ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಆತಂಕಕಾರಿ: ಬೊಮ್ಮಾಯಿ

KannadaprabhaNewsNetwork |  
Published : Mar 24, 2024, 01:37 AM IST
೨೩ಬಿಹೆಚ್‌ಆರ್ ೪: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರ ಪ್ರಜ್ಞೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಎಸ್.ಬೊಮ್ಮಾಯಿ ಉದ್ಘಾಟಿಸಿದರು. ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು. | Kannada Prabha

ಸಾರಾಂಶ

ಯಾವ ಧರ್ಮ ಸಮಾಜಕ್ಕೆ, ಮನುಷ್ಯನಿಗೆ ಸುಖ, ಶಾಂತಿ ನೀಡಬೇಕೋ ಅದರಿಂದಲೇ ಇಂದು ಭಯೋತ್ಪಾದನೆ ನಡೆಯುತ್ತಿದ್ದು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಎಸ್.ಬೊಮ್ಮಾಯಿ ಹೇಳಿದರು

ಜಗದ್ಗುರು ರೇಣುಕಾಚಾರ್ಯ ಜಯಂತಿ । ಯುಗಮಾನೋತ್ಸವದಲ್ಲಿ ಅಭಿಮತ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಯಾವ ಧರ್ಮ ಸಮಾಜಕ್ಕೆ, ಮನುಷ್ಯನಿಗೆ ಸುಖ, ಶಾಂತಿ ನೀಡಬೇಕೋ ಅದರಿಂದಲೇ ಇಂದು ಭಯೋತ್ಪಾದನೆ ನಡೆಯುತ್ತಿದ್ದು, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಎಸ್.ಬೊಮ್ಮಾಯಿ ಹೇಳಿದರು.

ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಶನಿವಾರ ನಡೆದ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರ ಪ್ರಜ್ಞೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜಗತ್ತಿನ ಎಲ್ಲ ಕಡೆಗಳಲ್ಲಿ ಭಯೋತ್ಪಾದನೆ ನಿರಂತರವಾಗಿ ನಡೆಯುತ್ತಿದೆ. ಭಯೋತ್ಪಾದನೆ ಮನಃ ಪರಿವರ್ತನೆಯಿಂದ ಮಾತ್ರ ನಿಲ್ಲಿಸಲು ಸಾಧ್ಯ. ಧರ್ಮದ ಹಾದಿಯಲ್ಲಿ ನಿಷ್ಠೆಯಿಂದ ನಡೆದರೆ ಮಾತ್ರ ಭಯೋತ್ಪಾದನೆಗೆ ಕಡಿವಾಣ ಹಾಕಲು ಸಾಧ್ಯವಿದೆ. ನಮ್ಮ ನಡುವೆ ಇಂದು ಇರುವುದು ನಾಗರಿಕತೆ, ನಾವು ಏನಾಗಿದ್ದೇವೋ ಅದು ಸಂಸ್ಕೃತಿಯಾಗಿದೆ. ಆತ್ಮಸಾಕ್ಷಿ ಹಾಗೂ ಮುಗ್ಧತೆಯಿಂದ ನಡೆದುಕೊಳ್ಳುವುದು ಬಹಳ ಕಷ್ಟ. ಇವು ಎರಡನ್ನು ಯಾರು ಅಳವಡಿಸಿಕೊಂಡು ಸಾಧನೆ ಮಾಡುತ್ತಾರೋ ಅವರೇ ನಿಜವಾದ ಮಾನವನಾಗಲಿದ್ದಾನೆ. ಇದನ್ನು ಮನಗಂಡೇ ಜಗದ್ಗುರು ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಶಾಂತಿ ಮಂತ್ರ ಹೇಳಿದ್ದಾರೆ. ರಂಭಾಪುರಿ ಜಗದ್ಗುರುಗಳ ನುಡಿಯಂತೆ ಸಾಹಿತ್ಯವಿಲ್ಲದೇ ಸಂಸ್ಕೃತಿಯಿಲ್ಲ. ನಮ್ಮನ್ನು ಎಚ್ಚರಿಸುವ ಸಾಹಿತ್ಯ ಹೆಚ್ಚು ರಚನೆ ಯಾಗಬೇಕಿದ್ದು, ತಂತ್ರಜ್ಞಾನ, ವಿಜ್ಞಾನದ ಮೂಲ ಜ್ಞಾನವಾಗಿದೆ. ಧ್ಯಾನ-ಜ್ಞಾನ ಇವುಗಳನ್ನು ಗುರುಗಳು ನಮಗೆ ಹೇಳಿ ಕೊಟ್ಟಿದ್ದು, ಇವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಹಿತ್ಯ, ಸಂಸ್ಕೃತಿ ಬೆಳೆಯಲು ಸಾಧ್ಯವಿದೆ ಎಂದರು.ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ ವೀರಶೈವರ ವೈಶಿಷ್ಟ್ಟತೆಯಾಗಿದ್ದು ಇದಾವುದು ಇಲ್ಲದೇ ವೀರಶೈವರು ಇಲ್ಲ. ವೀರಶೈವ ಎಂದರೆ ಭಕ್ತಿಯಲ್ಲಿ, ಬದುಕಿನಲ್ಲಿ ವೀರರಾಗಿರುವುದು. ವೀರಶೈವ ನಿತ್ಯ ಬದುಕಿನಲ್ಲಿ ನಮ್ಮ ಧರ್ಮದ ಕ್ರಮ ಗಳನ್ನು ಇಟ್ಟುಕೊಳ್ಳುತ್ತಾರೆ. ಇದರಿಂದಾಗಿ ವೀರಶೈವ ಶ್ರೇಷ್ಠ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಹುಟ್ಟಿದ ಎಲ್ಲರೂ ಸಮಾನರು. ಜಾತಿ, ಮತ, ಪಂಥ ಬೇಧವಿಲ್ಲ. ಸಾವಿನ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ, ಖಚಿತತೆ ಯಾರಿಗೂ ಇರುವುದಿಲ್ಲ. ನಮ್ಮ ಕೈಯಲ್ಲಿ ಕೇವಲ ಬದುಕು ಮಾತ್ರವಿದ್ದು ಇದರ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಕೇವಲ ಕಾಮ, ಕ್ರೋಧ, ಮದ, ಮತ್ಸರಗಳ ನಡುವೆ ಇರುವ ಮನುಷ್ಯರು. ಪ್ರೀತಿ, ವಿಶ್ವಾಸ, ಕರುಣೆ ಬೆಳೆಸಿಕೊಂಡರೆ ಅವರೇ ನಿಜವಾದ ಮಾನವರಾಗಲಿದ್ದಾರೆ.

ಮಾನವ ಬದುಕಿನಲ್ಲಿ ಸಾಧನೆ ಮಾಡಲು ತತ್ವ, ನೀತಿ ಇಟ್ಟುಕೊಂಡು ಹೋಗಬೇಕು. ತತ್ವ, ನೀತಿಗೆ ಕೇವಲ ಗುರುವಿನಿಂದ ಸಂಸ್ಕಾರ ದೊರೆಯಲು ಸಾಧ್ಯವಿದೆ. ಸಂಸ್ಕಾರ ಪಡೆಯಲು ಪರಿಶುದ್ಧ ಭಕ್ತಿ ಮಾರ್ಗ ಬೇಕಿದೆ. ಗುರುವಿನಲ್ಲಿ ನಿಜವಾದ ಭಕ್ತಿ ಹೊಂದಿದಾಗ ಮಾತ್ರ ಆಶೀರ್ವಾದ ದೊರೆಯಲಿದೆ. ಇದು ದೇಶದ ಆಧಾರ. ಸಂಸ್ಕಾರಯುತವಾದ ಶಕ್ತಿ ನಮ್ಮ ದೇಶದಲ್ಲಿದೆ. ಸಂಸ್ಕೃತಿ, ಸಂಸ್ಕಾರದಿಂದ ಹಿರಿಯರಲ್ಲಿ ಗೌರವ, ಅನುಕಂಪ, ಪ್ರೀತಿ, ವಿಶ್ವಾಸ ಬರಲಿದೆ ಎಂದರು.೨೩ಬಿಹೆಚ್‌ಆರ್ ೪:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ದಲ್ಲಿ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರ ಪ್ರಜ್ಞೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಎಸ್.ಬೊಮ್ಮಾಯಿ ಉದ್ಘಾಟಿಸಿದರು. ರಂಭಾಪುರಿ ಜಗದ್ಗುರುಗಳು ಸಾನ್ನಿಧ್ಯ ವಹಿಸಿದ್ದರು.--- ಬಾಕ್ಸ್--

