ಕನ್ನಡಪ್ರಭ ವಾರ್ತೆ ಮಂಗಳೂರು
ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ)ಗಳಿಂದ ಕಲುಷಿತ ನೀರು ನದಿಗಳಿಗೆ ಸೇರುತ್ತಿರುವ ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯ ಬಜಾಲ್ ಮತ್ತು ಪಚ್ಚನಾಡಿ ಎಸ್‌ಟಿಪಿಯನ್ನು 45 ಕೋ.ರು. ಮೊತ್ತದಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ತಿಳಿಸಿದ್ದಾರೆ.ಶನಿವಾರ ಲಾಲ್‌ಬಾಗ್‌ನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9.8. ಕಿ.ಮೀ. ಮುಖ್ಯ ಲೈನ್‌ನ ಬದಲಾವಣೆ ಸಹಿತ ವಿವಿಧ ವಿವಿಧ ಕೆಲಸಗಳು ಇದರಲ್ಲಿ ನಡೆಯಲಿದೆ. ಇದರ ಜತೆಗೆ ಅತ್ತಾವರದಲ್ಲಿ ಹೊಸ ವೆಟ್‌ವೆಲ್ ಸ್ಥಾಪನೆ ನಡೆಯಲಿದೆ. ಕುದ್ರೋಳಿ ಕಂಡತ್‌ಪಳ್ಳಿಯಲ್ಲಿ 4 ಕೋ.ರು. ವೆಚ್ಚದಲ್ಲಿ ವೆಟ್‌ವೆಲ್ ನಿರ್ಮಾಣವಾಗಲಿದೆ ಎಂದರು.ಪಾಲಿಕೆ ವ್ಯಾಪ್ತಿಯ ಎಸ್‌ಟಿಪಿಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಕುರಿತಂತೆ ತಯಾರಿಸಿದ ವರದಿಯನ್ನು ಮುಖ್ಯ ಮಂತ್ರಿಯವರಿಗೆ ಸಲ್ಲಿಸಲಾಗಿದೆ. ವಿಧಾನ ಪರಿಷತ್‌ನಲ್ಲಿಯೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಎಸ್‌ಟಿಪಿಗಳ ಖಾಸಗಿ ನಿರ್ವಹಣೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವರು ಮಂಗಳೂರಿಗೆ ಬಂದು ಸಭೆ ನಡೆಸಲಿದ್ದಾರೆ ಎಂದರು.ವಿದ್ಯುತ್ ಚಾಲಿತ ಚಿತಾಗಾರಕ್ಕೆ ಟೆಂಡರ್: ಬಹುಕಾಲದ ಬೇಡಿಕೆಯಾಗಿರುವ ನಂದಿಗುಡ್ಡೆಯಲ್ಲಿ ವಿದ್ಯುತ್ ಚಾಲಿತ ಚಿತಾಗಾರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯಿಂದ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ 4 ಕೋ.ರು. ವೆಚ್ಚದಲ್ಲಿ ಟೆಂಟರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.ಫ್ಲೆಕ್ಸ್ ತೆಗೆಯುತ್ತಿರುವುದು ಶ್ಲಾಘನೀಯ: ನಗರದ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ಗಳನ್ನು ತೆರವು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ನಗದ ಸೌಂದರ್ಯವೂ ಹೆಚ್ಚಾಗುತ್ತಿದೆ. ಕೆಲವು ಸಂದರ್ಭದಲ್ಲಿ ನಮಗೆ ಅರಿವಿಲ್ಲದೆ ನಮ್ಮ ಹೆಸರಿನಲ್ಲಿ ಫ್ಲೆಕ್ಸ್‌ಗಳನ್ನು ಹಾಕುತ್ತಾರೆ. ಇದೀಗ ಅವರಿಗೂ ಗೊತ್ತಾಗಿದ್ದು, ಫ್ಲೆಕ್ಸ್ ಅಳವಡಿಕೆಗೆ ಮುಂದಾಗುತ್ತಿಲ್ಲ. ಮಾಧ್ಯಮಗಳು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕಮಿಷನರೇಟ್ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ಹೆಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಗೋಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಜಾರಿಯಲ್ಲಿದೆ. ಕಾನೂನು ಮೀರಿ ಕೆಲಸ ಮಾಡಲು ಯಾರಿಗೂ ಅವಕಾಶವಿಲ್ಲ. ಅಕ್ರಮಗಳು ನಡೆದಾಗ ತಡೆಯುವುದು ಪೊಲೀಸರ ಕೆಲಸ ಎಂದರು.3.80 ಲಕ್ಷ ರು. ಪರಿಹಾರ ಧನ: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಾನು ಮಾಡಿದ ಶಿಫಾರಸಿನ ಮೇರೆಗೆ ವಿವಿಧ ಕಾಯಿಲೆಯಿಂದ ಬಳಲುತ್ತಿರುವ 12 ಮಂದಿ ಅರ್ಜಿದಾರರಿಗೆ ಒಟ್ಟು 3,80,664 ರು. ಪರಿಹಾರ ಧನ ಬಿಡುಗಡೆಯಾಗಿದೆ ಎಂದರು. ಪರಿಹಾರ ಧನ ಬಿಡುಗಡೆಯ ಪತ್ರವನ್ನು ಐವನ್ ಡಿಸೋಜಾ ಅವರು ಫಲಾನುಭವಿಗೆಗಳಿಗೆ ವಿತರಿಸಿದರು.ಮುಖಂಡರಾದ ಭಾಸ್ಕರ್ ರಾವ್, ಸತೀಶ್ ಪೆಂಗಾಲ್, ವಿಕಾಸ್ ಶೆಟ್ಟಿ, ಹೇಮಂತ್ ಗರೋಡಿ, ಇಮ್ರಾನ್ ಎ.ಆರ್., ಪ್ರೇಮ್ ಬಳ್ಳಾಲ್‌ಬಾಗ್ ಇದ್ದರು.