- ಯಾರನ್ನು ಮೆಚ್ಚಿಸಲು ಅಧಿಕಾರಿಗಳ ಅಮಾನತು ಕ್ರಮ? - - -
ಕನ್ನಡಪ್ರಭ ವಾರ್ತೆ, ಚನ್ನಗಿರಿ
ತಾಲೂಕಿನ ಇತಿಹಾಸದಲ್ಲಿ ಎಂದೂ ನಡೆಯದಂಥ ಕೃತ್ಯ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ನಡೆದಿದೆ. ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸ್ ವಾಹನಗಳ ಜಖಂ, ವಾಹನಗಳ ಸುಡುವ ಪ್ರಯತ್ನ, ಪೊಲೀಸರ ಮೇಲೆ ಹಲ್ಲೆ ಘಟನೆಗಳು ಶುