ಪರೀಕ್ಷಾ ವೆಬ್‌ಕಾಸ್ಟಿಂಗ್ ಪರಿಶೀಲಿಸಿದ ಸಿಇಒ

KannadaprabhaNewsNetwork | Published : Apr 30, 2024 2:00 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಕೇಂದ್ರಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಸೋಮವಾರ ಭೇಟಿ ನೀಡಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರನಗರದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಕೇಂದ್ರಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಸೋಮವಾರ ಭೇಟಿ ನೀಡಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳ ಹಾಜರಾತಿ, ಪರೀಕ್ಷಾ ಕೇಂದ್ರಗಳ ಕೊಠಡಿಗಳ ಸಂಖ್ಯೆ, ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ, ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ, ಪರೀಕ್ಷಾ ಕೊಠಡಿ ಮೇಲ್ವಿಚಾರಕರ ನೇಮಕ ಮಾಡಿರುವುದು, ಪರೀಕ್ಷಾ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ಕುರಿತು, ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಕೊಠಡಿಗಳಿಗೆ ಸಿಸಿ ಟಿವಿ ಮತ್ತು ವೆಬ್ ಕಾಸ್ಟಿಂಗ್ ಅಳವಡಿಸಿರುವ ಕುರಿತು ಪರಿಶೀಲಿಸಿದರು. ಬಳಿಕ ಜಿಲ್ಲಾ ಪಂಚಾಯತಿಯ ಆವರಣದಲ್ಲಿರುವ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಅಳವಡಿಸಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಅಭಿರಕ್ಷಕರು ಹಾಗೂ ಸ್ಥಾನಿಕ ಜಾಗೃತ ದಳದವರು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ಪರೀಕ್ಷಾ ಕೇಂದ್ರಗಳಲ್ಲಿ ಅನ್ಯ ಹಾಗೂ ಬಾಹ್ಯ ವ್ಯಕ್ತಿಗಳು ಇಲ್ಲದೇ ಇರುವುದನ್ನು ಸಿಇಒ ಪರಿಶೀಲಿಸಿದರು.

ಇದೇ ವೇಳೆ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಶಿಸ್ತಿನಿಂದ ಮತ್ತು ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವುದು, ಭದ್ರತೆ ಒದಗಿಸುವುದು, ವಿದ್ಯಾರ್ಥಿಗಳು ಭಯಮುಕ್ತ ಪ್ರಶಾಂತ ವಾತಾವರಣದಲ್ಲಿ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯುವ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವ್ಯವಸ್ಥೆಯನ್ನು ನಿರ್ಮಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ಹೊಸಮನಿ, ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಬಿ.ಗಂಗನಹಳ್ಳಿ ಹಾಗೂ ಸ್ಥಾನಿಕ ಜಾಗೃತ ದಳದ ಸಿಬ್ಬಂದಿ, ಪ್ರಶ್ನೆ ಪತ್ರಿಕೆ ಪಾಲಕರು ಹಾಜರಿದ್ದರು.

Share this article