ಕನ್ನಡಪ್ರಭ ವಾರ್ತೆ ಕೋಲಾರಆಡಳಿತಾಧಿಕಾರಿ ಡಾ.ಮೈತ್ರಿ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳಿಗೆ ಅನುಮೋದನೆ ಪಡೆಯುವ ವಿಚಾರದಲ್ಲಿ ಕೋಮುಲ್ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪರ ವಿರೋಧ ಚರ್ಚೆ ನಡೆಯಿತು.ನಗರದ ಹೊರವಲಯದ ನಂದಿನಿ ಕಲ್ಯಾಣ ಮಂಟಪದಲ್ಲಿ ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರಗಳಿಗೆ ನಿರ್ದೇಶಕರೂ ಆಗಿರುವ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆರಂಭದಿಂದಲೂ ಆಕ್ಷೇಪ ವ್ಯಕ್ತಪಡಿಸಿದರು. ಅಂತರ ಕಾಯ್ದುಕೊಂಡ ಶಾಸಕರು
ಸಭೆಯ ಆರಂಭದಿಂದಲೇ ವೇದಿಕೆ ಮೇಲೆ ಇವರಿಬ್ಬರು ಪರಸ್ಪರ ಅಂತರ ಕಾಯ್ದುಕೊಂಡು ದೂರ ದೂರ ಕುಳಿತುಕೊಂಡರು. ದೀಪ ಬೆಳಗುವ ವೇಳೆ ನಂಜೇಗೌಡರು ಕರೆದರೂ ನಾರಾಯಣಸ್ವಾಮಿ ಪಕ್ಕಕ್ಕೆ ಬರಲಿಲ್ಲ.ಹಣಕಾಸು ವಿಷಯಕ್ಕೆ ಸಮ್ಮತಿ ಬೇಡಆಡಳಿತಾಧಿಕಾರಿ ಅವಧಿಯಲ್ಲಿನ ಹಣಕಾಸು ವಿಚಾರಗಳಿಗೆ ನಂಜೇಗೌಡರು ಅನುಮೋದನೆ ಪಡೆಯಲು ಮುಂದಾದಾಗ ನಾರಾಯಣಸ್ವಾಮಿ ವಿರೋಧಿಸಿದರು. ಅನುಮೋದನೆ ಸಿಕ್ಕರೆ ಆ ವಿಚಾರದ ಕಥೆ ಮುಗಿಯುತ್ತದೆ. ಅನುಮೋದನೆ ನೀಡಲೇಬಾರದು ಎಂದು ಹಟ ಹಿಡಿದರು. ಇದಕ್ಕೆ ಬೆಂಬಲಿಸಿದ ವಡಗೂರು ಹರೀಶ್ , ಕಾಡೇನಹಳ್ಳಿ ನಾಗರಾಜ್ ಹಾಗೂ ಶಾಮೇಗೌಡ ಈ ಲೆಕ್ಕಾಚಾರಗಳಿಗೆ ಅನುಮೋದನೆ ನೀಡಬಾರದೆಂದು ಪಟ್ಟು ಹಿಡಿದರು.
ಅಧ್ಯಕ್ಷ ಹಾಗೂ ಶಾಸಕ ನಂಜೇಗೌಡ ಪ್ರತಿಕ್ರಿಯಿಸಿ, ಆಡಳಿತ ಮಂಡಳಿಯಲ್ಲಿ ಕೈಗೊಂಡ ನಿರ್ಧಾರಗಳನ್ನು ಆಡಳಿತಾಧಿಕಾರಿ ಅನುಷ್ಠಾನಗೊಳಿಸಿರುತ್ತಾರೆ. ಏನಾದರೂ ವ್ಯತ್ಯಾಸಗಳಿದ್ದರೆ ತನಿಖಾ ವರದಿಯಲ್ಲಿ ಗೊತ್ತಾಗುತ್ತದೆ. ಆ ಸಮಿತಿಯಲ್ಲಿ ತಾವೂ ಸದಸ್ಯರಾಗಿದ್ದೀರಿ. ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.. ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ಹಿಂದಿನ ಆಡಳಿತ ಮಂಡಳಿ ಕೈಗೊಂಡ ತೀರ್ಮಾನಗಳಿಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಒಕ್ಕೂಟಕ್ಕೆ ಆಗಿರುವ ನಷ್ಟ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ನಮ್ಮ ವಿರೋಧವಿದೆ. ಸೌರಘಟಕ ಕಾನೂನು ಪ್ರಕಾರ ಮಾಡಿದ್ದೀರಾ. ಕಾನೂನು ಬಾಹಿರವಾಗಿ ನಡೆದಿಲ್ಲ ಎಂದರೆ ಹೇಳಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಕೃಷ್ಣಬೈರೇಗೌಡ ಕೂಡ ಕಾನೂನು ಬಾಹಿರ ಎಂದು ಸದನದಲ್ಲಿ ಹೇಳಿದ್ದಾರೆ ಎಂಬುದನ್ನು ನೆನಪಿಸಿದರು.ಆಗ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು ಎದ್ದು ನಿಂತು, ಈ ಚರ್ಚೆಗೆ ಆಕ್ಷೇಪ ವ್ಯಕ್ತಪಡಿಸಿ, ಆಡಳಿತ ಮಂಡಳಿಯಲ್ಲಿ ಚರ್ಚೆ ಆಗಬೇಕಾದ ವಿಚಾರವನ್ನು ಇಲ್ಲೇಕೆ ತಂದಿರಿ ಎಂದು ಪ್ರಶ್ನಿಸಿದರು.