ಯುವ ಜನಾಂಗದಲ್ಲಿ ಧರ್ಮ ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಲಿ : ರಂಭಾಪುರಿ ಶ್ರೀ

ಬಾಳೆಹೊನ್ನೂರು: ಬೆಳೆಯುತ್ತಿರುವ ಯುವ ಜನಾಂಗ ಈ ದೇಶದ ಅಮೂಲ್ಯ ಆಸ್ತಿ. ಅವರಿಗೆ ಯೋಗ್ಯ ಸಂಸ್ಕಾರ ಮತ್ತು ಆದರ್ಶ ಕಲಿಸಿಕೊಡುವ ಅಗತ್ಯವಿದೆ. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಜಾಗೃತಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶನಿವಾರ ನಡೆದ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ-ರಾಷ್ಟ್ರ ಪ್ರಜ್ಞೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಮನುಷ್ಯ ದೊಡ್ಡವ ನೆಂದೆನಿಸಿಕೊಳ್ಳಲಾರ. ದೊಡ್ಡ ಮನಸ್ಸು ಗುಣಗಳಿಂದ ದೊಡ್ಡವರಾಗಲು ಸಾಧ್ಯ. ಯುವ ಜನಾಂಗ ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಸದೃಢ ಸೂಕ್ತ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ಅದ್ಭುತ ಸಾಧನೆ ಮಾಡಲು ಸಾಧ್ಯ.

ಬದುಕಿನ ಯಾವ ದಿನವೂ ವ್ಯರ್ಥವಲ್ಲ. ಒಳ್ಳೆಯ ದಿನಗಳಿಂದ ಸಂತೋಷ ಸಿಗುತ್ತದೆ. ಕೆಟ್ಟ ದಿನಗಳಿಂದ ಅನುಭವ ಸಿಗುತ್ತದೆ. ವಿದ್ಯೆ ಕಲಿತ ನಂತರ ಗುರು ಸಂಪತ್ತು ಬಂದಾಗ ಸ್ನೇಹ, ಹೆಂಡತಿ ಬಂದಾಗ ಹೆತ್ತವರನ್ನು ಎಂದಿಗೂ ಮರೆಯಬಾರದು. ಸಮಾಜದಲ್ಲಿ ಗೌರವ ಘನತೆ ಪ್ರಾಪ್ತವಾದ ದಿನಗಳಲ್ಲಿ ನಡೆದು ಬಂದ ದಾರಿಯನ್ನು ಮರೆಯಬಾರದು. ಕಾಲಿಗೆ ಆದ ಗಾಯ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ಶ್ವಾಸ ಇದ್ದರೆ ಬದುಕು. ಶ್ವಾಸ ಇಲ್ಲದಿದ್ದರೆ ಜೀವನ ಮುಗಿಯುತ್ತದೆ. ವಿಶ್ವಾಸವಿದ್ದರೆ ಸಂಬಂಧ. ಇಲ್ಲದಿದ್ದರೆ ನಾಶಗೊಳ್ಳುತ್ತವೆ. ಆದ್ದರಿಂದ ಯುವ ಜನಾಂಗ ಜಾಗೃತಗೊಂಡು ಧರ್ಮ ಸಂಸ್ಕೃತಿ ಪರಂಪರೆ ದೇಶಭಕ್ತಿ ಮೈಗೂಡಿಸಿಕೊಂಡು ಬಾಳಬೇಕೆಂದರು. ಮೈಸೂರು ಪತ್ರಕರ್ತ ಎ.ಆರ್.ರಘುರಾಮ, ನೇತೃತ್ವ ವಹಿಸಿದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿ, ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ, ದುಗ್ಲಿ-ಕಡೇನಂದಿಹಳ್ಳಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯ, ಹುಬ್ಬಳ್ಳಿಯ ಬಸಯ್ಯ ಕಾಡಯ್ಯ ಹಿರೇಮಠ, ಸಿದ್ಧಾಪುರದ ಬಸನಗೌಡ ಮಾಲಿ ಪಾಟೀಲ, ಬೆಂಗಳೂರಿನ ಬಾಳಯ್ಯ ಇಂಡಿಮಠ ಅವರಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.೨೩ಬಿಹೆಚ್‌ಆರ್ ೫:

ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ರಂಭಾಪುರಿ ಜಗದ್ಗುರುಗಳೊಂದಿಗೆ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