ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು ಆರಂಭ!

KannadaprabhaNewsNetwork |  
Published : May 21, 2026, 02:00 AM IST
ಶಾಲೆ | Kannada Prabha

ಸಾರಾಂಶ

2026-27ನೇ ಶೈಕ್ಷಣಿಕ ಸಾಲಿನ ರಾಜ್ಯ ಪಠ್ಯಕ್ರಮದ ಶಾಲಾ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಮುಕ್ತಾಯದ ಅಂಚಿಗೆ ಬರುತ್ತಿದ್ದು, ಶಾಲೆಗಳಿಗೆ ಸರಬರಾಜು ಪ್ರಕ್ರಿಯೆ ಆರಂಭಗೊಂಡಿದೆ. ಇದರೊಂದಿಗೆ ಈ ಬಾರಿ ಶಾಲಾರಂಭದ ವೇಳೆಗೆ ಮಕ್ಕಳಿಗೆ ಪುಸ್ತಕಗಳು ದೊರೆಯುವ ಖಚಿತ ಭರವಸೆ ಸಿಕ್ಕಂತಾಗಿದೆ.

ಲಿಂಗರಾಜು ಕೋರಾ

 ಬೆಂಗಳೂರು :  2026-27ನೇ ಶೈಕ್ಷಣಿಕ ಸಾಲಿನ ರಾಜ್ಯ ಪಠ್ಯಕ್ರಮದ ಶಾಲಾ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಮುಕ್ತಾಯದ ಅಂಚಿಗೆ ಬರುತ್ತಿದ್ದು, ಶಾಲೆಗಳಿಗೆ ಸರಬರಾಜು ಪ್ರಕ್ರಿಯೆ ಆರಂಭಗೊಂಡಿದೆ. ಇದರೊಂದಿಗೆ ಈ ಬಾರಿ ಶಾಲಾರಂಭದ ವೇಳೆಗೆ ಮಕ್ಕಳಿಗೆ ಪುಸ್ತಕಗಳು ದೊರೆಯುವ ಖಚಿತ ಭರವಸೆ ಸಿಕ್ಕಂತಾಗಿದೆ.

ಟೆಂಡರ್‌ ಪ್ರಕ್ರಿಯೆ ಕೊಂಚ ತಡವಾದರೂ ನಂತರ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ನಿರಂತರವಾಗಿ ಕೈಗೊಂಡ ಪರಿಣಾಮ ಸುಮಾರು ಶೇಕಡ 85ಕ್ಕೂ ಹೆಚ್ಚು ಪಠ್ಯಪುಸ್ತಕಗಳ ಮುದ್ರಣ ಕಾರ್ಯವನ್ನು ಮುದ್ರಕರು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಉಳಿದ ಶೇ.10ರಿಂದ 15ರಷ್ಟು ಮುದ್ರಣ ಕಾರ್ಯ ಇನ್ನೊಂದು ವಾರದಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇನ್ನು, ಮುದ್ರಣಗೊಂಡಿರುವ ಪಠ್ಯ-ಪುಸ್ತಕಗಳಲ್ಲಿ ಸುಮಾರು ಶೇ.75 ಕ್ಕಿಂತ ಹೆಚ್ಚು ಅದಾಗಲೇ ತಾಲೂಕು ಗೋದಾಮುಗಳಿಗೆ ಸರಬರಾಜು ಮಾಡಲಾಗಿದೆ. ಮೇ 18ರಿಂದ ಗೋದಾಮುಗಳಿಂದ ಶಾಲೆಗಳಿಗೂ ಪುಸ್ತಕಗಳನ್ನು ಪೂರೈಸಲಾಗುತ್ತಿದೆ ಎಂದು ಕರ್ನಾಟಕ ಪಠ್ಯ ಪುಸ್ತಕ ಸಂಘ ಸಂಘದ(ಕೆಟಿಬಿಎಸ್‌) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

₹262 ಕೋಟಿ ಅನುದಾನ:

ಸರ್ಕಾರ ಪ್ರತೀ ವರ್ಷ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ದಾಖಲಾತಿ ಹೆಚ್ಚಿಸಲು ಕೈಗೊಂಡಿರುವ ಉಪ ಕ್ರಮಗಳಲ್ಲಿ ಇದೂ ಒಂದಾಗಿದೆ. ಆದರೆ, 2026-27ನೇ ಸಾಲಿನಿಂದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಪೂರ್ವ ಪ್ರಾಥಮಿಕ ಅಂದರೆ ಯಾವ್ಯಾವ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆಯೋ ಆ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ ನೀಡಲಾಗುತ್ತಿದೆ. ಪಠ್ಯಪುಸ್ತಕದ ಜೊತೆಗೆ ಅಭ್ಯಾಸ ಪುಸ್ತಕ, ದಿನಚರಿ ಪುಸ್ತಕಗಳನ್ನೂ ನೀಡಲಾಗುತ್ತದೆ.

ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳು, 1320ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳು ಮತ್ತು ಅನುದಾನಿತ ಶಾಲೆ, ಪಿಯು ಕಾಲೇಜುಗಳಿಂದ ಒಟ್ಟಾರೆ 1ರಿಂದ 12ನೇ ತರಗತಿ ವರೆಗೆ ಈ ಬಾರಿ 6,74,58,588 ಪುಸ್ತಕಗಳಿಗೆ ಬೇಡಿಕೆ ಬಂದಿದೆ. ಈ ಪೈಕಿ ಕಳೆದ ವರ್ಷ ಮುದ್ರಣಗೊಂಡು ಉಳಿದಿದ್ದ 9.78 ಲಕ್ಷದಷ್ಟು ಪುಸ್ತಕಗಳಿವೆ. ಅವುಗಳನ್ನು ಬಿಟ್ಟು ಉಳಿದ ಪಠ್ಯಪುಸ್ತಕಗಳನ್ನು ಈ ವರ್ಷ ಮುದ್ರಿಸಲಾಗುತ್ತಿದೆ. ಒಟ್ಟಾರೆ ಪಠ್ಯಪುಸ್ತಕಗಳ ಮುದ್ರಣ ಮತ್ತು ಸರಬರಾಜು ಕಾರ್ಯದ ಟೆಂಡರನ್ನು 22 ಮುದ್ರಕರಿಗೆ ವಿವಿಧ ಪ್ಯಾಕೇಜ್‌ಗಳಲ್ಲಿ ನೀಡಲಾಗಿದೆ. 2026-27ನೇ ಸಾಲಿನ ಹಣಕಾಸು ಸಾಲಿನ ಆರಂಭದಲ್ಲೇ ಪಠ್ಯಪುಸ್ತಕ ಮುದ್ರಣ, ಸರಬರಾಜು ಕಾರ್ಯಕ್ರಮ ಅನುಷ್ಠಾನಗೊಳಿಸಿ, ಶೈಕ್ಷಣಿಕ ವರ್ಷ ಆರಂಭದಲ್ಲೇ ಶಾಲೆಗಳಲ್ಲಿ ಪಠ್ಯಪುಸ್ತಕ ವಿತರಣೆಗೆ ಕ್ರಮ ವಹಿಸಬೇಕೆಂದು ಷರತ್ತು ವಿಧಿಸಲಾಗಿದೆ. ಇದಕ್ಕಾಗಿ ಸರ್ಕಾರ ₹264.62 ಕೋಟಿ ಅನುದಾನ ಮಂಜೂರು ಮಾಡಿದೆ. ಒಟ್ಟಾರೆ 61 ಲಕ್ಷಕ್ಕೂ ಹೆಚ್ಚು ಮಕ್ಕಳು ಇದರ ಫಲಾನುಭವಿಗಳಾಗಲಿದ್ದಾರೆ.

22 ಮುದ್ರಕರಿಗೆ ಟೆಂಡರ್‌:

ಇದರ ಜೊತೆಗೆ ಅನುದಾನ ರಹಿತ ಖಾಸಗಿ ಶಾಲೆಗಳಿಂದಲೂ ಶೇ.25ರಷ್ಟು ಮುಂಗಡ ಹಣ ಪಡೆದು ಪ್ರತ್ಯೇಕವಾಗಿ ಪುಸ್ತಕಗಳ ಬೇಡಿಕೆ ಪಡೆಯಲಾಗಿದೆ. ಬೇಡಿಕೆಗೆ ಅನುಗುಣವಾಗಿ ಆ ಶಾಲೆಗಳಿಗೂ ಪಠ್ಯಪುಸ್ತಕಗಳನ್ನು ಮುದ್ರಿಸಿ ಸರ್ಕಾರವೇ ಸರಬರಾಜು ಮಾಡಬೇಕಿದೆ. ಉಳಿದ ಶೇ.75ರಷ್ಟು ಹಣ ನೀಡಿ ಪಠ್ಯಪುಸ್ತಕ ಪಡೆಯಬೇಕಿದೆ.

ತಡವಾದರೆ ಮುದ್ರಕರಿಗೆ ದಂಡ

ಕಾರ್ಯಾದೇಶದಂತೆ ಮುದ್ರಕರು ಪಠ್ಯಪುಸ್ತಕಗಳನ್ನು ಮುದ್ರಿಸಿ ತಾಲೂಕು ಗೋದಾಮುಗಳಿಗೆ ಸರಬರಾಜು ಮಾಡುತ್ತಿದ್ದಾರೆ. ಮೇ 18ರಿಂದ ಶಾಲೆಗಳಿಗೆ ಪೂರೈಕೆ ಆರಂಭಿಸಲು ಸೂಚಿಸಲಾಗಿದೆ. ಶಾಲಾರಂಭದ ವೇಳೆಗೆ ಎಲ್ಲ ಪಠ್ಯಪುಸ್ತಕಗಳ ಮುದ್ರಣ ಹಾಗೂ ಸರಬರಾಜು ಬಹುತೇಕ ಪೂರ್ಣಗೊಳ್ಳಲಿದೆ. ಒಂದು ವೇಳೆ ಯಾವುದಾದರೂ ಪಠ್ಯಪುಸ್ತಕ ಮುದ್ರಣ ಹಾಗೂ ಸರಬರಾಜು ವಿಳಂಬವಾದೆ ಮುದ್ರಕರಿಗೆ ನಿಯಮಾನುಸಾರ ದಂಡ ಹಾಗೂ ಇತರ ಕಾನೂನು ಕ್ರಮ ಜರುಗಿಸಲಾಗುವುದು.

-ಎಂ.ಪಿ. ಮಾದೇಗೌಡ, ವ್ಯವಸ್ಥಾಪಕ ನಿರ್ದೇಶಕ, ಕೆಟಿಬಿಎಸ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಇನ್ಮುಂದೆ ರಾಜ್ಯದ ಗಣ್ಯರಿಗೆ ತಿರುಪತಿಯ ಮೊದಲ ಆರತಿ’
ಸಂಸದ ಆಗಲೂ ಪ್ರಧಾನ್‌ಗೆ ಯೋಗ್ಯತೆ ಇಲ್ಲ: ಹರಿಪ್ರಸಾದ್‌