ಕನ್ನಡಪ್ರಭ ವಾರ್ತೆ ನಾಪೋಕ್ಲು
ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ಜರುಗಿತು. ಗ್ರಾಮಸ್ಥರು, ಭಕ್ತರು ದೇವಾಲಯದಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಬೊಳಕಾಟ್ ನೃತ್ಯ ಪ್ರದರ್ಶಿಸಿದರು. ಮಧ್ಯಾಹ್ನ 12 ಗಂಟೆಗೆ ಎತ್ತುಪೋರಾಟದೊಂದಿಗೆ ದೇವಾಲಯಕ್ಕೆ ಪ್ರದಕ್ಷಿಣೆ, ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ದೇವರ ನೃತ್ಯಬಲಿ ಜರುಗಿತು. ಉತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ವಿವಿಧ ಪೂಜೆ, ಹರಕೆ, ಕಾಣಿಕೆ ಒಪ್ಪಿಸಿ ಸೇವೆಗಳನ್ನು ನೆರವೇರಿಸಿ ಕೊಂಡರು.
ಗುರುವಾರ ಸಂಜೆ ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ಮತ್ತು ದೇವಾಲಯದಲ್ಲಿ ದೇವರ ನೃತ್ಯಬಲಿ ನಡೆಯಿತು. ಪೂಜಾ ವಿಧಿವಿಧಾನಗಳನ್ನು ದೇವಾಲಯದ ಅರ್ಚಕ ಶಶಿಧರ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ತಕ್ಕ ಮುಖ್ಯಸ್ಥರು, ಭಕ್ತರು ಪಾಲ್ಗೊಂಡಿದ್ದರು.