ಅರಣ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ತಾತ್ಕಾಲಿಕ ತಡೆ

KannadaprabhaNewsNetwork | Published : May 6, 2024 12:34 AM

ಸಾರಾಂಶ

ಪರಿಸರ ರಕ್ಷಣೆ ಮತ್ತು ಅರಣ್ಯ ಭೂಮಿಯ ರಕ್ಷಣೆ ಸರ್ಕಾರದ ಕರ್ತವ್ಯವಾಗಿದೆ. ಅರಣ್ಯ ಭೂಮಿ ಒತ್ತುವರಿ ಮಾಡಲು ಅವಕಾಶ ಇಲ್ಲ ಎಂದು ಶಾಸಕ ಎ.ಎಸ್‌.ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿಇತ್ತೀಚಿಗೆ ಕೊಡಗಿನಲ್ಲಿ ಅರಣ್ಯ ಇಲಾಖೆಯವರು ಖಾಸಗಿ ಜಮೀನಿನಲ್ಲಿ ಮರದ ಲೆಕ್ಕವನ್ನು ಪಡೆಯುತ್ತಿರುವ ಬಗ್ಗೆ ಜಿಲ್ಲೆಯ ರೈತರು, ಬೆಳೆಗಾರರು, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್ ಪೊನ್ನಣ್ಣ ರೈತರು ಬೆಳೆಗಾರರು ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದ್ದಾರೆ.

ಮರದ ಮೇಲಿನ ತಮ್ಮ ಹಕ್ಕಿಗೆ ಧಕ್ಕೆ ಆಗದಂತೆ ಸರ್ಕಾರ ಹಾಗೂ ನಾನು ಕ್ರಮವನ್ನು ಜರುಗಿಸುತ್ತೇವೆ. ಚುನಾವಣೆ ನೀತಿ ಸಂಹಿತೆ ಕಳೆದ ನಂತರ ಅರಣ್ಯ ಸಚಿವರೊಂದಿಗೆ ಈ ಬಗ್ಗೆ ಚರ್ಚಿಸಿ ಅರಣ್ಯ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಈಗಾಗಲೇ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಮಾತನಾಡಿ ಈಗ ಹೊರಡಿಸಿರುವ ಆದೇಶವನ್ನು ತಡೆಹಿಡಿಯುವಂತೆ ಸೂಚಿಸಲಾಗಿದೆ ಎಂದು ಎಸ್ ಪೊನ್ನಣ್ಣ ಸ್ಪಷ್ಟಪಡಿಸಿದ್ದಾರೆ.

ಮರದ ಮೇಲಿನ ಹಕ್ಕಿನ ಬಗ್ಗೆ ನಾನು ಏನು ಹೋರಾಟ ಮಾಡಿದ್ದೇನೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಹೋರಾಟ ಮಾಡದವರು ಇದೀಗ ಬೆಳೆಗಾರರ ಪರ ಮಾತನಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ವಿರೋಧ ಪಕ್ಷದ ನಡೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪರಿಸರ ರಕ್ಷಣೆ, ಮತ್ತು ಅರಣ್ಯ ಭೂಮಿಯ ರಕ್ಷಣೆ ಸರ್ಕಾರದ ಕರ್ತವ್ಯವಾಗಿದ್ದು. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲು ಯಾವುದೇ ಅವಕಾಶ ನೀಡುವುದಿಲ್ಲ. ಹಾಗೆ ಜಿಲ್ಲೆಯಲ್ಲಿರುವ ಮರ ವ್ಯಾಪಾರಿಗಳು ಅರಣ್ಯ ಸಂಪತ್ತನ್ನು ನಾಶ ಪಡಿಸಲು ಕೂಡ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರೈತರು ಹಾಗೂ ಕಾಫಿ ಬೆಳಗಾರು ನಿಶ್ಚಿಂತೆಯಿಂದ ಇದ್ದು ಯಾವುದೇ ಅರಣ್ಯ ಇಲಾಖೆ ಸಿಬ್ಬಂದಿಗಳು ಇನ್ನು ತಮ್ಮ ಜಮೀನಿನ ಬಳಿ ಮರದ ಲೆಕ್ಕ ಹಾಕಲು ಬರುವುದಿಲ್ಲ ಇದನ್ನು ತಡೆಹಿಡಿಯಲಾಗಿದೆ ಎಂದು ಅವರು ಹೇಳಿದ್ದಾರೆ.

Share this article