ಬಾಟಂ.. ಕಾಮನ್‌ ಪುಟಕ್ಕೆ,ಉದ್ವಿಗ್ನಗೊಂಡಿದ್ದ ಉದಯಗಿರಿಯಲ್ಲಿ ಈಗ ಬೂದಿಮುಚ್ಚಿದ ಕೆಂಡದ ಪರಿಸ್ಥಿತಿ!

KannadaprabhaNewsNetwork |  
Published : Feb 12, 2025, 12:36 AM IST
10 | Kannada Prabha

ಸಾರಾಂಶ

ಈ ಕಲ್ಲು ತೂರಾಟದಲ್ಲಿ ಡಿಸಿಪಿ ಎಂ. ಮುತ್ತುರಾಜು, ಎಸಿಪಿ ಶಾಂತಮಲ್ಲಪ್ಪ, ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಸೇರಿದಂತೆ 7 ಜನ ಪೊಲೀಸರಿಗೆ ಕಲ್ಲು ತಾಗಿ ಸಣ್ಣಪುಟ್ಟ ಗಾಯವಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಅವಹೇಳನಕಾರಿ ಪೋಸ್ಟ್ ನಿಂದ ಉದ್ವಿಗ್ನಗೊಂಡಿದ್ದ ಮೈಸೂರಿನ ಉದಯಗಿರಿ ಶಾಂತವಾಗಿ ಸಹಜ ಸಿತ್ಥಿಗೆ ಮರಲಿದ್ದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿಚಾರದಿಂದ ಸಂಬಂಧಿಸಿದಂತೆ ಉದಯಗಿರಿ ಠಾಣೆ ಎದುರು ಸೋಮವಾರ ರಾತ್ರಿ ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನಗೊಂಡಿತ್ತು. ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ನಡೆಸಿ ನೆರೆದಿದ್ದವರನ್ನು ಚದುರಿಸಿದರು.

ಈ ಕಲ್ಲು ತೂರಾಟದಲ್ಲಿ ಡಿಸಿಪಿ ಎಂ. ಮುತ್ತುರಾಜು, ಎಸಿಪಿ ಶಾಂತಮಲ್ಲಪ್ಪ, ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಸೇರಿದಂತೆ 7 ಜನ ಪೊಲೀಸರಿಗೆ ಕಲ್ಲು ತಾಗಿ ಸಣ್ಣಪುಟ್ಟ ಗಾಯವಾಗಿದೆ. ಎಲ್ಲರೂ ಸ್ಥಳೀಯ ಆಸ್ಪತ್ರೆ ಚಿಕಿತ್ಸೆ ಪಡೆದು, ಕರ್ತವ್ಯಕ್ಕೆ ಮರಳಿದ್ದಾರೆ. ಅಲ್ಲದೆ, ಡಿಸಿಪಿ ಕಾರು ಸೇರಿದಂತೆ 10 ಹೆಚ್ಚು ವಾಹನಗಳ ಗಾಜು ಪುಡಿ ಪುಡಿಯಾಗಿದೆ.

ಬೂದಿ ಮುಚ್ಚಿದ ಕೆಂಡಂತಾಗಿರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಖಾಕಿ ಪಡೆ ಕಣ್ಗಾವಲು ಇರಿಸಲಾಗಿದೆ.

ಠಾಣೆಗೆ ಸಂಪರ್ಕವಿರುವ ಮಹದೇವಪುರ ಮುಖ್ಯರಸ್ತೆಯಲ್ಲಿ ಪೊಲೀಸರು ಗಸ್ತು ಮಾಡಿ, ಅಂಗಡಿ ಮುಗ್ಗಟ್ಟುಗಳ ಬಾಗಿಲು ಹಾಕಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಉದಯಗಿರಿ ಠಾಣೆ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಪ್ರತಿಭಟನಾ ನಿರತರನ್ನು ಚದುರಿಸಿದ ಬಳಿ ಪರಿಸ್ಥಿತಿ ಸಹಜವಾಗುತ್ತಿದ್ದಂತೆ ಠಾಣೆ ಆವರಣ ಸೇರಿದಂತೆ ಸುತ್ತಲಿನ ರಸ್ತೆಗಳಲ್ಲಿ ಪರಿಶೀಲನಾ ಕಾರ್ಯ ನಡೆಸಿದ ಪೊಲೀಸರು, ಕಲ್ಲು ತೂರಾಟದ ವೇಳೆ ರಾಶಿಯಾಗಿ ಬಿದ್ದಿದ್ದ ಕಲ್ಲುಗಳನ್ನು ಚೀಲದಲ್ಲಿ ಸಂಗ್ರಹಿಸಿದರು. ಜೊತೆಗೆ ಪೊಲೀಸ್ ವಾಹನಗಳ ಮೇಲೂ ಬಿದ್ದ ಕಲ್ಲುಗಳನ್ನು ಮಹಜರು ನಡೆಸಿ ವಶಪಡಿಸಿಕೊಂಡರು. ರಸ್ತೆಗಳಲ್ಲಿ ಬಿದ್ದಿದ್ದ ಚಪ್ಪಲಿಗಳನ್ನು ಪೌರಕಾರ್ಮಿಕರು ತೆರವುಗೊಳಿಸಿದರು.

