ಡಂಬಳ: ಪೂರ್ವಜನ್ಮದ ಪುಣ್ಯದ ಫಲವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ದೇಶದ ವಿವಿಧೆಡೆ ಕೆಲ ಕಠಿಣ ಸಂದರ್ಭಗಳಲ್ಲೂ ಸೇವೆ ಸಲ್ಲಿಸಿರುವ ಅನುಭವವನ್ನು ಮರೆಯಲಾಗದು ಎಂದು ಇಲ್ಲಿನ ನಿವೃತ್ತ ಸೈನಿಕ ರಾಮಣ್ಣ ಉಡಚಪ್ಪ ಹೊಸೂರ ಹೇಳಿದರು.
ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆಗೈದು ತವರಿಗೆ ವಾಪಸ್ಸಾದ ತಮಗೆ ಕದಾಂಪುರ ಸರಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.ಇಂಥ ಗೌರವ ದೇಶವನ್ನು ಕಾಯುತ್ತಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೆ ಸ್ಫೂರ್ತಿಯಾಗುವ ಜತೆಗೆ ಜೀವನ ಸಾರ್ಥಕ ಎನಿಸುತ್ತದೆ ಎಂದರು.
ಮುಖಂಡರಾದ ರಾಮಣ್ಣಗೌಡ್ರ ಹಿರೇಗೌಡ್ರ, ಬಸವಂತಪ್ಪ ಬಡಿಗೇರ ಮಾತನಾಡಿ, ರಾಮಣ್ಣ ಹೊಸೂರ ಅವರು, 6ನೇ ತರಗತಿಯಲ್ಲಿಯೆ ಬಾವಿಯಲ್ಲಿ ಬಿದ್ದ ವಿದ್ಯಾರ್ಥಿಯನ್ನು ಕಾಪಾಡಿ ರಾಷ್ಟ್ರಪತಿ ಪ್ರಶಸ್ತಿ ಪಡೆದಿದ್ದರು ಮತ್ತು ಸೇನೆಯಲ್ಲಿ 24 ವರ್ಷಗಳ ಕಾಲ ಅವರ ಕಾರ್ಯ ಶ್ರೇಷ್ಠವಾದದ್ದು. ಸೈನಿಕರು ತಮ್ಮ ಜೀವನವನ್ನು ಪಣವಾಗಿಟ್ಟು ದೇಶದ ಗಡಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ ನಾವೆಲ್ಲರೂ ದೇಶದಲ್ಲಿ ಸಂತೋಷದಿಂದ ಬದುಕುತ್ತಿದ್ದೇವೆ ಎಂದರು.ವೇದಮೂರ್ತಿ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ರೈತರು, ಸೈನಿಕರು, ಗುರುವೃಂದದವರು ದೇಶದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಅವರ ಮೌಲ್ಯಯುತ ಕೊಡುಗೆ ಇದ್ದೇ ಇರುತ್ತದೆ. ಆ ಹಿನ್ನೆಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ರಾಮಣ್ಣ ಅವರ ಕಾರ್ಯ ಅಮೋಘ ಎಂದರು.
ಗದಗ ಜಿಲ್ಲಾ ಮಾಜಿ ಸೈನಿಕರ ಅಧ್ಯಕ್ಷ ಬಸವಲಿಂಗಪ್ಪ ಮುಂಡರಗಿ ಮಾತನಾಡಿ, ದೇಶಾಭಿಮಾನ ಅನ್ನೊದು ವಾಟ್ಸ್ ಆ್ಯಪ್ ಫೇಸ್‌ಬುಕ್ ಮೂಲಕ ಮಾತ್ರ ನಡೆಯುತ್ತಿದೆ. ಆದರೆ ಕದಾಂಪುರ ಗ್ರಾಮಸ್ಥರು ಸೈನಿಕರಿಗೆ ಅಭೂತಪೂರ್ವವಾಗಿ ಬರಮಾಡಿಕೊಂಡು ಗೌರವ ಸಲ್ಲಿಸುತ್ತಿರುವುದು ಪ್ರಶಂಸನೀಯವಾದದ್ದು. ರೈತರನ್ನು, ಶಿಕ್ಷಕರನ್ನು, ಸೈನಿಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸುತ್ತಿರುವ ಕದಾಂಪುರ ಗ್ರಾಮಸ್ಥರ ಕಾರ್ಯದೊಡ್ಡದು ಎಂದು ಹೇಳಿದರು.ಪ್ರವೀಣ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಲಿಗೆಮ್ಮ ಹೊಸೂರ, ಅನ್ನಪೂರ್ಣ ಹೊಸೂರ ಗ್ರಾಮ ಪಂಚಾಯತೆ ಅಧ್ಯಕ್ಷೆ ಹುಲಿಗೆಮ್ಮ ಉಡಚನಗೌಡ ಪಾಟೀಲ, ವೆಂಕನಗೌಡ ಪಾಟೀಲ, ಚೆನ್ನವೀರಯ್ಯ ಸಾಲಿಮಠ, ದ್ಯಾಮಣ್ಣ ಹುಲ್ಲಣ್ಣವರ, ರೇವಣಸಿದ್ದಪ್ಪ ಸಂಕಣ್ಣವರ, ಶೇಖರಯ್ಯ ಹಿರೇಮಠ, ನಿಂಗಪ್ಪ ಗುರುವಿನ, ಲಕ್ಷ್ಮಣ್ಣ ಕಟಿಗ್ಗಾರ, ಶಾಂತಯ್ಯ ಮುತ್ತಿನಪೆಂಡಿಮಠ, ವಿಶ್ವನಾಥ ಸಾಲಿಮಠ, ಬಸುರಾಜ ನರೇಗಲ್ಲ, ಶೇಖಪ್ಪ ಹುಲ್ಲಣ್ಣವರ, ರುದ್ರಪ್ಪ ಅಡ್ರಗಟ್ಟಿ, ಪ್ರಭು ಕಾರಪುಡಿ, ಎ.ಎಲ್. ಬಿಜಾಪುರ, ಎಸ್.ಎಸ್. ಆದಪ್ಪನವರ, ಗುರುರಾಜ ಗೌರಿ, ಪ್ರದೀಪ ನಾಯಕ, ಬಸುರಾಜ ನಿರೂಪಿಸಿದರು. ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ, ಗ್ರಾಪಂ ಸಿಬ್ಬಂದಿ ವರ್ಗ ಇದ್ದರು.
ಹೊಸೂರ ಅವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ, ಹೂಮಳೆಗೈಯುತ್ತಾ, ವಿವಿಧ ಮೇಳಕ್ಕೆ ಕುಣಿದು ಕುಪ್ಪಳಿಸಿದರು.ಇದೇ ಸಂದರ್ಭದಲ್ಲಿ ಗ್ರಾಮದ ರೈತರನ್ನು, 20ಕ್ಕೂ ಹೆಚ್ಚು ಮಾಜಿ ಸೈನಿಕರನ್ನು, ಪ್ರಾಥಮಿಕ, ಪ್ರೌಢಶಾಲಾ ಗುರುವೃಂದವನ್ನು ಸನ್ಮಾನಿಸಲಾಯಿತು.