾಡಳಿತ ಸಚಿವ ರಹೀಂ ಖಾನ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಏಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಹಾಗಾಗಿ ರಾಜ್ಯದಾದ್ಯಂತ ಸುಮಾರು 313 ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.ಪೌರ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ, ರಾಜ್ಯ ಪ್ರಧಾನ ಗುರುಮೂರ್ತಿ, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ ಗೊಪ್ಪೆ, ಪೌರ ನೌಕರರ ಸಂಘದ ಅಧ್ಯಕ್ಷ ದುರುಗೇಶಪ್ಪ, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಎಸ್.ಪಿ.ಲವ, ತಾಲೂಕು ಅಧ್ಯಕ್ಷೆ ರೇಣುಕಾ, ಪೌರಾಯುಕ್ತೆ ಎಂ.ರೇಣುಕಾ, ದಲಿತ ಮುಖಂಡ ರಾಜಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.