ಹುಬ್ಬಳ್ಳಿ: ಶಾಸಕ ಮಹೇಶ ಟೆಂಗಿನಕಾಯಿ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ನಗರದಲ್ಲಿ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು.
ರಕ್ತದಾನ ಶಿಬಿರದಲ್ಲಿ ನೂರಾರು ಜನರು ಆಗಮಿಸಿ, ರಕ್ತದಾನ ಮಾಡಿದರು. ನಂತರ ನಡೆದ ಕಾರ್ಯಕ್ರಮಗಳಲ್ಲಿ ವಿಕಲಚೇತನರಿಗೆ ಶಾಸಕ ಮಹೇಶ ಟೆಂಗಿನಕಾಯಿ ಅವರು ಉಚಿತ ಕೃತಕ ಕಾಲು ಜೋಡಣಾ ಶಿಬಿರಕ್ಕೆ ಚಾಲನೆ ನೀಡಿದರು. 10ಕ್ಕೂ ಅಧಿಕ ವಿಕಲಚೇತನರಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು. ಮೂರು ಸಾವಿರಮಠದ ಪೀಠಾಧ್ಯಕ್ಷರಾದ ಡಾ. ಗುರುಸಿದ್ಧರಾಜಯೋಗೀಂದ್ರ ಶ್ರೀಗಳ ತುಲಭಾರವನ್ನು ಟೆಂಗಿನಕಾಯಿ ನೆರವೇರಿಸಿದರು. ಇದೇ ವೇಳೆ ಶ್ರೀಗಳು ಶಾಸಕರನ್ನು ಆಶೀರ್ವದಿಸುವ ಮೂಲಕ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾಜಿ ಮೇಯರ್ ವೀರಣ್ಣ ಸವಡಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಯುವ ಮುಖಂಡ ವೆಂಕಟೇಶ ಕಾಟವೆ, ವಿನೋದಕುಮಾರ ಪಿ. ಪಟವಾ ಸೇರಿದಂತೆ ಅನೇಕ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.