ಗಂ.ದಯಾನಂದ ಕುದೂರು
ಕನ್ನಡಪ್ರಭ ವಾರ್ತೆ ಕುದೂರುಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎನ್ನುವಂತೆ ಕುದೂರು ಗ್ರಾಮದ ಜನರಿಗೆ ಸುಸಜ್ಜಿತ ಆಸ್ಪತ್ರೆ ಬರೀ ಕನಸಾಗಿಯೇ ಉಳಿಯಿತು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕುದೂರು ಹೋಬಳಿ ಪ್ರಮುಖ ವ್ಯಾಪಾರಿ ಕೇಂದ್ರ ಹಾಗೂ ವಿಸ್ತಾರವಾದ ಹೋಬಳಿ ಎಂಬ ಹೆಗ್ಗಳಿಕೆ ಇದೆ. ಆದರೆ ಇಲ್ಲಿ ಸಮಸ್ಯೆಗಳು ಮಂಡಿಯೂರಿ ಮಲಗಿಕೊಂಡಿವೆ.ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದ್ದದ್ದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೆ ಏರಿಕೆಯಾಯಿತು. ರಾಜಕಾರಣಿಗಳ ಭಾಷಣಕ್ಕೆ ಸೀಮಿತವಾಗುವಂತೆ ಹತ್ತು ಹಾಸಿಗೆಯುಳ್ಳು ಸುಸಜ್ಜಿತ ಕಟ್ಟಡವೂ ಆಯಿತು. ಆದರೆ ಗಾಳಿ ಬೆಳಕಿಲ್ಲದೆ ಓಣಿಯಲ್ಲಿ ಸಾಲು ಹಿಡಿದು ರೋಗಿಗಳು ಕುಳಿತಿರುತ್ತಾರೆ. ಸುಸಜ್ಜಿತ ಶೌಚಾಲಯವಿಲ್ಲ. ಶುದ್ದ ನೀರಿನ ಘಟಕವಿಲ್ಲ. ಸಂಜೆಯಾಯಿತೆಂದರೆ ವೈದ್ಯರಿರುವುದಿಲ್ಲ. 108 ತುರ್ತು ವಾಹನವೇ ಇಲ್ಲ. ಸಾಕಷ್ಟು ಸಿಬ್ಬಂದಿ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಸ್ಥಳೀಯ ಗ್ರಾಮಪಂಚಾಯ್ತಿ ಸದಸ್ಯರುಗಳಿಗೆ ಇದರ ಚಿಂತೆಯಿಲ್ಲ. ಸಂಬಂಧಪಟ್ಟ ಶಾಸಕರ, ಸಂಸದರ ಗಮನಕ್ಕೆ ಆಸ್ಪತ್ರೆ ಸಮಸ್ಯೆಗಳನ್ನು ತಿಳಿಸಿ ಸರಿಪಿಡಿಸಿಕೊಳ್ಳುವ ದಾವಂತವಂತೂ ಇಲ್ಲವೇ ಇಲ್ಲ. ಈ ಎಲ್ಲಾ ಸಮಸ್ಯೆಗಳಿಂದಾಗಿ ಕುದೂರು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಹೋಗದೆ ಖಾಸಗಿ ಆಸ್ಪತ್ರೆಗಳ ಕಡೆಗೆ ಜನರು ಮುಖ ಮಾಡಿದ್ದಾರೆ.
108 ತುರ್ತು ವಾಹನ ಇಲ್ಲ :ಮಾಗಡಿ ತಾಲೂಕಿನಲ್ಲಿ ಮಾಗಡಿ, ಸೋಲೂರು, ಕುದೂರು ಗ್ರಾಮಗಳಿಗೆ 108 ತುರ್ತುವಾಹನ ನೀಡಲಾಗಿತ್ತು. ಕುದೂರು ಗ್ರಾಮದ ವಾಹನ ರಿಪೇರಿ ಬಂತು ಎಂಬ ಒಂದೇ ಒಂದು ನೆಪದಿಂದಾಗಿ 108 ವಾಹನ ಇಲ್ಲದಂತಾಯಿತು. ಇಲ್ಲಿನ ಜನರಿಗೆ ತುರ್ತು ಚಿಕಿತ್ಸೆಗೆ ವಾಹನ ಬೇಕೆಂದರೆ ಸೋಲೂರು, ಮಾಗಡಿ, ಕುಣಿಗಲ್ಲಿನಿಂದ 108 ಆ್ಯಂಬುಲೆನ್ಸ್ ಕರೆಸಿಕೊಳ್ಳುವ ಸ್ಥಿತಿಗೆ ತಲುಪಿಯಾಗಿದೆ.
