ಮತ್ತೆ ಕೊಚ್ಚಿ ಹೋದ ತಾತ್ಕಾಲಿಕ ರಸ್ತೆ

KannadaprabhaNewsNetwork |  
Published : Sep 15, 2025, 01:00 AM IST
ಫೋಟೋ:14ಕೆಪಿಎಸ್ಎನ್ಡಿ2:  | Kannada Prabha

ಸಾರಾಂಶ

ತಾಲೂಕಿನ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳದ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ನಿರಂತರ ಮಳೆಯಿಂದ ಕೊಚ್ಚಿ ಹೋಗಿದ್ದರಿಂದ ಭಾನುವಾರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪ್ರಯಾಣಿಕರು ಪರದಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳದ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ನಿರಂತರ ಮಳೆಯಿಂದ ಕೊಚ್ಚಿ ಹೋಗಿದ್ದರಿಂದ ಭಾನುವಾರ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪ್ರಯಾಣಿಕರು ಪರದಾಡಿದರು.

ಈಗ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿರುವುದು ಮತ್ತು ಕಾಲುವೆಯಿಂದ ಚೆಕ್ ಡ್ಯಾಂಗೆ ನೀರು ಹರಿಬಿಟ್ಟಿರುವುದರಿಂದ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ತಾತ್ಕಾಲಿಕ ರಸ್ತೆ ಮೇಲಿನ ಮಣ್ಣು ಕೊಚ್ಚಿ ಹೋಗಿದೆ. ಭಾನುವಾರ ಬೆಳಿಗ್ಗೆ ತಾತ್ಕಾಲಿಕ ರಸ್ತೆ ಸಂಪೂರ್ಣ ನೀರುಮಯವಾಗಿತ್ತು. ಹೀಗಾಗಿ ಸಿಂಧನೂರು ಮತ್ತು ಮಸ್ಕಿ ಮುಖ್ಯರಸ್ತೆಯಲ್ಲಿ ಬಸ್, ಲಾರಿ, ಕ್ರೂಷರ್, ಕಾರು, ಟಂಟಂ ಆಟೋ, ಬೈಕ್‌ಗಳು, ಟ್ರ್ಯಾಕ್ಟರ್ ಸೇರಿದಂತೆ ನೂರಾರು ವಾಹನಗಳು ಒಂದರ ಹಿಂದೆ ಒಂದು ನಿಂತುಕೊಂಡಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಡಿ ರು.18 ಕೋಟಿ ವೆಚ್ಚದಲ್ಲಿ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ-150ಎ ವ್ಯಾಪ್ತಿಗೊಳಪಡುವ ಸಿಂಧನೂರು-ಮಸ್ಕಿ ಮಧ್ಯದಲ್ಲಿ ಏಳು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಇದರಲ್ಲಿ ಬೂತಲದಿನ್ನಿ ಮತ್ತು ಕಲ್ಲೂರು ಗ್ರಾಮಗಳ ನಡುವಿನ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿದೆ. ವಾಹನಗಳ ಸಂಚಾರಕ್ಕಾಗಿ ಪಕ್ಕದಲ್ಲಿ ನಿರ್ಮಿಸಿರುವ ತಾತ್ಕಾಲಿಕ ರಸ್ತೆ ಮಳೆಯಿಂದ ತಿಂಗಳ ಹಿಂದೆಯಷ್ಟೇ ಕೊಚ್ಚಿ ಹೋಗಿತ್ತು. ಆಗ ಹಳ್ಳಕ್ಕೆ ರಿಂಗ್ ಹಾಕಿ, ಮೇಲೆ ಕಂಕರ್ ಮತ್ತು ಮರಂ ಹಾಕಿ ರಸ್ತೆ ನಿರ್ಮಿಸಲಾಗಿತ್ತು.

ದೂರದೂರಿಗೆ ತೆರಳುವ ಪ್ರಯಾಣಿಕರು ಬಸ್‌ನಲ್ಲಿ ಎರಡ್ಮೂರು ತಾಸುಗಳ ಕಾಲ ಕಾದು ಕುಳಿತಿದ್ದರು. ಸಿಂಧನೂರು-ಮಸ್ಕಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮಸ್ಕಿ ಕಡೆಯಿಂದ ಸಿಂಧನೂರು ಕಡೆ ಬರುತ್ತಿದ್ದ ವಾಹನಗಳನ್ನು ದೇವರಗುಡಿ ಮಾರ್ಗವಾಗಿ ಕಳುಹಿಸಿದರು. ಅದರಂತೆ ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ಹೋಗುತ್ತಿದ್ದ ವಾಹನಗಳನ್ನು ಬಳಗಾನೂರು ಕ್ರಾಸ್ ಮೂಲಕ ಮಸ್ಕಿಗೆ ಕಳುಹಿಸಿ ಟ್ರಾಫಿಕ್ ಸಮಸ್ಯೆಯನ್ನು ಸುಗಮಗೊಳಿಸಲು ಪ್ರಯತ್ನಿಸಿದರು.

ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿ ವರ್ಷವಾಗುತ್ತಾ ಬಂದರೂ ಸಹ ಇನ್ನೂ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ. ಇವರ ವಿರುದ್ಧ ಕ್ರಮಕೈಗೊಳ್ಳದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಎರಡು ಬಾರಿ ತಾತ್ಕಾಲಿಕ ರಸ್ತೆ ಕೊಚ್ಚಿ ಹೋಗಿದ್ದು, ಇದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ತಕ್ಷಣವೇ ಗುಣಮಟ್ಟದ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಬೇಕು. ಸೇತುವೆ ನಿರ್ಮಾಣ ಕಾಮಗಾರಿ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಿಂಧನೂರು-ಮಸ್ಕಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಬೇಕಾಗುತ್ತದೆ ಎಂದು ಕಲ್ಲೂರು ಗ್ರಾಮದ ವೆಂಕೋಬ ನಾಯಕ, ಪಾಂಡಪ್ಪ ಮಡಿವಾಳ, ವೆಂಕಟೇಶ ಬೂತಲದಿನ್ನಿ, ರವಿಗೌಡ ಮುಳ್ಳೂರು ಎಚ್ಚರಿಕೆ ನೀಡಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