36 ಅಂಗಡಿಗಳಿಗೆ 1359 ಜನರಿಂದ ಬೇಡಿಕೆ ಅರ್ಜಿ: ಚೀಟಿ ಎತ್ತುವುದರ ಮೂಲಕ ಹರಾಜುಬಡವರಿಗೆ ಅಂಗಡಿ ಮಳಿಗೆ ಕೊಡಲು ಸಾರ್ವಜನಿಕರ ಆಗ್ರಹ
ಪಟ್ಟಣದ ಮುಖ್ಯರಸ್ತೆಯ ಇಕ್ಕೆಲದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಪುರಸಭೆಯವರು 36 ತಾತ್ಕಾಲಿಕ ಮಳಿಗೆಗಳ ಬಾಡಿಗೆಯ ಹರಾಜು ಪ್ರಕ್ರಿಯೆ ಮಂಗಳವಾರ ಮಧ್ಯಾಹ್ನ 2.30ಕ್ಕೆ ಪುರಸಭೆ ಕಚೇರಿಯಲ್ಲಿ ನಡೆಸಲಿದ್ದಾರೆ.
ವಿಶೇಷವೆಂದರೆ ಈ ಬಾರಿ 36 ತಾತ್ಕಾಲಿಕ ಅಂಗಡಿ ಮಳಿಗೆಗೆ 1359 ಜನರು ಬೇಡಿಕೆ ಅರ್ಜಿ ಸಲ್ಲಿಸಿದ್ದಾರೆ. ಪುರಸಭೆಯವರು ಒಂದು ಅರ್ಜಿಗೆ ₹200 ಶುಲ್ಕ ನಿಗದಿ ಪಡಿಸಿ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸ್ವೀಕರಿಸಿದ್ದಾರೆ. ಮಂಗಳವಾರ ಮಧ್ಯಾಹ್ನ 36 ಅಂಗಡಿ ಮಳಿಗೆಗಾಗಿ ಚೀಟಿ ಎತ್ತುವುದರ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದೆ. ಅಂಗಡಿ ಮಳಿಗೆಗೆ ಅರ್ಜಿ ಆಯ್ಕೆಯಾದಲ್ಲಿ ₹5000 ಶುಲ್ಕ ಮತ್ತು 1000 ಸ್ವಚ್ಛತಾ ಶುಲ್ಕ ಸೇರಿ ಒಟ್ಟೂ ಒಂದು ಅಂಗಡಿಗೆ ₹6000ಯನ್ನು ಪುರಸಭೆಗೆ ಭರಣ ಮಾಡಬೇಕು. ಸೋಮವಾರ ಸಂಜೆ ಕೆಲವರು ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆ ಬಗ್ಗೆ ಅಪಸ್ವರ ಎತ್ತಿದ ಹಿನ್ನೆಲೆ ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾವುಡ, ವ್ಯವಸ್ಥಾಪಕ ವೆಂಕಟೇಶ, ಹಿರಿಯ ಆರೋಗ್ಯಾಧಿಕಾರಿ ಸುಜಿಯಾ ಸೋಮನ್, ಕಂದಾಯ ಅಧಿಕಾರಿ ಮೋಕ್ಷಿತಾ ಮುಂತಾದವರು ನಗರ ಠಾಣೆಯ ಇನ್‌ಸ್ಪೆಕ್ಟರ್ ದಿವಾಕರ ಜತೆ ಪುರಸಭೆ ಹರಾಜು ಹಾಕುವ 36 ತಾತ್ಕಾಲಿಕ ಮಳಿಗೆ ಸ್ಥಳ ವೀಕ್ಷಿಸಿದರು. ವಿದ್ಯುತ್ ಟ್ರಾನ್ಸ್‌ಫಾರ್ಮರ್, ಪುರಸಭೆ ಕಚೇರಿಯ ದಾರಿ, ಪೊಲೀಸ್ ಚೌಕಿಯ ಸ್ಥಳ ಮುಂತಾದ ಕಡೆ ಮಳಿಗೆ ಹಾಕದಂತೆ ದಿವಾಕರ ಅಂಗಡಿಕಾರರಿಗೆ ಎಚ್ಚರಿಕೆ ನೀಡಿದರು.ಈ ಸಂದರ್ಭ ಖಾಜಾ, ಡಾ. ಇಸ್ಮಾಯಿಲ್ ಫಾರೂಕ್, ಜಾವೇದ್ ಮುಂತಾದವರು ಪುರಸಭೆಯವರು ಈ ಸಲ ಅರ್ಜಿ ಶುಲ್ಕಕ್ಕೆ ₹200 ವಸೂಲಿ ಮಾಡಿದ್ದಾರೆ. ಹಿಂದೆಲ್ಲಾ ಅರ್ಜಿ ಶುಲ್ಕ ಕಡಿಮೆ ಇತ್ತು. ಅರ್ಜಿ ಶುಲ್ಕ ಒಮ್ಮೇಲೆ ಏರಿಕೆ ಮಾಡಿದ್ದರಿಂದ ಬಡವರಿಗೆ ತೊಂದರೆ ಆಗಿದೆ. ಹರಾಜು ಹಾಕುವ 36 ಅಂಗಡಿಗಳೂ ಸಹ ಬಡವರಿಗೆ ಸಿಗಬೇಕು. ಈ ಅಂಗಡಿಗಳು ಯಾವುದೇ ಕಾರಣಕ್ಕೂ ಉಳ್ಳವರಿಗೆ ಹೋಗಬಾರದು ಎಂದರು.
-------
9ಬಿಕೆಲ್1: ಭಟ್ಕಳ ಮುಖ್ಯ ರಸ್ತೆಯಲ್ಲಿ ಪುರಸಭೆಯವರು ಹರಾಜು ಮಾಡುವ 36 ತಾತ್ಕಾಲಿಕ ಮಳಿಗೆಗಳ ಸ್ಥಳವನ್ನು ಅಧಿಕಾರಿಗಳು ವೀಕ್ಷಿಸಿದರು.