ಎಂ.ಕೆ.ಹರಿಚರಣ್ ತಿಲಕ್ ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಭೀಕರ ವಿದ್ಯುತ್ ಕ್ಷಾಮದಿಂದ ತಾಲೂಕಿನಲ್ಲಿ ಮಳೆ ಆಶ್ರಿತ ಮತ್ತು ಅರೆ ನೀರಾವರಿಗೆ ಒಳಪಟ್ಟಿರುವ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ತಾಲೂಕಿನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಕೃಷಿ ಪಂಪ್ ಸೆಟ್ಟುಗಳಿದ್ದು, ರೈತರ ಕೃಷಿ ಚಟುವಟಿಕೆ ವಿದ್ಯುತ್ ಆಧರಿಸಿಯೇ ನಡೆಯುತ್ತಿದೆ. ಮಂದಗೆರೆ ಮತ್ತು ಹೇಮಗಿರಿ ನಾಲಾ ವ್ಯಾಪ್ತಿ ಕಾಲುವೆಗಳಲ್ಲಿಯೂ ಸಮರ್ಪಕ ನೀರು ಹರಿಯದ ಕಾರಣ ನೀರಾವರಿ ಪ್ರದೇಶದ ರೈತರೂ ಪಂಪ್ ಸೆಟ್ ಆಧಾರಿತ ಕೃಷಿಯ ಕಡೆ ಮುಖ ಮಾಡಿದ್ದಾರೆ.
ಕೊಳವೆ ಬಾವಿಗಳನ್ನು ಆಧರಿಸಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ಕಬ್ಬು, ತೆಂಗು, ಅಡಿಕೆ, ಬಾಳೆ, ಶುಂಠಿಯಂತಹ ವಾಣಿಜ್ಯ ಬೇಸಾಯದ ಜೊತೆಗೆ ಪುಷ್ಪ ಕೃಷಿಯನ್ನೂ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಬಿರು ಬೇಸಿಗೆ ಆರಂಭಗೊಂಡು ಬರಿಗಾಲಲ್ಲಿ ನಡೆಯಲಾರದಷ್ಟು ಭೂಮಿ ಬಿಸಿಯಾಗಿದೆ. ಇದರಿಂದ ದಿಢೀರ್ ಕಾಣಿಸಕೊಂಡಿರುವ ವಿದ್ಯುತ್ ಕ್ಷಾಮ ರೈತರ ಗಾಯದ ಮೇಲೆ ಬರೆ ಎಳೆದಿದೆ.ವಿದ್ಯುತ್ ಇಲಾಖೆ ನಿಯಮಾನುಸಾರ ರೈತರ ಕೃಷಿ ಚಟುವಟಿಕೆಗೆ ನಿತ್ಯ ಹಗಲು 4 ಗಂಟೆ ಹಾಗೂ ರಾತ್ರಿ 1 ಗಂಟೆ ಕಾಲ ಸೇರಿ ಒಟ್ಟು 5 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, ರೈತರಿಗೆ ನಿತ್ಯ 1 ಗಂಟೆ ಕಾಲವೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೃಷಿ ಭೂಮಿಗೆ ಪೂರೈಕೆಯಾಗುತ್ತಿರುವ ವಿದ್ಯುತ್ ಗೆ ಸಮಯ ನಿಗದಿಯಾಗಿಲ್ಲ. ಕರೆಂಟ್ ಬಂದಿದೆ ಎಂದು ರೈತರು ತಮ್ಮ ಜಮೀನಿಗೆ ಹೋಗುವಷ್ಟರಲ್ಲಿ ಮತ್ತೆ ಕರೆಂಟ್ ತೆಗೆದಿರುತ್ತಾರೆ. ವಿದ್ಯುತ್ ಕಣ್ಣಾ ಮುಚ್ಚಾಲೆ ಆಟದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾತ್ರಿ ವೇಳೆ ಚಿರತೆ, ಕಾಡು ಹಂದಿಗಳಂತಹ ಕಾಡು ಪ್ರಾಣಿಗಳ ಕಾಟ ತೀವ್ರವಾಗಿದೆ. ರೈತರು ತಮ್ಮ ಹೊಲ ಗದ್ದೆಗಳಿಗೆ ಹೋಗಲಾರದ ಪರಿಸ್ಥಿತಿ ಎದುರಾಗಿದೆ. ಜೀವ ಭಯದ ನಡುವೆಯೂ ತಮ್ಮ ಬೆಳೆ ರಕ್ಷಿಸಿಕೊಳ್ಳಲು ಹೋರಾಟ ಮಾಡುತ್ತಿರುವ ರೈತ ಸಮುದಾಯಕ್ಕೆ ವಿದ್ಯುತ್ ಕ್ಷಾಮ ಬರ ಸಿಡಿಲಿನಂತೆ ಬಡಿದಿದೆ.