ನಾನೊಬ್ಬ ದಲಿತ ನಿರ್ದೇಶಕಇದಾಗುತ್ತಿದ್ದಂತೆ ಜಾತಿ ವಿಚಾರ ಪ್ರಸ್ತಾಪವಾಯಿತು. ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ನಾನೊಬ್ಬ ದಲಿತ ಸಮುದಾಯದ ನಿರ್ದೇಶಕ. ಇದೇ ಮೊದಲ ಬಾರಿ ಒಕ್ಕೂಟಕ್ಕೆ ದಲಿತರೊಬ್ಬರು ನಿರ್ದೇಕರಾಗಿ ಬಂದಿದ್ದಾರೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಂಜೇಗೌಡರು, ತಮ್ಮದು ಬರೀ ಇದೇ ಆಯಿತು ಎಂದು ಹೇಳಿದರು. ಈ ಹಂತದಲ್ಲಿ ಸಂಘಗಳ ಅಧ್ಯಕ್ಷರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಾತಿನ ಚಕಮಕಿ ನಡೆದು ಪೊಲೀಸರು ಮಧ್ಯ ಪ್ರವೇಶಿಸಿದರು.ಪೊಲೀಸರ ಮಧ್ಯ ಪ್ರವೇಶ
ಸಭೆಯಲ್ಲಿ ಸಣ್ಣಪುಟ್ಟ ಗಲಾಟೆ ನಡೆದಾಗಲೂ ಪೊಲೀಸರು ಬಂದರು. ಪೊಲೀಸರು ಬಂದಿದ್ದಕ್ಕೆ ವಿವಿಧ ಡೇರಿಗಳ ಅಧ್ಯಕ್ಷರ ಆಕ್ಷೇಪ ವ್ಯಕ್ತಪಡಿಸಿದರು. ನಾವು ಕಳ್ಳರಲ್ಲ, ಅಡ್ಡಿ ಮಾಡಬೇಡಿ ಎಂದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ನಂಜೇಗೌಡ, ’ನನನ್ನು ಕಳ್ಳ ಅಂತಾರೆ. ನಾನು ಒಕ್ಕೂಟದಲ್ಲಿ ಎಷ್ಟೊಂದು ಅಭಿವೃದ್ಧಿ ಮಾಡಿದ್ದೇನೆ’ ಎಂದರು. ಅಧ್ಯಕ್ಷರು ಸಮರ್ಥರಿದ್ದಾರೆನಾರಾಯಣಸ್ವಾಮಿ ಮಾತನಾಡಿ, ಸಂಘಗಳ ಅಧ್ಯಕ್ಷರು ಸಮಾಧಾನದಿಂದ ಪ್ರಶ್ನೆ ಕೇಳಿ. ಕೋಮುಲ್ ಅಧ್ಯಕ್ಷರು ಸಮರ್ಥರಿದ್ದು, ಎಲ್ಲದಕ್ಕೂ ಉತ್ತರ ಕೊಡುತ್ತಾರೆ ಎಂದು ನುಡಿದರು. ಸಭೆಯಲ್ಲಿ ನಿರ್ದೇಶಕರಾದ ಜೈಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್, ಹನುಮೇಶ್, ವಡಗೂರು ಹರೀಶ್, ಕಾಂತಮ್ಮ, ಚಂಜಿಮಲೆ ಜೆ.ರಮೇಶ್, ಚೆಲುವನಹಳ್ಳಿ ನಾಗರಾಜಪ್ಪ, ಶ್ರೀನಿವಾಸ್, ಕೆ.ಕೆ.ಮಂಜುನಾಥ್, ಶಾಮೇಗೌಡ, ಮಹಾಲಕ್ಷ್ಮಿ, ನಾಮಿನಿ ನಿರ್ದೇಶಕ ಶಂಷೀರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ, ಆಡ್ಮಿನ್ ನಾಗೇಶ್ ಇದ್ದರು.