ಮುಂಬರುವ ಏಪ್ರಿಲ್‌ನಲ್ಲಿ ವಿವಿಸಾಗರ ಜಲಾಶಯಕ್ಕೆ ಸ್ಪಿಲ್ಲರ್‌ ಗೇಟ್‌ ಅಳವಡಿಕೆಗೆ ಟೆಂಡರ್‌

KannadaprabhaNewsNetwork | Updated : Feb 16 2025, 12:28 PM IST

ಸಾರಾಂಶ

ಮುಂಬರುವ ಏಪ್ರಿಲ್‌ನಲ್ಲಿ ವಿವಿಸಾಗರ ಜಲಾಶಯಕ್ಕೆ ಸ್ಪಿಲ್ಲರ್‌ ಗೇಟ್‌ ಅಳವಡಿಕೆಗೆ ಟೆಂಡರ್‌ ಕರೆಯಲಾಗುವುದು ಎಂದು ವೀಕ್ಷಣಾ ತಂಡದ ಮುಖ್ಯಸ್ಥ ಹಾಗೂ ಡಿಸಿಎಂ ತಾಂತ್ರಿಕ ಸಲಹೆಗಾರ ಜಯಪ್ರಕಾಶ್‌ ಹೇಳಿದರು.

 ಹೊಸದುರ್ಗ : ಮುಂಬರುವ ಏಪ್ರಿಲ್‌ನಲ್ಲಿ ವಿವಿಸಾಗರ ಜಲಾಶಯಕ್ಕೆ ಸ್ಪಿಲ್ಲರ್‌ ಗೇಟ್‌ ಅಳವಡಿಕೆಗೆ ಟೆಂಡರ್‌ ಕರೆಯಲಾಗುವುದು ಎಂದು ವೀಕ್ಷಣಾ ತಂಡದ ಮುಖ್ಯಸ್ಥ ಹಾಗೂ ಡಿಸಿಎಂ ತಾಂತ್ರಿಕ ಸಲಹೆಗಾರ ಜಯಪ್ರಕಾಶ್‌ ಹೇಳಿದರು.

ವಿವಿಸಾಗರ ಜಲಾಶಯದ ಹಿನ್ನಿರಿನ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರೀಶಿಲಿಸಿ ಮಾತನಾಡಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಭಾಗದ ಶಾಸಕರ ಮನವಿಯಂತೆ ಹಿನ್ನಿರಿನ ಪರಿಸ್ಥಿತಿಯ ಬಗ್ಗೆ ವರದಿ ನೀಡುವಂತೆ ಮೂವರು ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿತ್ತು. ಅದರಂತೆ ಇಂದು ಸ್ಥಳ ಪರಿಶೀಲನೆಗೆ ಬಂದಿದ್ದೇವೆ. ಶಾಸಕರು ಹೇಳಿದಂತೆ ಹಿನ್ನೀರಿನ ಭಾಗದಲ್ಲಿ ಜನರು ತೊಂದರೆಗೊಳಗಾಗಿರುವುದು ಕಂಡು ಬಂದಿದೆ ಎಂದರು.