ಆ್ಯಂಬುಲೆನ್ಸ್ ಇದೆ, ಚಾಲಕರಿಲ್ಲ:ದಾನಿಗಳು ನೀಡಿದ ಮತ್ತೊಂದು ಆ್ಯಂಬುಲೆನ್ಸ್ ವಾಹನ ಕುದೂರು ಸಮುದಾಯ ಕೇಂದ್ರಕ್ಕಿದೆ. ಆದರೆ ಇದಕ್ಕೆ ಚಾಲಕರಿಲ್ಲದೆ ಪ್ರಯೋಜನಕ್ಕೆ ಬಾರದಂತಾಗಿದೆ. ಗುತ್ತಿಗೆ ಆದಾರದ ಚಾಲಕರು ನೇಮಕವಾದ ಸ್ಥಳಕ್ಕೆ ಹೋಗಬೇಕೆಂದು ಸರ್ಕಾರ ಆಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಕುದೂರು ಆಂಬ್ಯುಲೆನ್ಸ್ ಗೆ ಡೆಪ್ಟೇಷನ್ ಮೇಲೆ ಬಂದಿದ್ದ ಚಾಲಕ ನೇಮಕಗೊಂಡ ಸ್ಥಳಕ್ಕೆ ವಾಪಸ್ಸಾದ. ಈ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ಆ್ಯಂಬುಲೆನ್ಸ್ ಗೆ ಚಾಲಕರೇ ಇಲ್ಲದಂತಾಯಿತು.
ಈಗಿರುವ ವೈದ್ಯರು ಗುತ್ತಿಗೆ ಆಧಾರಿತರೇ :ಕುದೂರು ಗ್ರಾಮಕ್ಕೆ ನೇಮಕಗೊಂಡಿರುವ ವೈದ್ಯರು ಗೌರ್ನಮೆಂಟ್ ಹುದ್ದೆಯ ವೈದ್ಯರಲ್ಲ. ಬದಲಾಗಿ ಗುತ್ತಿಗೆ ಆಧಾರಿತ ವೈದ್ಯರು. ಅವರ ನಿಯಮದಂತೆ ಬೆಳಗ್ಗೆ 10 ಗಂಟೆಗೆ ಬಂದು ಸಂಜೆ 4 ಗಂಟೆಗೆ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಾರೆ. ನಂತರ ಆಸ್ಪತ್ರೆಯಲ್ಲಿ ವೈದ್ಯರು ಲಭ್ಯವಿಲ್ಲ. ನರ್ಸ್ ಗಳೇ ರೋಗಿಗಳಿಗೆ ಔಷಧೋಪಚಾರ ಮಾಡಬೇಕಿದೆ. ಅದರಲ್ಲಿ ಒಬ್ಬರನ್ನು ಕಳೆದ ತಿಂಗಳು ವರ್ಗ ಮಾಡಲಾಗಿದೆ. ಇರುವ ಇನ್ನೊಬ್ಬ ಅನುಭವಿ ನರ್ಸ್ ಒಬ್ಬರೇ ಆಸ್ಪತ್ರೆ ನಿಭಾಯಿಸುವ ಸ್ಥಿತಿಯಾಗಿದೆ.
24x7 ಹೆರಿಗೆ ಕೇಂದ್ರ. ಆದರೆ ಒಂದೂ ಹೆರಿಗೆಯಾಗಲ್ಲ:ಹೌದು, ಇದು ವಿಚಿತ್ರವಾದರೂ ಸತ್ಯ. ದಾನಿಗಳು ಕಟ್ಟಿಸಿಕೊಟ್ಟಿರುವ ಸುಸಜ್ಜಿತ 24x7 ಹೆರಿಗೆ ಕೇಂದ್ರವಿದೆ. ಆದರೆ ಒಂದೂ ಹೆರಿಗೆ ಆಗುವುದಿಲ್ಲ. ಏಕೆಂದರೆ ವೈದ್ಯರು ಲಭ್ಯವಿಲ್ಲದ ಕಾರಣ ಹೆರಿಗೆಗೆಂದು ಬಂದವರು ತುಮಕೂರು, ಬೆಂಗಳೂರಿನ ದಾರಿ ಹಿಡಿದು ಹೋಗುತ್ತಾರೆ. ಇರುವ ನರ್ಸ್ಗಳೇ ಹೆರಿಗೆ ಮಾಡಿಸುತ್ತೇವೆ ಎಂದು ಮುಂದೆ ಬಂದರೆ ರೋಗಿಗಳಿಗೆ ಧೈರ‍್ಯ ಸಾಲದೆ ಖಾಸಗಿ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರೆ.
