ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ: ವಿಚಾರಣೆಗೆ ಹಾಜರಾದ ತೆನ್ನೀರಾ ಮೈನಾ

KannadaprabhaNewsNetwork | Published : May 11, 2025 11:46 PM
Follow Us

ಸಾರಾಂಶ

ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೆನ್ನೀರಾ ಮೈನಾ ವಿಚಾರಣೆಗೆ ಹಾಜರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೆನ್ನೀರಾ ಮೈನಾ ವಿಚಾರಣೆಗೆ ಹಾಜರಾಗಿದ್ದಾರೆ.

ಏಪ್ರಿಲ್ 4 ರಂದು ಬೆಂಗಳೂರಿನಲ್ಲಿ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೆಣ್ಣೂರು ಠಾಣೆಗೆ ಹಾಜರಾಗಿ ತೆನ್ನೀರಾ ಮೈನಾ ವಿಚಾರಣೆ ಎದುರಿಸಿದ್ದಾರೆ.

ಭಾರೀ ವಿವಾದ ಸೃಷ್ಟಿಸಿದ್ದ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ ಹಲವರು ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಭಾರಿ ಪ್ರತಿಭಟನೆ ಬಳಿಕ ತೆನ್ನೀರಾ ಮೈನಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲದಿರುವ ಬಗ್ಗೆ ಸೂಕ್ತ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರು ಪ್ರಕರಣದ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಮತ್ತು ವಿಚಾರಣೆಗೆ ಅಗತ್ಯ ಕಂಡು ಬಂದಲ್ಲಿ ಹಾಜರಾಗುವಂತೆ ತೆನ್ನಿರ ಮೈನಾ ಅವರಿಗೆ ಸೂಚಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ವಿನಯ್ ಮೊಬೈಲ್ ನಲ್ಲಿ ತನ್ನ ಆತ್ಮಹತ್ಯೆಗೆ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ, ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ ಮಂತರ್ ಗೌಡ ರವರ ಮತ್ತು ಇತರರ ಒತ್ತಡ ಕಾರಣ ಎಂದು ವಾಕ್ಯ ಸಂದೇಶ ರಚನೆಯಾಗಿ ಫಾರ್ವರ್ಡ್ ಆದ ಹಿನ್ನಲೆ ರಾಜ್ಯ ಬಿಜೆಪಿ ಮುಖಂಡರು ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು.

ನಂತರ ಹೆಣ್ಣೂರು ಠಾಣೆಯಲ್ಲಿ ತೆನ್ನಿರ ಮೈನಾ ಮತ್ತು ಇತರರ ವಿರುದ್ಧ ಮೃತ ವಿನಯ್ ಸಹೋದರ ಜೀವನ್ ರವರು ದೂರು ದಾಖಲಿಸಿ ಎಫ್ ಐ ಆರ್ ಆಗಿತ್ತು. ವಿನಯ್ ಸೋಮಯ್ಯ ನವರು ತಮ್ಮ ಪತ್ನಿಗೆ ಬರೆದಿರುವ ಪತ್ರವೊಂದು ವೈರಲ್ ಆಗಿ ಪ್ರಕರಣಕ್ಕೆ ತಿರುವು ನೀಡಿತ್ತು. ಪತ್ನಿಗೆ ಬರೆದ ಪತ್ರದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ತಾನು ಕಂಡ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಕ್ಷಮಿಸು ಎಂದು ಬರೆದಿದ್ದರು.

ನಂತರ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ತೆನ್ನಿರ ಮೈನಾ ಅವರ ವಿಚಾರಣೆ ನಡೆಸಿದ್ದಾರೆ. ವಿನಯ್ ಸೋಮಯ್ಯ ತಮಗೆ ಅಪರಿಚಿತ ವ್ಯಕ್ತಿಯಾಗಿದ್ದು ಅವರೊಂದಿಗೆ ಯಾವುದೇ ಪ್ರತ್ಯಕ್ಷ ಹಾಗೂ ಪರೋಕ್ಷ ಮಾತುಕತೆ ಹಾಗೂ ಸಂಬಂಧಗಳನ್ನು ತಾವು ಹೊಂದಿಲ್ಲ ಎಂದು ತೆನ್ನಿರ ಮೈನಾ ಸ್ಪಷ್ಟಪಡಿಸಿದ್ದರು.