ಗಿರಿ ಪ್ರದೇಶದ ಪ್ರವಾಸಿ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ: ಜಿಲ್ಲಾಧಿಕಾರಿ

KannadaprabhaNewsNetwork |  
Published : Jul 15, 2025, 11:45 PM IST
 ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ | Kannada Prabha

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸಿ ಸ್ಥಳ ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದ್ದಾರೆ.

- ಜಿಲ್ಲಾಡಳಿತದ ನಿಯಮ ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ । ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆ

--

- ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ

- ಪ್ರವಾಸಿಗರು ತಮ್ಮ ಸುರಕ್ಷತೆ ದೃಷ್ಟಿಯಿಂದ ನಿಯಮ ಪಾಲನೆ ಅಗತ್ಯ

- ಪ್ರವಾಸಿಗರನ್ನು ಕರೆದೊಯ್ಯಲು ಬೆಳಿಗ್ಗೆ 100, ಸಂಜೆ 100 ವಾಹನಗಳ ವ್ಯವಸ್ಥೆ

- ಆನ್‌ಲೈನ್‌ನಲ್ಲಿ ನೋಂದಣಿ ಉಚಿತ

- ಗಿರಿಪ್ರದೇಶದಲ್ಲಿ ಸಂಚಾರಕ್ಕೆ ದಟ್ಟಣೆ ತಡೆಯಲು ಬದಲಾವಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸಿ ಸ್ಥಳ ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಿರಿ ಪ್ರದೇಶದ ಕೆಲವು ಭಾಗ ಗಳಲ್ಲಿ ಗುಡ್ಡ ಕುಸಿತದಿಂದ ಅಲ್ಲಲ್ಲಿ ಮಣ್ಣು ಆವರಿಸಿದ್ದು, ರಸ್ತೆ ಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ. ನಿಯಮಾನುಸಾರ ಪ್ರವಾಸಿಗರು ತಮ್ಮ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಬೇಕು ಎಂದರು.

ಪ್ರವಾಸಿಗರು ಬರುವ ವಾಹನಗಳಿಗೆ ಸ್ಥಳೀಯವಾಗಿ ಗುರುತಿಸಿರುವ ಸ್ಥಳಗಳಲ್ಲಿ ತಮ್ಮ ವಾಹನ ನಿಲುಗಡೆಗೊಳಿಸಿ ಸ್ಥಳೀಯ ಲಘು ವಾಹನಗಳಲ್ಲಿ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ತೆರಳಬಹುದು. ಪ್ರವಾಸಿಗರನ್ನು ಕರೆದೊಯ್ಯಲು ಬೆಳಿಗ್ಗೆ 100 ಹಾಗೂ ಸಂಜೆ 100 ವಾಹನಗಳನ್ನು ಮಾತ್ರ ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಪ್ರವಾಸಿಗರಿಗೆ ಅನುಕೂಲವಾಗಲೆಂದು ಆನ್‌ಲೈನ್‌ನಲ್ಲಿ ನೋಂದಣಿ ಉಚಿತವಾಗಿದ್ದು, ಸಂಪೂರ್ಣ ಮಾಹಿತಿ ಅಲ್ಲಿಯೇ ಸಿಗುವುದರಿಂದ ತಪ್ಪದೇ ನಿಯಮಗಳನ್ನು ಪಾಲಿಸಬೇಕು. ಪರಿಸರ ಸಂರಕ್ಷಣೆ ಹಿತದೃಷ್ಟಿಯಿಂದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಕೊಂಡೊಯ್ಯಬಾರದು. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ವ್ಯವಸ್ಥೆಗೆ ಒತ್ತು ನೀಡುವಂತೆ ಹೇಳಿದರು. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲತೆಗಳನ್ನು ಹೆಚ್ಚಿಸಲು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿ ಜಾಲವನ್ನು ಸೃಜಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ವಾಹನ ದಟ್ಟಣೆಯಿಂದ ಗಿರಿಪ್ರದೇಶದಲ್ಲಿ ರಸ್ತೆ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದರಿಂದ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿವರಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಆತಿಥ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅನುವಾಗುವಂತೆ ಆಹಾರ ಮತ್ತು ಪಾನೀಯ ವಿತರಣೆ, ಕೊಠಡಿ ನಿರ್ವಹಣೆ, ಸ್ವಾಗತಗಾರಿಕೆ ಹಾಗೂ ವಿವಿಧ ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಡಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಕನಿಷ್ಠ 20 ರಿಂದ 45 ವರ್ಷ ವಯೋಮಿತಿಯವರಿಗೆ ಈ ತರಬೇತಿ ನೀಡಲಾಗುತ್ತಿದ್ದು, ಉಚಿತ ಊಟ, ವಸತಿ ಹಾಗೂ ಪ್ರೋತ್ಸಾಹಧನ ನೀಡಲಾಗುವುದು. ಜಿಲ್ಲೆಯ ಅಭ್ಯರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಸಭೆಯಲ್ಲಿ ಚಿಕ್ಕಮಗಳೂರು ಡಿವೈಎಸ್‌ಪಿ ಶೈಲೇಂದ್ರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್ ಸೇರಿದಂತೆ ಅರಣ್ಯ, ಮೆಸ್ಕಾಂ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಲೋಹಿತ್ ಸ್ವಾಗತಿಸಿದರು. 15 ಕೆಸಿಕೆಎಂ 1

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್