ಸರ್ಕಾರಿ ಸ್ವತ್ತುಗಳು ಎಂದರೆ ಜನರಿಗೆ ಏನೋ ಒಂದು ರೀತಿ ತಾತ್ಸಾರ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ರೋಗಿಗಳು ಮತ್ತು ಅವರ ಕಡೆಯವರು ಗುಟ್ಕಾ ತಿಂದು ಆಸ್ಪತ್ರೆಯೊಳಗಿನ ಗೋಡೆಗೆ ಉಗಿದು ಹೋಗುತ್ತಾರೆ. ರೋಗಿಗಳು ಚಿಕ್ಕದೊಂದೇ ಇರುವ ಶೌಚಾಲಯಕ್ಕೆ ಹೋಗಿ ಅದರ ನಲ್ಲಿ ಮುರಿದು ಬರುತ್ತಾರೆ, ಪೈಪ್ ಕಿತ್ತು ಬರುತ್ತಾರೆ. ಅದನ್ನು ಸರಿಪಿಡಿಸುವಲ್ಲಿ ಅಲ್ಲಿನ ನೌಕರರು ಹೈರಾಣಾಗಿ ಹೋಗಿದ್ದಾರೆ.ಖಾಸಗಿ ಆಸ್ಪತ್ರೆಗಳಲ್ಲಿ ಹೊರಗೆ ಚಪ್ಪಲಿ ಬಿಟ್ಟು ಒಳಗೆ ಹೋಗುತ್ತಾರೆ, ಕಾವಲುಗಾರನ ಕೆಕ್ಕರಿಸುವ ಕಣ್ಣೋಟ ಎದುರಿಸುತ್ತಾರೆ, ಶೌಚಾಲಯವನ್ನು ಅಚ್ಚುಕಟ್ಟಾಗಿ ಬಳಸುತ್ತಾರೆ, ಆಸ್ಪತ್ರೆಯವರು ಕೇಳಿದಷ್ಟು ದುಡ್ಡು ತೆತ್ತು ಬರುತ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೆಲ್ಲವೂ ಉಚಿತ, ಸೇವೆ ಮಾಡುವವರು ಕೂಡಾ ಶ್ರಮವಹಿಸುತ್ತಾ ಕೆಲಸ ಮಾಡುತ್ತಾರೆ. ಅದೇ ಜನ ಇಲ್ಲೇಕೆ ಇಷ್ಟು ಕೆಟ್ಟದಾಗಿ ಆಸ್ಪತ್ರೆ ವಾತಾವರಣವನ್ನು ಕೆಡಿಸುತ್ತಾರೆ ಎಂಬುದೇ ಅರ್ಥವಾಗದಂತಾಗಿದೆ ಎಂದು ಸಿಬ್ಬಂದಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಮಾಗಡಿ ಆಸ್ಪತ್ರೆಗೆ ಸುಮಾರು ಐವತ್ತು ಕೋಟಿಯಷ್ಟು ಖರ್ಚು ಮಾಡಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುತ್ತಿರುವುದು ಸಂತೋಷದ ವಿಷಯವಾದರೂ ಕುದೂರು, ತಿಪ್ಪಸಂದ್ರ ಕೂಡಾ ಮಾಗಡಿ ತಾಲೂಕಿನಲ್ಲಿಯೇ ಇರುವ ಹೋಬಳಿಗಳಾಗಿವೆ. ಇದರ ಕಡೆಗೂ ಶಾಸಕರು ಗಮನ ಹರಿಸಿ ಇಲ್ಲಿನ ಆಸ್ಪತ್ರೆಯ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂಬ ಉತ್ತರಕ್ಕಾಗಿ ಇಲ್ಲಿನ ಸಾರ್ವಜನಿಕರು ಕಾದು ಕುಳಿತಿದ್ದಾರೆ.