ಕಳೆದ 2 ವರ್ಷಗಳ ಹಿಂದೆ ನದಿ ಪಾತ್ರ ಸೇರಿದಂತೆ ಹಳ್ಳಗಳಲ್ಲಿ ಹೆಚ್ಚು ನೀರು ಜಲಾಶಯಕ್ಕೆ ಬಂದಿದ್ದರಿಂದ ಡ್ಯಾಂ ಭರ್ತಿಯಾಗಿ ಹೆಚ್ಚುವರಿ ನೀರು ಶೇಖರಣೆಯಾಗಿ ಹಿನ್ನಿರಿನ ಭಾಗದ ಕೃಷಿ ಭೂಮಿ, ಗ್ರಾಮಗಳು ,ರಸ್ತೆ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಈ ಹಿನ್ನಲೆಯಲ್ಲಿ ಡ್ಯಾಂಗೆ ಬರುವ ಒಳ ಹರಿವಿನ ಪ್ರಮಾಣಕ್ಕೆ ಹೆಚ್ಚುವರಿ ನೀರನ್ನು ಸರಾಗವಾಗಿ ಹೊರ ಹಾಕಲು ಸ್ಪಿಲ್ಲರ್‌ ಗೇಟ್‌ ಅಳವಡಿಸುವಂತೆ ಹೊಸದುರ್ಗ ಭಾಗದ ರೈತರು ಹಾಗೂ ಶಾಸಕ ಬಿ.ಜಿ .ಗೋವಿಂದಪ್ಪ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಕುರಿತು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರ ಇದಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಅನುಮೋದನೆ ದೊರೆತ್ತಿದ್ದು ವಿಶ್ವ ಬ್ಯಾಂಕಿನ ಆರ್ಥಿಕ ಸಹಾಯದಿಂದ 130 ಅಡಿಗೆ ಸೀಮಿತವಾದಂತೆ ಹೆಚ್ಚುವರಿ ನೀರು ಸರಾಗವಾಗಿ ಹರಿಯಲು ಸ್ಪಿಲ್ಲರ್‌ ಗೇಟ್‌ ಅಳವಡಿಕೆ ಮಾಡಲಾಗುವುದು. ಬರುವ ಏಪ್ರಿಲ್‌ ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆ ಪ್ರಾರಂಭಗೊಂಡು ಮುಂದಿನ 2-3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಹಿನ್ನೀರನ ಭಾಗದ ಹಳ್ಳಿಗಳ ರಸ್ತೆ, ಸೇತುವೆ ಸೇರಿದಂತೆ ಹಲವು ಗ್ರಾಮಗಳಿಗೂ ಹಾನಿಯಾಗಿದೆ. ಈ ಬಗ್ಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಈ ಭಾಗದ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ಯತೆ ಮೇರೆಗೆ ಈ ಎಲ್ಲಾ ಸವಲತ್ತುಗಳು ಸಿಗಲಿವೆ ಎಂದರು.

ಡ್ಯಾಂ ನಿರ್ಮಾಣಕ್ಕೆ ಹೊಸದುರ್ಗ ತಾಲೂಕಿನ ಜನ ಸರ್ಕಾರ ನೀಡಿದ ಬಿಡಿಕಾಸಿಗೆ 25 ಸಾವಿರ ಎಕರೆ ಕೃಷಿ ಭೂಮಿ, 32 ಗ್ರಾಮಗಳೂ ಸಂಫೂರ್ಣವಾಗಿ ಮುಳುಗಡೆಯಾಗಿವೆ. 18 ಗ್ರಾಮಗಳು ಭಾಗಶಃ ಮುಳುಗಡೆಯಾಗಿವೆ ಆದರೂ ಡ್ಯಾಂನಿಂದ ತಾಲೂಕಿಗಾಗಲೀ, ಹಿನ್ನಿರಿನ ಜನರಿಗಾಗಲೀ ಪ್ರಯೋಜನವಾಗಿಲ್ಲ. ಆದ್ದರಿಂದ ಭದ್ರಾ ಜಲಾಶಯಿಂದ ನೀರಾವರಿ ವಂಚಿತ 29 ಸಾವಿರ ಕೃಷಿಭೂಮಿಗೆ ಹಾಗೂ 19 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯ ಮಂತ್ರಿಗಳ ತಾಂತ್ರಿಕ ಸಲಹೆಗಾರ ಜಯಪ್ರಕಾಶ್‌, ಈ ಬಗ್ಗೆ ನಾನು ಯಾವುದೇ ಆಶ್ವಾಸನೆ ನೀಡಲು ಸಾಧ್ಯವಿಲ್ಲ. ಏಕೆಂದರೆ ನೀರು ಕೊಡಬೇಕೆಂದರೆ ಮೊದಲು ನೀರಿನ ಅಲೋಕೇಶನ್‌ ಆಗಬೇಕು. ಈಗಾಗಲೇ ಅಲೋಕೇಶನ್‌ ಆಗೋಗಿದೆ. ಈ ಬಗ್ಗೆ ಪರಿಶೀಲಸುತ್ತೇನೆ ಎಂದಾಗ ಅಲ್ಲಿಯೇ ಇದ್ದ ಶಾಸಕ ಬಿ.ಜಿ. ಗೋವಿಂದಪ್ಪ ಭದ್ರಾದಿಂದ 1 ಟಿಎಂಸಿ ನೀರು ತಾಲೂಕಿಗೆ ಅಲೋಕೇಶನ್‌ ಆಗಿದೆ ಅದನ್ನು ಬಳಸಿಕೊಂಡು ನೀರು ಹರಿಸಬಹುದು ಎಂದರು. ಅಲೋಕಶನ್‌ ಆಗಿರುವ ಆದೇಶದ ಪ್ರತಿ ಕೊಟ್ಟರೆ ಈ ಬಗ್ಗೆ ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಅಧಿಕಾರಿಗಳ ತಂಡ ಲಕ್ಕಿಹಳ್ಳಿ, ಅತ್ತಿಮಗ್ಗೆ, ಕಾರೇಹಳ್ಳಿ, ಜಿ ಎನ್‌ ಕೆರೆ ಹಾಗೂ ಮತ್ತೋಡು ಗ್ರಾಪಂ ವ್ಯಾಪ್ತಿಯ ಹಿನ್ನಿರಿನ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ವಿಶ್ವೇಶ್ವರಯ್ಯ ಜಲನಿಗಮದ ತಾಂತ್ರಿಕ ಸಲಹೆಗಾರ ನಿವೃತ್ತ ಚೀಫ್‌ ಎಂಜಿನಿಯರ್‌ ಚಲುವರಾಜ್‌ ಹಾಜರಿದ್ದರು.

