10 ಕೋಟಿ ರು. ವೆಚ್ಚದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿ: ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : Jul 21, 2024, 01:16 AM IST
20ಕೆಎಂಎನ್ ಡಿ15 | Kannada Prabha

ಸಾರಾಂಶ

ತಾಲೂಕಿನ ರೈತರು ಬೆಳೆಯುವ ತರಕಾರಿ, ತೆಂಗು ಸೇರಿ ಹಲವು ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಪಿಎಂಸಿ ಪ್ರಾಂಗಣದಲ್ಲಿ ಸುಸಜ್ಜಿತವಾದ ಮುಚ್ಚು ಹರಾಜು ಕಟ್ಟೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಇದರಿಂದ ಮಳೆಗಾಲದಲ್ಲಿಯೂ ಕೂಡ ರೈತರು ಬೆಳೆಯುವ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕೊಬ್ಬರಿ ಮಾರಾಟ ಸೇರಿದಂತೆ ರೈತರಿಗೆ ಎಲ್ಲ ರೀತಿಯಲ್ಲೂ ಅನುಕೂಲವಾಗುವ ನಿಟ್ಟಿನಲ್ಲಿ 10 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಅಭಿವೃದ್ಧಿ ಪಡಿಸಲಾಗುವುದೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 3 ಕೋಟಿ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮುಚ್ಚು ಹರಾಜುಕಟ್ಟೆ, ಕಾಂಕ್ರಿಟ್ ರಸ್ತೆ, ಚರಂಡಿ ಹಾಗೂ ಆರ್‌ಓ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ರೈತರು ಬೆಳೆಯುವ ತರಕಾರಿ, ತೆಂಗು ಸೇರಿ ಹಲವು ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಯಾವುದೇ ತೊಂದರೆಯಾಗಬಾರದೆಂಬ ಉದ್ದೇಶದಿಂದ ಎಪಿಎಂಸಿ ಪ್ರಾಂಗಣದಲ್ಲಿ ಸುಸಜ್ಜಿತವಾದ ಮುಚ್ಚು ಹರಾಜು ಕಟ್ಟೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಇದರಿಂದ ಮಳೆಗಾಲದಲ್ಲಿಯೂ ಕೂಡ ರೈತರು ಬೆಳೆಯುವ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗಲಿದೆ ಎಂದರು.

ತಾಲೂಕು ಮಳೆಯಾಶ್ರಿತ ಪ್ರದೇಶವಾದರೂ ಸಹ ಇಲ್ಲಿನ ರೈತರು ರಾಗಿ, ಹುರುಳಿ, ತರಕಾರಿ ಜೊತೆಗೆ ಹೈನುಗಾರಿಕೆ ಮತ್ತು ತೆಂಗು ಕೃಷಿಯನ್ನೂ ಅವಲಂಬಿಸಿಕೊಂಡು ಅಧಿಕ ಪ್ರಮಾಣದಲ್ಲಿ ಕೊಬ್ಬರಿ ಉತ್ಪಾದನೆ ಮಾಡುತ್ತಿದ್ದಾರೆ ಎಂದರು.

ರೈತರ ಕೊಬ್ಬರಿ ಮಾರಾಟಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ತಿಪಟೂರಿನಲ್ಲಿರುವ ಕೊಬ್ಬರಿ ಹರಾಜು ಮಾರುಕಟ್ಟೆ ಮಾದರಿಯಲ್ಲಿಯೇ ತಾಲೂಕಿನ ಕದಬಹಳ್ಳಿ, ಅದ್ದೀಹಳ್ಳಿ ಸರ್ಕಲ್ ಮತ್ತು ನಾಗಮಂಗಲದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು 10 ಕೋಟಿ ರು.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಕೃಷಿ ಯಂತ್ರೋಪಕರಣ ಸೇರಿ ಸರ್ಕಾರದ ಯಾವುದೇ ಸವಲತ್ತು ಮತ್ತು ಸೌಲಭ್ಯಗಳು ಪ್ರತಿಯೊಬ್ಬ ರೈತರಿಗೂ ಸಿಗಬೇಕೆಂಬುದೇ ಸರ್ಕಾರದ ಮುಖ್ಯ ಉದ್ದೇಶ. ಆದರೆ, ಸಾಲ ಸೌಲಭ್ಯ, ಕೃಷಿ ಪರಿಕರಗಳೂ ಸೇರಿ ಸರ್ಕಾರದ ಸವಲತ್ತುಗಳನ್ನು ಪಡೆಯುವ ರೈತರೇ ಎರಡು ವರ್ಷಕ್ಕೊಮ್ಮೆ ಮತ್ತೆ ಪಡೆಯುತ್ತಿದ್ದರಿಂದ ಅದೆಷ್ಟೋ ಮುಗ್ಧ ರೈತರು ಕೃಷಿ ಇಲಾಖೆಯ ಸವಲತ್ತುಗಳಿಂದ ವಂಚಿತರಾಗುತ್ತಿದ್ದರು ಎಂದರು.

ಪ್ರತಿಯೊಬ್ಬ ರೈತರಿಗೂ ಇಲಾಖೆಯ ಸವಲತ್ತು ಸಿಗಬೇಕೆಂಬ ಉದ್ದೇಶದಿಂದ ಒಮ್ಮೆ ಕೃಷಿ ಪರಿಕರಗಳ ಸವಲತ್ತು ಪಡೆದ ರೈತರು ಮುಂದಿನ 7 ವರ್ಷ ಪರಿಕರಗಳ ಸವಲತ್ತಿಗಾಗಿ ಅರ್ಜಿ ಸಲ್ಲಿಸಬಾರದೆಂಬ ನಿಯಮವಿದೆ. 7 ವರ್ಷದ ಅವಧಿಯನ್ನು ಕಡಿಮೆ ಮಾಡುವ ಕುರಿತು ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದರು.

ತಹಸೀಲ್ದಾರ್ ಹಾಗೂ ಎಪಿಎಂಸಿ ಆಡಳಿತಾಧಿಕಾರಿ ನಯೀಂಉನ್ನೀಸಾ, ಎಪಿಎಂಸಿ ಉಪ ನಿರ್ದೇಶಕಿ ರೇವತಿಬಾಯಿ, ಕಾರ್ಯದರ್ಶಿ ಎಸ್.ಎಂ.ಸರ್ವಜ್ಞ, ಕಾರ್ಯಪಾಲಕ ಇಂಜಿನಿಯರ್ ಟಿ.ಸತೀಶ್, ಎಇಇ ಗೌರೀಶ್ ಎಚ್.ಗೌಡ, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ತಟ್ಟಹಳ್ಳಿ ನರಸಿಂಹಮೂರ್ತಿ, ಮುಖಂಡರಾದ ಎಚ್.ಟಿ.ಕಷ್ಣೇಗೌಡ, ಎಂ.ಪ್ರಸನ್ನ, ಆರ್.ಕೃಷ್ಣೇಗೌಡ, ಸಂಪತ್‌ಕುಮಾರ್, ತ್ಯಾಪೇನಹಳ್ಳಿ ಶ್ರೀನಿವಾಸ್, ಎಸ್.ಬಿ.ರಮೇಶ್, ಮರಿಸ್ವಾಮಿ ಸೇರಿದಂತೆ ಹಲವರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು