‘ಭಾರತದ ನನ್ನ ಕನಸಿನ ಹಳ್ಳಿ’ ಕಲಿಕಾ ತರಬೇತಿಯ 21ನೇ ದಿನದ ಯಾತ್ರೆ ಮುಕ್ತಾಯ

KannadaprabhaNewsNetwork |  
Published : Jun 02, 2025, 12:21 AM IST
1ಕೆಎಂಎನ್ ಡಿ14 | Kannada Prabha

ಸಾರಾಂಶ

ರಾಜ್ಯ ಪರಂಪರೆ ಪರಿವಾರ ವತಿಯಿಂದ ಆಯೋಜಿಸಿದ್ದ ಭಾರತದ ನನ್ನ ಕನಸಿನ ಹಳ್ಳಿ ಕಲಿಕಾ ತರಬೇತಿಯ 21ನೇ ದಿನದ ಯಾತ್ರೆಯಲ್ಲಿ 21ಕ್ಕಿಂತ ಹೆಚ್ಚಿನ ಮಕ್ಕಳು ಯುವಕರು ಹಾಗೂ ಪರಂಪರೆ ಪರಿವಾರದವರು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ 21 ತಾಲೂಕುಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿ ಪೂವನಹಳ್ಳಿಯಲ್ಲಿ ಮುಕ್ತಾಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯ ಪರಂಪರೆ ಪರಿವಾರ ವತಿಯಿಂದ ಆಯೋಜಿಸಿದ್ದ ಭಾರತದ ನನ್ನ ಕನಸಿನ ಹಳ್ಳಿ ಕಲಿಕಾ ತರಬೇತಿಯ 21ನೇ ದಿನದ ಯಾತ್ರೆಯನ್ನು ತಾಲೂಕಿನ ಪೂವನಹಳ್ಳಿಯಲ್ಲಿ ಸ್ಥಾಪಿಸಿರುವ ವಿಶ್ವ ಪರಂಪರೆ ಅನುಭವ ಮಂಟಪದಲ್ಲಿ ಮುಕ್ತಾಯಗೊಳಿಸಲಾಯಿತು.

21ಕ್ಕಿಂತ ಹೆಚ್ಚಿನ ಮಕ್ಕಳು ಯುವಕರು ಹಾಗೂ ಪರಂಪರೆ ಪರಿವಾರದವರು ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ 21 ತಾಲೂಕುಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿ ಪೂವನಹಳ್ಳಿಯಲ್ಲಿ ಮುಕ್ತಾಯಗೊಳಿಸಿದರು.

ರೈತ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ಮುದುಗೆರೆ ಎಂ.ವಿ.ರಾಜೇಗೌಡ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾಗಲು ರೈತಾಪಿ ವಿದ್ಯಾವಂತ ಮಕ್ಕಳು ನಗರಗಳತ್ತ ಮುಖ ಮಾಡದೆ ತಮ್ಮ ನೆಲೆಯಲ್ಲೇ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಸರ್ಕಾರ ರೈತ ಮಕ್ಕಳ ಸ್ವಯಂ ಉದ್ಯೋಗಕ್ಕೆ ವಿಶೇಷವಾದ ಸಹಾಯಧನ ಯೋಜನೆ ರೂಪಿಸಬೇಕು ಎಂದರು.

ರೈತರ ಮಕ್ಕಳ ವಲಸೆ ಮುಂದಿನ ದಿನಗಳಲ್ಲಿ ದೇಶದ ಆಹಾರ ಭದ್ರತೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಇದರ ಅರಿವಿಲ್ಲದ ರಾಜಕಾರಣಿಗಳು ನಗರೀಕರಣಕ್ಕೆ ಹೆಚ್ಚು ಆಸಕ್ತಿ ವಹಿಸಿ ಗ್ರಾಮೀಣ ಪ್ರದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಕೃಷಿ ಉಳಿದರೆ ಮಾತ್ರ ಹಸಿವು ಮುಕ್ತ ಭಾರತ ನಿಮಾಣ ಸಾಧ್ಯ ಎಂದರು.

ಯುವಕರ ವಲಸೆಯ ಜೊತೆಗೆ ಕೃಷಿ ಲಾಭದಾಯಕವಾಗದೆ ರೈತರು ಸಾಲಗಾರರಾಗುತ್ತಿದ್ದಾರೆ. ನಮ್ಮ ಸರ್ಕಾರಗಳು ರೈತರನ್ನು ಸಾಲಗಾರರನ್ನಾಗಿಸುತ್ತಿದ್ದಾರೆಯೇ ಹೊರತು ಕೃಷಿಯನ್ನು ಉದ್ಯಮವೆಂದು ಪರಿಗಣಿಸಿ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುತ್ತಿಲ್ಲ. ದಲ್ಲಾಳಿಗಳ ಹಿಡಿತದಿಂದ ರೈತರನ್ನು ಬಿಡುಗಡೆ ಮಾಡಿಸುವತ್ತ ಚಿಂತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರೈತರು ತಮ್ಮ ಬೇಸಾಯ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕಡಿಮೆ ಖರ್ಚಿನ ಸಾವಯವ ಕೃಷಿ ಅಭಿವೃದ್ಧಿಯತ್ತ ಮುಖ ಮಾಡಿ ನಮ್ಮ ಪಾರಂಪರಿಕ ಕೃಷಿಯತ್ತ ಮನಸ್ಸು ಮಾಡಬೇಕು. ಈ ನಿಟ್ಟಿನಲ್ಲಿ ಅನುಭವ ಮಂಟಪದ ಸಂಘಟಕರು ಉತ್ತಮವಾದ ಕಾರ್ಯಕ್ರಮವನ್ನು ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ರೂಪಿಸಿರುವುದು ಉತ್ತಮ ಕೆಲಸ ಎಂದರು.

ಗುಜರಾತ್‌ನ ಅಶ್ವಿನ್ ಬಾಮಾಬಾಯಿ ಜಾಲ ಅವರು ತಾಲೂಕಿನ ಪೂವನಹಳ್ಳಿಯ ವಿಶ್ವ ಪರಂಪರೆ ಅನುಭವ ಮಂಟಪದ ಬಗ್ಗೆ ಮಾತನಾಡಿ, ಇದೊಂದು ವಿಶ್ವಕ್ಕೆ ಬೇಕಾದ ಕಾರ್ಯಕ್ರಮ. ಇದು ನಿಮ್ಮ ಮನೆಯ ಬಾಗಿಲಿಗೆ ಬಂದಿದೆ. ಸ್ಥಳೀಯರು ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.

ಮಹಾರಾಷ್ಟ್ರದ ಫಲ್ಗುಣಿ ವಿಂಗ್ ಫೌಂಡೇಷನ್ ಸದಸ್ಯರು, ಬೆಂಗಳೂರಿನ ಗಾಂಧಿಭವನದ ಅಭಿದಬೇಗಂ, ಉಪನ್ಯಾಸಕ ಕತ್ತರಘಟ್ಟ ವಾಸು, ಪರಂಪರೆ ಪರಿವಾರದ ಸುಪ್ರೀತ್, ರೂತ್ ಜಾಕ್ಟಿನ್, ಆಯುಷ್ಮನ್, ನವೀನ್, ಶಿವಕುಮಾರ್, ಮಹೇಶ್ ಸಾಕ್ರೆ, ಶಾಲಿಕ್, ಅಕ್ಷತಾ ಇತರರಿದ್ದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