ತೋಟಗಾರಿಕೆ ಬೆಳೆ ಹಾಕಬೇಡಿ: ಪ್ರತಿ ವರ್ಷ ಭದ್ರಾದಿಂದ ನೀರು ಡ್ಯಾಂಗೆ ಬರುವುದರಿಂದ ಡ್ಯಾಂ ತುಂಬುವುದು ನಿರಂತರವಾಗಿರುತ್ತದೆ. ಒಂದು ವೇಳೆ ಒಂದೆರೆಡು ವರ್ಷ ನೀರು ಬಾರದೆ ತುಂಬದಿದ್ದರೂ ಹಿನ್ನಿರಿನ ಜಾಗದಲ್ಲಿ ಯಾರೂ ತೋಟಗಾರಿಕೆ ಬೆಳೆ ಹಾಕಬೇಡಿ. ತಾತ್ಕಾಲಿಕವಾಗಿ ರಾಗಿ ಜೋಳ ಇಂತಹ ಬೆಳೆಗಳನ್ನು ಬೆಳೆದುಕೊಳ್ಳಿ. ಬೆಳೆ ನೀರು ಬಂದು ಮುಳುಗಡೆಯಾದರೂ ಯಾವುದೇ ಪರಿಹಾರ ಸಿಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ವಿಶ್ವೇಶ್ವರಯ್ಯ ಜಲನಿಗಮದ ಎಂಡಿ ಸಣ್ಣಚಿತ್ತಯ್ಯ ಹೇಳಿದರು.

ಹಿನ್ನೀರಿನ ಮುಳುಗಡೆಯಾಗಿರುವ ರೈತರಿಗೆ ಪರಿಹಾರ ಕುರಿತಂತೆ ಈ ಹಿಂದೆ ಮಹಾರಾಜರ ಕಾಲದಲ್ಲಿಯೇ ಡ್ಯಾಂ ನೀರಿನ ಮಟ್ಟವನ್ನು 130 ಅಡಿಗೆ ನಿಗದಿ ಮಾಡಿ ಈ ವ್ಯಾಪ್ತಿಯಲ್ಲಿ ಬರುವ ಜಮೀನಿಗೆ ಪರಿಹಾರ ನೀಡಲಾಗಿದೆ. ಆದರೂ ಅದಕ್ಕೂ ಮೀರಿ ಮುಳುಗಡೆಯಾಗಿರುವ ರೈತರಿಗೆ ಪರಿಹಾರ ನೀಡಲಾಗುವುದು ಆದರೆ ರೈತರು ಜಮೀನು ನಮ್ಮದು ಎನ್ನುವುದಕ್ಕೆ ಅಧಿಕೃತ ದಾಖಲೆ ಹೊಂದಿರಬೇಕು ಸರ್ಕಾರಿ ಭೂಮಿಯನ್ನು ಉಳುಮೆ ಮಾಡಿಕೊಂಡಿದ್ದರೆ ಅಂತವರಿಗೆ ಪರಿಹಾರ ಸಿಗುವುದಿಲ್ಲ.

ಜಯಪ್ರಕಾಶ್‌ ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ

Share this article