ಆಡಳಿತವೇ ಸ್ಥಳಕ್ಕೆ ತೆರಳಿ ಸಾವಿರಕ್ಕೂ ಮಿಕ್ಕಿ ಅಕ್ರಮ-ಸಕ್ರಮ ಅರ್ಜಿ ವಿಲೇ: ಅಶೋಕ್‌ ರೈ

KannadaprabhaNewsNetwork | Published : May 23, 2025 12:34 AM
ಗ್ರಾಮ ಪಂಚಾಯಿತಿ ಮಟ್ಟಕ್ಕೆ ಆಡಳಿತವೇ ತೆರಳಿ ಸಾವಿರಕ್ಕೂ ಮೇಲ್ಪಟ್ಟು ಅಕ್ರಮ - ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ೧೬೦೦ಕ್ಕೂ ಮೇಲ್ಪಟ್ಟು ೯೪ ಸಿ ಮತ್ತು ೯೪ಸಿಸಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.
Follow Us

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಸರ್ಕಾರಿ ಯಂತ್ರ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕೆಂಬ ನಿಲುವಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಆಡಳಿತವೇ ತೆರಳಿ ಸಾವಿರಕ್ಕೂ ಮೇಲ್ಪಟ್ಟು ಅಕ್ರಮ - ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ೧೬೦೦ಕ್ಕೂ ಮೇಲ್ಪಟ್ಟು ೯೪ ಸಿ ಮತ್ತು ೯೪ಸಿಸಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.‘ಶಾಸಕರ ನಡೆ- ಗ್ರಾಮದ ಕಡೆ’ಯೆಂಬ ವಿಶೇಷ ಅಭಿಯಾನದ ಮೂಲಕ ೩೪ ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಸಭಾಂಗಣದಲ್ಲಿ ನಡೆದ ಅಕ್ರಮ- ಸಕ್ರಮ ಬೈಠಕ್‌ನಲ್ಲಿ ಅವರು ಫಲಾನುಭಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.ಪುತ್ತೂರು ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿಗೆ ಶಾಶ್ವತ ಪರಿಹಾರ ನೀಡುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಭಾಗದ ಜನತೆಯ ಬಹಳ ವರ್ಷಗಳ ಕನಸಾದ ಸರ್ಕಾರಿ ಮೆಡಿಕಲ್ ಕಾಲೇಜನ್ನು ಪುತ್ತೂರಿಗೆ ಮಂಜೂರುಗೊಳಿಸಲಾಗಿದೆ ಎಂದು ನುಡಿದರು.

ಈ ಮೊದಲು ತಾಲೂಕು ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದ ಅಕ್ರಮ- ಸಕ್ರಮ ಬೈಠಕ್ ಅನ್ನು ಪ್ರತಿ ಗ್ರಾಮಕ್ಕೆ ಕೊಂಡು ಹೋಗಿ ಗ್ರಾಮ ಮಟ್ಟದಲ್ಲಿ ಜನರೆದುರೇ ಬೈಠಕ್ ನಡೆಸಲಾಗುತ್ತಿದೆ. ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ೧೦ ಕೋಟಿ ರು.ಗಳ ಕಾಮಗಾರಿ ಮುಗಿದಿದ್ದು, ಇನ್ನು ೨೦ ಕೋಟಿ ರು. ಕಾಮಗಾರಿ ಆರಂಭಗೊಂಡಿದೆ. ೧೩ ಕೋಟಿ ರು. ಕಾಮಗಾರಿ ಹಾಗೂ ರಸ್ತೆ ಮಧ್ಯೆ ವಿದ್ಯುತ್ ದೀಪಗಳ ಅಳವಡಿಕೆಗಾಗಿ ೫ ಕೋಟಿ ರು. ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ. ಇದೆಲ್ಲಾ ಕಾಮಗಾರಿಗಳು ಮುಗಿದಾಗ ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯು ಮಾದರಿ ರಸ್ತೆಯಾಗಲಿದೆ ಎಂದು ವಿವರಿಸಿದರು.

ಅಕ್ರಮ- ಸಕ್ರಮ ಸಮಿತಿಯ ಸದಸ್ಯ ಮುಹಮ್ಮದ್ ಬಡಗನ್ನೂರು, ಪುತ್ತೂರು ತಹಸೀಲ್ದಾರ್ ಪುರಂದರ ಹೆಗ್ಡೆ , ೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ರೈ ಅಲಿಮಾರ್, ಉಪಾಧ್ಯಕ್ಷ ಹರೀಶ್ ಡಿ., ಅಕ್ರಮ- ಸಕ್ರಮ ಸಮಿತಿಯ ಸದಸ್ಯರಾದ ರೂಪಲೇಖ ಆಳ್ವ, ರಾಮಣ್ಣ ಪಿಲಿಂಜ ಇದ್ದರು.

ಈ ಸಂದರ್ಭ ೪೦ ಅಕ್ರಮ- ಸಕ್ರಮ ಕಡತಗಳನ್ನು ಮಂಜೂರುಗೊಳಿಸಲಾಯಿತು. ೯೪ಸಿ ಮತ್ತು ೯೪ಸಿಸಿಯಡಿ ೨೦ ಮಂದಿಗೆ ಹಕ್ಕು ಪತ್ರಗಳನ್ನು ನೀಡಲಾಯಿತು.

ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಕಂದಾಯ ಹೋಬಳಿ ಉಪತಹಶೀಲ್ದಾರ್ ಚೆನ್ನಪ್ಪ ಗೌಡ, ನೆಕ್ಕಿಲಾಡಿ ಶ್ರೀ ಗುರುರಾಘವೇಂದ್ರ ಮಠದ ಅಧ್ಯಕ್ಷ ಉದಯ ಕುಮಾರ್ ಉದಯಗಿರಿ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ೩೪ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ವಲಯಾಧ್ಯಕ್ಷ ಆದಂ ಕೊಪ್ಪಳ, ಹಿರೇಬಂಡಾಡಿ ವಲಯಾಧ್ಯಕ್ಷ ರವಿ ಪಟಾರ್ತಿ, ಕೋಡಿಂಬಾಡಿ ವಲಯಾಧ್ಯಕ್ಷ ಮೋನಪ್ಪ ಪಮ್ಮನಮಜಲು, ಕಾಂಗ್ರೆಸ್ ಪ್ರಮುಖರಾದ ಅಸ್ಕರ್ ಅಲಿ, ಕಲಂದರ್ ಶಾಫಿ, ವೆಂಕಪ್ಪ ಪೂಜಾರಿ, ಶಿವಪ್ರಸಾದ್ ಕೋಡಿಂಬಾಡಿ, ಜಗದೀಶ್ ಶೆಟ್ಟಿ ನಡುಮನೆ, ಅಬ್ದುಲ್ ರಹಿಮಾನ್ ಕೆ., ಅಬ್ದುಲ್ ಖಾದರ್ ಮತ್ತಿತರರಿದ್ದರು.

ಉಪ್ಪಿನಂಗಡಿ ಕಂದಾಯ ಹೋಬಳಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.