ಅಂಗಡಿಗಳು ಬಂದ್

ಮಂಗಳವಾರ ಬೆಳಿಗ್ಗೆ ಪೊಲೀಸರು ಹೈ ಅಲರ್ಟ್ ಆಗಿ ಮಹದೇವಪುರ ಮುಖ್ಯ ರಸ್ತೆಯಲ್ಲಿ ಸಿಎಆರ್, ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಿದರಲ್ಲದೆ, ಕಮಾಂಡೋ ಪಡೆಗೆ ಗಸ್ತು ಮಾಡಲು ತಿಳಿಸಿ ಅಂಗಡಿ ಮುಗ್ಗಟ್ಟುಗಳ ಬಾಗಿಲು ಹಾಕಿಸಿದರು.

ಒಬ್ಬೊಬ್ಬರಾಗಿ ಬಂದು ಸೇರುತ್ತಿದ್ದವರನ್ನು ಗುರುತಿಸಿ ವಾಪಸ್ ಕಳುಹಿಸುವ ಕೆಲಸ ಮಾಡಿದರಲ್ಲದೆ, ವಾಹನಗಳು ಓಡಾಡದಂತೆ ಬ್ಯಾರಿಕೇಡ್‌ ಗಳನ್ನು ರಸ್ತೆಗೆ ಅಡ್ಡಲಾಗಿ ಹಾಕಲಾಗಿತ್ತು.

ಎಡಿಜಿಪಿ ಭೇಟಿ- ಸಭೆ

ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಅವರು ಉದಯಗಿರಿ ಠಾಣೆಯಲ್ಲಿ ಪರಿಸ್ಥಿತಿಯ ಅವಲೋಕನ ಮಾಡಿ ರಾತ್ರಿ ಘಟನೆಯ ಬಗ್ಗೆ ಮಾಹಿತಿ ಪಡೆದು ಕೊಂಡರು.

ಆರೋಪಿ ಬಂಧಿಸಿದ ಮೇಲೂ ಜನರು ಗುಂಪು ಗೂಡಿ ಕಲ್ಲುತೂರಾಟ ಮಾಡಿರುವ ವಿಚಾರದಲ್ಲಿ ಸಂಪೂರ್ಣ ಮಾಹಿತಿ ಪಡೆದು ಅಧಿಕಾರಿಗಳಿಗೆ ಧೈರ್ಯ ತುಂಬಿದರು. ನಂತರ, ಐಜಿಪಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಮಹತ್ವದ ಸಭೆ ನಡೆಸಿ ಆರೋಪಿಗಳನ್ನು ಬಂಧಿಸಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಸೂಚಿಸಿದರು.

ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ಕಲ್ಲು ತೂರಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಎ. ಮಾರುತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.

-----

ಎರಡು ಪ್ರಕರಣ ದಾಖಲು- ಆರೋಪಿ ಬಂಧನ

ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಕಲ್ಯಾಣಗಿರಿಯ ನಿವಾಸಿ ಸತೀಶ್ ಅ. ಪಾಂಡುರಂಗ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದೇ ವಿಚಾರವಾಗಿ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

ಹೊಸ ದಿಲ್ಲಿಯಲ್ಲಿ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವಿಚಾರ ವೈರಲ್ ಆಗುತ್ತಿದ್ದಂತೆ ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಸತೀಶ್ ನನ್ನು ಬಂಧಿಸಿದ್ದರು. ಆದರೆ ಆತನಿಗೆ ನ್ಯಾಯಾಲಯದಲ್ಲಿ ಜಾಮೀನು ಬೇಗನೆ ದೊರೆಯಲಿದ್ದು, ಪೊಲೀಸರೇ ಸಹಕಾರ ನೀಡಲಿದ್ದಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಸಾವಿರಾರು ಜನರು ಸೋಮವಾರ ರಾತ್ರಿ ಉದಯಗಿರಿ ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ದುಷ್ಕರ್ಮಿಗಳು ಏಕಾ ಏಕಿ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ಘಗೊಂಡಿತ್ತು. ಪೊಲೀಸರು ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ನಂತರ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ಕರೆಯಿಸಿಕೊಂಡು ಬಂದೋಬಸ್ತ್ ಮಾಡಿ ನೆರೆದಿದ್ದವರನ್ನು ಖಾಲಿ ಮಾಡಿಸಿದ್ದರು.

-----

ಯಾಕೆ ಗಲಾಟೆ?

ಸಂಸದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಭಾವಚಿತ್ರಗಳನ್ನು ವಿವಸ್ತ್ರಗೊಳಿಸಿ, ತಲೆ ಮೇಲೆ ಮುಸ್ಲಿಂ ಸಮುದಾಯ ಬಳಸುವ ಟೋಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲವು ಪದಗಳನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದೇ ಮುಸ್ಲಿಂ ಸಮುದಾಯ ಉದ್ವಿಗ್ನಗೊಳ್ಳಲು ಕಾರಣವಾಗಿದೆ.

-----

ಸಿಸಿಬಿ ಪೊಲೀಸರಿಂದ ತನಿಖೆ

ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.

ಕಲ್ಲು ತೂರಾಟ ಸಂಬಂಧ ಉದಯಗಿರಿ ಠಾಣೆಯಲ್ಲಿ‌ಎಫ್‌ಐಆರ್ ದಾಖಲಾಗಿದ್ದು, ತನಿಖೆಯನ್ನು ಸಿಸಿಬಿ ಘಟಕಕ್ಕೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ವಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳನ್ನು ಸಿಸಿಬಿ, ಟೆಕ್ನಿಕಲ್ ಟೀಂ, ಸೆನ್ ವಿಭಾಗ ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