ರಾಜ್ಯ ಸರ್ಕಾರ ರೈತರಿಗೆ ಹಗಲು 4 ಗಂಟೆ ಮತ್ತು ರಾತ್ರಿ 3 ಗಂಟೆ ಕಾಲ ನಿತ್ಯ ಸಮರ್ಪಕ ವಿದ್ಯುತ್ ನೀಡುವ ವಾಗ್ದಾನ ಮಾಡಿತ್ತು. ತನ್ನ ವಾಗ್ದಾನ ಮರೆತು ಸರ್ಕಾರ ನಂತರ ಹಗಲು 4 ಗಂಟೆ ಹಾಗೂ ರಾತ್ರಿ 1 ಗಂಟೆ ಸೇರಿ ನಿತ್ಯ 5 ತಾಸು ವಿದ್ಯುತ್ ಪೂರೈಕೆ ಮಾಡುತ್ತಿತ್ತು. ಈಗ ತನ್ನ ವಿದ್ಯುತ್ ಪೂರೈಕೆ ನೀತಿಯನ್ನೆು ಮರೆತು 1ಗಂಟೆಯಾದರೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗದ ಸ್ಥಿತಿಗೆ ತಲುಪಿದೆ.
ತಾಲೂಕಿನಲ್ಲಿ ಸೆಸ್ಕಾಂ ಸಂಪೂರ್ಣ ನಿಷ್ಕ್ರಿಯವಾಗಿದೆ. ವಿದ್ಯುತ್ ಅಭಾವದಿಂದ ರೈತರ ಕೃಷಿ ಚಟುವಟಿಕೆಗಳ ಜೊತೆಗೆ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಮೇಲೂ ದುಷ್ಪರಿಣಾಮ ಬೀರಿದೆ. ತಾಲೂಕಿನಲ್ಲಿ ಉಂಟಾಗಿರುವ ವಿದ್ಯುತ್ ಬರಗಾಲವನ್ನು ತಪ್ಪಿಸಿ ರೈತರಿಗೆ ನೀಡಿದ ವಚನದಂತೆ ನಿತ್ಯ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ರೈತ ಸಮುದಾಯದಿಂದ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಗುಂಗಿನಿಂದ ಹೊರಬಂದು ರೈತರ ಬದುಕಿನ ಬಗ್ಗೆ ಚಿಂತನೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಕ್ಷಣವೇ ಸೆಸ್ಕಾಂ ಅಧಿಕಾರಿಗಳ ತುರ್ತು ಸಭೆ ನಡೆಸಿ ರೈತರ ಬೆಳೆ ಸಂರಕ್ಷಣೆಗೆ ಮುಂದಾಗಬೇಕು.
- ಎಂ.ವಿ.ರಾಜೇಗೌಡ, ರೈತ ಸಂಘದ ಮಾಜಿ ಅಧ್ಯಕ್ಷರುಕೃಷಿ ಪಂಪ್ ಸೆಟ್ ಆಧರಿಸಿ ಸಾವಿರಾರು ರೈತರು ಬೆಳೆ ಬೆಳೆದಿದ್ದಾರೆ. ವಿದ್ಯುತ್ ಇಲಾಖೆ ನಿಯಮಾನುಸಾರ ರಾಜ್ಯ ಸರ್ಕಾರ ನೀಡಿದ ವಾಗ್ದಾನದಂತೆ ನಿತ್ಯ ಹಗಲು 4 ಗಂಟೆ ಹಾಗೂ ರಾತ್ರಿ 1 ಗಂಟೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಆದರೆ, ನಿತ್ಯ 1 ಗಂಟೆ ಕಾಲವೂ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಜಮೀನಿನಲ್ಲಿ ಬೆಳೆದ ಬೆಳೆಗಳು ಒಣಗುತ್ತಿವೆ.- ದಿನೇಶ್, ರೈತರು, ಮೊಸಳೆಕೊಪ್ಪಲು