- ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಮಾಡಿದ ಕೃತ್ಯ: ಜೋಶಿ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಸಂಸತ್ ಭವನದ ಮೇಲೆ ನಡೆದ ದಾಳಿ ತಿಳಿಗೇಡಿಗಳು, ಕಿಡಿಗೇಡಿಗಳು ಮಾಡಿರುವ ದಾಳಿಯಲ್ಲ. ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟು ಮಾಡಲು ವ್ಯವಸ್ಥಿತವಾಗಿ ಸಂಚು ರೂಪಿಸಿ ಮಾಡಿರುವ ದಾಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಪ್ರತಿಪಕ್ಷಗಳು ಅನಗತ್ಯವಾಗಿ ರಾಜಕೀಕರಣಗೊಳಿಸುತ್ತಿವೆ. ರಾಜಕೀಯ ಮಾಡಬಾರದು. ಕಳೆದೆರಡು ದಿನಗಳಿಂದ ಸದನ ನಡೆಯಲು ಬಿಡುತ್ತಿಲ್ಲ. ಹಿಂದಿನ ಇಂತಹ ಘಟನೆಗಳಿಗೆ ಹೋಲಿಸುವುದು ಸರಿಯಲ್ಲ. ಪ್ರಧಾನಿ ಮೋದಿ ಸರ್ಕಾರ ಮುಖ್ಯ ಉದ್ದೇಶ ಭಯೋತ್ಪಾದನೆ ನಿಗ್ರಹ ಮಾಡುವುದಾಗಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಆಗ ಪಿಸ್ತೂಲ್ ಹಾಗೂ ಡ್ರ್ಯಾಗರ್ ತೆಗೆದುಕೊಂಡು ಸದನಕ್ಕೆ ಬಂದಿದ್ದರು. ಇದರಲ್ಲಿ ರಾಜಕೀಯ ಮಾಡಿಲ್ಲ ಎಂದರು.
ಇಂತಹ ವಿಚಾರಗಳನ್ನು ಪಕ್ಷ ಸಂವೇದನಶೀಲವಾಗಿ ತೆಗೆದುಕೊಂಡಿದೆ. ಉನ್ನತ ತನಿಖೆ ಮಾಡಲು ಸ್ಪೀಕರ್ ಆದೇಶಿಸಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದರು.ಹೊಸ ಸಂಸತ್ ಭವನದಲ್ಲಿ ಭಿತ್ತಿ ಪತ್ರ ತರಬಾರದು. ಬಾವಿಗಿಳಿಯಬಾರದು ಎಂಬ ಕಾಯ್ದೆ ಜಾರಿಗೆ ತರಲಾಗಿದೆ. ಆದರೂ ಭಿತ್ತಿಪತ್ರ ತಂದರು. ಸಂಸದರ ಅನುಶಾಸನ ರಹಿತವಾದ ವರ್ತನೆಗೆ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿಸಿದರು.
ತಲೆ ತಗ್ಗಿಸುವ ಘಟನೆಬೆಳಗಾವಿ ಜಿಲ್ಲೆಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಪ್ರಕರಣಗಳು ನಡೆಯುತ್ತಲೇ ಇವೆ. ಇದಕ್ಕೆ ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದ ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣವೇ ಜ್ವಲಂತ ಉದಾಹರಣೆ. ಈ ಹಿಂದೆಯೂ ರಾಜಸ್ಥಾನದಲ್ಲಿಯೂ ಇಂತಹದೇ ಘಟನೆಗಳು ನಡೆಯುತ್ತಿದ್ದವು. ಭ್ರಷ್ಟಾಚಾರ, ಅನೈತಿಕ ಚಟುವಟಿಕೆ, ಅಪರಾಧ ಜಗತ್ತಿನೊಂದಿಗೆ ಕಾಂಗ್ರೆಸ್ ಅವಿನಾಭಾವ ಸಂಬಂಧ ಹೊಂದಿದೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಘಟನೆ ಕುರಿತಂತೆ ಸಮಗ್ರ ತನಿಖೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವನ್ನು ರಾಜ್ಯ ಬಿಜೆಪಿ ಮಾಡುತ್ತಿದೆ. ಇಂತಹ ವಿಚಾರಗಳಲ್ಲಿ ಸರ್ಕಾರವೂ ಎಚ್ಚರ ವಹಿಸುವ ಅವಶ್ಯಕತೆ ಇದ್ದು, ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದರು.ಟಿಪ್ಪು ಹೆಸರಿಗೆ ಕಿಡಿ:
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕೆಂಬ ಬೇಡಿಕೆಗೆ ಕಿಡಿಕಾರಿದ ಅವರು, ಟಿಪ್ಪು ಒಬ್ಬ ಮತಾಂಧ ವ್ಯಕ್ತಿ, ಮತಾಂಧನ ಹೆಸರು ಇಟ್ಟರೆ ಜನರು ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದರು.25 ಸ್ಥಾನದಲ್ಲಿ ಬಿಜೆಪಿ ಗೆಲವು ನಿಶ್ಚಿತ
ರಾಜ್ಯದಲ್ಲಿ ಆರು ತಿಂಗಳ ಹಿಂದಷ್ಟೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪರಿಸ್ಥಿತಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಆಂತರಿಕ ಕಿತ್ತಾಟದಿಂದ ಆಡಳಿತ ಯಂತ್ರ ಕುಸಿದಿದೆ. ತುಷ್ಟೀಕರಣ, ಇಬ್ಬಗೆ ನೀತಿಯಿಂದ ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡಿದೆ. ಅದರಂತೆ ರಾಜ್ಯದಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ. ಈಗಾಗಲೇ ಬಿಡುಗಡೆಗೊಂಡ ಸಮೀಕ್ಷೆಯೊಂದರ ಪ್ರಕಾರದ ರಾಜ್ಯದಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂದು ಬಂದಿದೆ. ಕನಿಷ್ಠ 25 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಸಚಿವ ಪ್ರಹ್ಲಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ನಾಳೆ ರಾಜ್ಯಾಧ್ಯಕ್ಷರ ಭೇಟಿ
ಕಾಂಗ್ರೆಸ್‌ಗೆ ತಮ್ಮಲ್ಲಿದ್ದವರಿಗೆ ವ್ಯವಸ್ಥೆ ಮಾಡಲು ಆಗುತ್ತಿಲ್ಲ. ಇನ್ನು ಬೇರೆ ಪಕ್ಷದವರನ್ನು ಕರೆದುಕೊಂಡು ಏನು ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.ಕಾಂಗ್ರೆಸ್ ಔತಣಕೂಟದಲ್ಲಿ ಬಿಜೆಪಿಯ ಮೂವರು ಶಾಸಕರು ಪಾಲ್ಗೊಂಡಿದ್ದರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಔತನಕೂಟದಲ್ಲಿ ಬಿಜೆಪಿಯ ಕೆಲವರು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ನಾಳೆ ಬೆಂಗಳೂರಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಶಾಸಕರಿಗೆ ಏನಾದರೂ ವಿವರಣೆ ಕೇಳಬೇಕಾ ಅಥವಾ ಮುಂದೆ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದರು.ಕಾಂಗ್ರೆಸ್ ಪರಿಸ್ಥಿತಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಅವರಲ್ಲೇ ಸಿಕ್ಕಾಪಟ್ಟೆ ಆಂತರಿಕ ಕಚ್ಚಾಟ ನಡೆದಿದೆ. ಈಗ ಅಲ್ಲಿ ಇದ್ದವರಿಗೆ ಸಚಿವ ಸ್ಥಾನ ಕೊಡುವುದಕ್ಕೆ ಆಗುತ್ತಿಲ್ಲ. ನನಗೆ ಮುಖ್ಯಮಂತ್ರಿ ಮಾಡಿಲ್ಲ. ಸಚಿವಗಿರಿ ನೀಡಿಲ್ಲ. ನಿಗಮ ಮಂಡಳಿ ಕೊಟ್ಟಿಲ್ಲ ಎಂದು ಜಗಳ ಶುರುವಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಇನ್ನು ಬೇರೆ ಪಕ್ಷದಲ್ಲಿರುವವರನ್ನು ಕರೆದುಕೊಂಡು ಏನು ಮಾಡುತ್ತಾರೋ ಎಂದು ಪ್ರಶ್ನಿಸಿದರು.