ವಿಜಯಪುರದ ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿ ಇದೀಗ ಸತತವಾಗಿ ಏಳನೇ ಬಾರಿ (ಎರಡು ಕ್ಷೇತ್ರಗಳನ್ನು ಪರಿಗಣಿಸಿ) ಸಂಸದರಾಗಿ ಆಯ್ಕೆ ಆಗಿದ್ದು, ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.
ಶಶಿಕಾಂತ ಮೆಂಡೆಗಾರ
ವಿಜಯಪುರ : ರಾಜ್ಯ ಹಾಗೂ ದೇಶದ ಇತಿಹಾಸ ನೋಡಿದರೆ ಒಮ್ಮೆ ಶಾಸಕ ಅಥವಾ ಸಂಸದರಾದವರು ಮತ್ತೊಮ್ಮೆ ಚುನಾಯಿತರಾಗುವುದು ಬಹುತೇಕ ವಿರಳ. ಆದರೆ, ವಿಜಯಪುರದ ಹಿರಿಯ ರಾಜಕಾರಣಿ ರಮೇಶ ಜಿಗಜಿಣಗಿ ಇದೀಗ ಸತತವಾಗಿ ಏಳನೇ ಬಾರಿ (ಎರಡು ಕ್ಷೇತ್ರಗಳನ್ನು ಪರಿಗಣಿಸಿ) ಸಂಸದರಾಗಿ ಆಯ್ಕೆ ಆಗಿದ್ದು, ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ರಾಜ್ಯದ ಇತಿಹಾಸದಲ್ಲೇ ಏಳು ಬಾರಿ ಲೋಕಸಭಾ ಸದಸ್ಯರಾಗಿರುವವರಲ್ಲಿ ಬಿ.ಶಂಕರಾನಂದ, ಕೆ.ಎಚ್.ಮುನಿಯಪ್ಪ ಅವರ ನಂತರ ರಮೇಶ ಜಿಗಜಿಣಗಿ ಅವರು 3ನೇ ವ್ಯಕ್ತಿಯಾಗಿದ್ದಾರೆ. ಆದರೆ, ಉತ್ತರ ಕರ್ನಾಟಕದ ಮೊದಲ ವ್ಯಕ್ತಿ ಎಂಬ ಖ್ಯಾತಿ ಪಡೆದುಕೊಂಡರು.ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದವರು:
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾದಲ್ಲಿ ದಲಿತ ಕುಟುಂಬದಲ್ಲಿ ಹುಟ್ಟಿದ ರಮೇಶ ಜಿಗಜಿಣಗಿ ಅನಿರೀಕ್ಷಿತವಾಗಿ ರಾಜಕಾರಣಕ್ಕೆ ಬಂದವರು. ಮುಂದೊಂದು ದಿನ ನಾನು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತೇನೆ ಎಂಬ ಕಲ್ಪನೆಯೂ ಇಲ್ಲದ ವ್ಯಕ್ತಿ ಸಮಾಜದ ಓರೆಕೋರೆಗಳನ್ನು ಮೆಟ್ಟಿನಿಂತರು. ಇವರ ರಾಜಕಾರಣದ ಬದುಕಿನಲ್ಲಿ ಇದುವರೆಗೂ ಮುಟ್ಟಿದ್ದೆಲ್ಲವೂ ಚಿನ್ನವೇ ಆಗಿ ಪರಿಣಮಿಸಿದೆ.
ರಾಜಕೀಯ ಚತುರ:
ಆರಂಭದಲ್ಲಿ ಅನುಭವ ಇಲ್ಲದಿದ್ದರೂ ಒಮ್ಮೆ ಸೋತ ಬಳಿಕ ರಾಜಕಾರಣದ ಮರ್ಮವನ್ನು ಅರಿತ ಜಿಗಜಿಣಗಿ ಅವರು, ಚುನಾವಣಾ ಚಾಣಕ್ಯನಾಗಿ ಗೆಲ್ಲುತ್ತಲೇ ಬಂದಿದ್ದಾರೆ. ತಾನೊಬ್ಬ ದಲಿತ ಎಂದು ತಿರಸ್ಕಾರ ಮಾಡುತ್ತಿದ್ದವರೆಲ್ಲ ಇಂದು ಪುರಸ್ಕಾರ ಮಾಡುವ ಮಟ್ಟಕ್ಕೆ ಬೆಳೆದಿರುವ ಇವರು ಸಮಾಜದ ಎಲ್ಲ ವರ್ಗಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹೀಗಾಗಿಯೇ ಇವರು ಬೇರೆ ಪಕ್ಷ ಹಾಗೂ ಬೇರೆ ಕ್ಷೇತ್ರಗಳಿದ್ದರೂ ಗೆದ್ದು ಬೀಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರದಿದ್ದರೂ ತಮ್ಮ ತಂತ್ರಗಾರಿಕೆಯಿಂದ ರಾಜನೀತಿ ಅನುಸರಿಸಿ ಆಯ್ಕೆಯಾಗಿರುವುದು ಇವರ ಚಾಣಾಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಯಾವಾಗ ಎಲ್ಲಿ ಗೆದ್ದಿದ್ದಾರೆ?:
