ಸವಣೂರ: ಹಾವೇರಿ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಹೊಸ ಪೀಳಿಗೆಗೆ ಪರಿಚಯಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು ಸಮ್ಮೇಳನದ ಉದ್ದೇಶವಾಗಿದೆ. ಜಿಲ್ಲೆಯ ನೆಲಕ್ಕೊಂದು ಇತಿಹಾಸ, ಪರಂಪರೆ ಇದೆ. ಸಂತರು, ಶರಣರು, ದಾರ್ಶನಿಕರು, ಕವಿಗಳು, ಕಲಾವಿದರು, ಸುಪ್ರಸಿದ್ದ ದೊಡ್ಡಹುಣಸೇ ಕಲ್ಮಠ, ಸತ್ಯಬೋಧ ಶ್ರೀಗಳು ಮೂಲ ವೃಂದಾವನ, ಸಂತ ಶಿಶುವಿನಹಾಳ ಶರೀಫರು, ಸರ್ವಜ್ಞ, ಅಂಬಿಗರ ಚೌಡಯ್ಯ ಸೇರಿದಂತೆ ಹಲವಾರು ಮಹನೀಯರು ಜನಿಸಿರುವ ಕರ್ಮ ಭೂಮಿಯಾಗಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಎಚ್.ಐ. ತಿಮ್ಮಾಪೂರ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರಿನ ಪುತ್ರ ಡಾ. ವಿ.ಕೃ.ಗೋಕಾಕ ಅವರಿಗೆ 5ನೇ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಅಂತವರು ಜನಿಸಿದ ನಾಡಿನಲ್ಲಿ ಕನ್ನಡದ ತೇರನ್ನು ಅದ್ಧೂರಿಯಾಗಿ ಎಳೆಯುತ್ತಿರುವುದು ಹೆಣ್ಣು ಮಗಳಿಗೆ ತವರಿನ ಉಡುಗೊರೆ ಸಿಕ್ಕಷ್ಟು ಸಂತೋಷವಾಗಿದೆ. ನವಾಬರ ಆಳ್ವಿಕೆಯ ಬೀಡು ನಮ್ಮ ಸವಣೂರು. ಈ ನಮ್ಮ ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಪ್ರತಿಯೊಂದು ತಾಲೂಕಿನಲ್ಲೂ ಕಲಾ ರಂಗಮಂದಿರ ನಿರ್ಮಾಣವಾಗಬೇಕು. ಹಾವೇರಿ ಜಿಲ್ಲೆ ಚರಿತ್ರೆಯಲ್ಲಿ ನಿರ್ಲಕ್ಷಿತ ಸಾಧಕರನ್ನು ಗುರುತಿಸುವಂತಹ ಸಂಶೋಧನೆ ನಡೆಯಬೇಕು. ಜಿಲ್ಲೆಯ ಸಾಹಿತಿ-ಕಲಾವಿದರ ವಿಳಾಸ ಕೋಶವನ್ನು ಸಿದ್ಧಪಡಿಸಿ ಪ್ರಕಟಿಸಬೇಕು. ಕನ್ನಡ ಕಲಿತವರು ಕಡಿಮೆ ದರ್ಜೆಯವರು, ಆಂಗ್ಲ ಭಾಷೆ ಕಲಿತವರು ಉನ್ನತ ದರ್ಜೆಯವರು ಎಂಬ ಭಾವನೆಯನ್ನು ಹೋಗಲಾಡಿಸಿ. ಪ್ರತಿನಿತ್ಯ ಕನ್ನಡ ದಿನ ಪತ್ರಿಕೆಗಳ ಓದುವ ಹವ್ಯಾಸವನ್ನು ರೂಡಿಸಿಕೊಂಡು ಪತ್ರಿಕೆಗಳನ್ನು ಉಳಿಸಿ ಪ್ರತಿಯೊಬ್ಬರಲ್ಲಿರುವ ಶಬ್ದ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು. ಕರ್ನಾಟಕ ಸರ್ಕಾರ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಮತ್ತು ಅಧಿಕಾರ ನೀಡುವ ಮೂಲಕ ಗಡಿ ಪ್ರದೇಶಗಳನ್ನು ಗಟ್ಟಿ ಮಾಡುವ ಕೆಲಸ ನಿರಂತರ ನಡೆಯಬೇಕಿದೆ. ಅಂದಾಗ ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಿ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಮಾತ್ರ ಕರ್ನಾಟಕ ಆಡಳಿತ ಸೇವೆಯಲ್ಲಿ ಇರುವಂತಹ ಸರ್ಕಾರಿ ಉದ್ಯೋಗವನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮವನ್ನು ಸಾಹಿತಿ ವೀರಣ್ಣ ರಾಜೂರ ಉದ್ಘಾಟಿಸಿ ಮಾತನಾಡಿ, ಇಂದು ಕನ್ನಡ ಓದು ಮತ್ತು ಬರೆಯುವದು ಇಂದಿನ ಸಾಮಾಜಿಕ ಜಾಲತಾಣಗಳಿಂದ ನಶಿಸಿ ಹೋಗುತ್ತಿದೆ. ಸಾಮಾಜಿಕ ಜಾಲತಾಣಗಳು ಹಾಗೂ ನವ ಮಾಧ್ಯಮಗಳ ಪ್ರಭಾವದಿಂದಾಗಿ ಓದುವ, ಬರೆಯುವ ಸಂಸ್ಕೃತಿ ನಿಂತು ಹೋಗಿದೆ ಕಳವಳ ವ್ಯಕ್ತಪಡಿಸಿದರು. ನಮ್ಮ ಭಾಷೆಯ ಬಗ್ಗೆ ಬಹಳ ಉದಾಸೀನತೆ ಹೆಚ್ಚಾಗಿದೆ. ಇಂಗ್ಲಿಷ್ ಮಾಧ್ಯಮವನ್ನು ಬೆನ್ನತ್ತಿ ಕನ್ನಡವನ್ನು ಮರೆಯುತ್ತಲಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು. ಕನ್ನಡ ಬಿಟ್ಟು ಮಕ್ಕಳಿಗೆ ಇಂಗ್ಲಿಷ್ ಭಾಷೆಯನ್ನು ಕಲಿಸುತ್ತಿದೇವೆ. ಪಾಶ್ಚಾತ್ಯ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳೆ ಎಲ್ಲ ಪಠ್ಯಗಳಲ್ಲಿ ಬಂದಿರುತ್ತವೆಯೇ ಹೊರತಾಗಿ ಕನ್ನಡ ವಿಚಾರಗಳ ಕುರಿತಾಗಲಿ ಕನ್ನಡ ಸಂಸ್ಕೃತಿ ಕುರಿತಾಗಿ ಹೇಳಿಕೊಡುವುದಿಲ್ಲ, ಇದರಿಂದಾಗಿ ನಮ್ಮ ಮಕ್ಕಳನ್ನು ಪರಕೀಯರನ್ನಾಗಿ ಮಾಡುವಂತಹ ಒಂದು ವಿಧಾನ ಇಂದು ನಮ್ಮ ಪಠ್ಯ ಕ್ರಮದೊಳಗೆ ಅಥವಾ ಶಿಕ್ಷಣ ನೀತಿಯಿಂದಾಗುತ್ತಿದೆ. ನಮ್ಮ ನಾಯಕರು, ಸರ್ಕಾರಗಳ ಇಚ್ಛಾಶಕ್ತಿ ಕೊರೆತೆಯಿಂದಾಗಿ ಕನ್ನಡಿಗರ ಸ್ವಾಭಿಮಾನ ಶೂನ್ಯತೆಯಿಂದ ಕನ್ನಡದ ಅಸ್ಮಿತೆಯನ್ನು ಉಳಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮ್ಮೇಳನಗಳ ಮೂಲಕ ಅರಿವನ್ನು ಮೂಡಿಸುವ ಕಾರ್ಯವಾಗಬೇಕಿದೆ. ಕನ್ನಡದ ಬಹತ್ವದ ಕುರಿತು ನಾವೆಲ್ಲರೂ ಒಗ್ಗಟಾಗಿ ಅರಿತುಕೊಂಡಾಗ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಲೇಖಕರಾದ ಚಂದ್ರಶೇಖರ ಕುಳೇನೂರ ಅವರ ಚಂಪಾ ನಮ್ಮ ಚಂಪಾ, ಮಾರುತಿ ಶಿಡ್ಲಾಪೂರ ಅವರ ಕುರಿಗಾಹಿ ಮುತ್ತಣ್ಣ ಮಣ್ಣು ಚಿನ್ನ ಮಾಡಿದ ಕಥೆ, ರಾಜಶೇಖರ ಡಂಬರಮತ್ತೂರ ಅವರ ಧಾರವಾಡ ಜಿಲ್ಲೆಯ ಜನಪದ ಚಿತ್ರಕಲೆ, ಸಾಂಸ್ಕೃತಿಕ ಅಧ್ಯಯನ ಕೃತಿಗಳನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ವಹಿಸಿದ್ದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ, ಡಿಡಿಪಿಐ ದಂಡಿನ, ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಘಟಕ ಅಧ್ಯಕ್ಷ ಚಂದ್ರಗೌಡ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕ ನೆಹರು ಓಲೇಕಾರ, ವಿ.ಪ.ಸದಸ್ಯ ಎಸ್.ವಿ. ಸಂಕನೂರ, ತಾಲೂಕು ಗ್ಯಾರಂಟಿ ಸಮೀತಿ ಅಧ್ಯಕ್ಷ ಸುಭಾಸ ಮಜ್ಜಗಿ, ಅಲಕಾ ಸಿಂಧೂರ, ಗೋಕಾಕ ಟ್ರಸ್ಟ ಸದಸ್ಯ ಮಲ್ಲಾರಪ್ಪ ತಳ್ಳಿಹಳ್ಳಿ, ಗಂಗಾಧರ ಬಾಣದ, ಶೋಭಾ ನಿಸ್ಸಿಮಗೌಡ್ರ, ಮಾಲತೇಶ ಮೆಣಸಿನಕಾಯಿ ಸೇರಿದಂತೆ ಕನ್ನಡಾಭಿಮಾನಿಗಳು ಇದ್ದರು.