1975ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ಇವರು 1978ರಲ್ಲಿ ಇಂಡಿ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗುತ್ತಾರೆ. ಅದಾದ ಬಳಿಕ 1983, 1984, 1989 ರಲ್ಲಿ ಮೂರು ಬಾರಿ ಬಳ್ಳೊಳ್ಳಿ ಮೀಸಲು ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ನಂತರದಲ್ಲಿ ಸಂಸತ್ ಭವನ ಪ್ರವೇಶಿಸಲು ನಿರ್ಧರಿಸಿದ ಇವರು 1998, 1999, 2004ರಲ್ಲಿ ಮೂರು ಬಾರಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ನಂತರದಲ್ಲಿ ಸ್ವಂತ ಜಿಲ್ಲೆಗೆ ಮೀಸಲಾತಿ ಬಂದಿದ್ದರಿಂದ ಮರಳಿ ತವರಿಗೆ ಬಂದ ಜಿಗಜಿಣಗಿ ಸತತವಾಗಿ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ವಿಜಯಪುರ ಎಸ್ಸಿ ಮೀಸಲು ಕ್ಷೇತ್ರದಿಂದ 2009, 2014, 2019 ಇದೀಗ 2024ರಲ್ಲಿಯೂ ಸತತವಾಗಿ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ರಾಜ್ಯದಲ್ಲಿ ಗೃಹ ಇಲಾಖೆ, ಅಬಕಾರಿ, ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಒಟ್ಟು ಎಂಟು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ.
ರಾಮಕೃಷ್ಣ ಹೆಗಡೆ ಹಾಗೂ ಜೆ.ಎಚ್.ಪಟೇಲರ ಗರಡಿಯಲ್ಲಿ ಬೆಳೆದ ಜಿಗಜಿಣಗಿ ಇಂದಿಗೂ ಅವರನ್ನು ಸ್ಮರಿಸುತ್ತಲೇ ಇರುತ್ತಾರೆ. ರಾಜಕೀಯದಲ್ಲಿ ಭವಿಷ್ಯ ರೂಪಿಸಿದ ತಮ್ಮ ಗುರುಗಳ ನೆನಪಿಗಾಗಿ ರಮೇಶ ಜಿಗಜಿಣಗಿ ಅವರು ಮನೆಗೆ ಶ್ರೀ ರಾಮಕೃಷ್ಣ ಹೆಗಡೆ ಹಾಗೂ ಶ್ರೀ ಜೆ.ಎಚ್.ಪಟೇಲ್ ನಿವಾಸ ಎಂದು ನಾಮಫಲಕ ಹಾಕಿದ್ದಾರೆ.
ಅರ್ಥಶಾಸ್ತ್ರದಲ್ಲಿ ಬಿಎ:
1952 ಜೂನ್ 26ರಂದು ಅಥರ್ಗಾದಲ್ಲಿ ಜನಿಸಿದ ರಮೇಶ ಚಂದಪ್ಪ ಜಿಗಜಿಣಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದಿದ್ದಾರೆ. ಹೊಲಮನೆ ಅಂದರೆ ಇಷ್ಟಪಡುವ ಇವರು ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಏಳು ಬಾರಿ ಗೆದ್ದಿದ್ದ ಶಂಕರಾನಂದ, ಮುನಿಯಪ್ಪ!
ಈ ಹಿಂದೆ ಏಳು ಬಾರಿ ಗೆದ್ದಿದ್ದ ಬಿ.ಶಂಕರಾನಂದ, ಮುನಿಯಪ್ಪಚಿಕ್ಕೋಡಿ ಕ್ಷೇತ್ರದಿಂದ 1967ರಿಂದ 1991ರವರೆಗೆ ನಡೆದ ಏಳು ಲೋಕಸಭೆ ಚುನಾವಣೆಗಳಲ್ಲಿ ಬಿ.ಶಂಕರಾನಂದ ಅವರು ಆಯ್ಕೆಯಾಗಿದ್ದರು. 1991ರಿಂದ 2014ರವರೆಗೂ ನಡೆದ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಕೆ.ಎಚ್.ಮುನಿಯಪ್ಪ ಆಯ್ಕೆಗೊಂಡಿದ್ದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ 1998ರಲ್ಲಿ ಕಣಕ್ಕಿಳಿದಿದ್ದ ಜನತಾ ದಳದ ಅಭ್ಯರ್ಥಿ ರತ್ನಮಾಲಾ ಸವಣೂರ ಅವರು ಸತತ ಏಳು ಬಾರಿ ಗೆದ್ದಿದ್ದ ಕಾಂಗ್ರೆಸ್‌ನ ಹುರಿಯಾಳು ಶಂಕರಾನಂದ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಸತತ 7 ಬಾರಿ ಗೆದ್ದು ಬೀಗಿದ್ದ ಕೆ.ಎಚ್.ಮುನಿಯಪ್ಪಗೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅವರು 2019ರಲ್ಲಿ ಸೋಲಿನ ರುಚಿ ತೋರಿಸಿದರು.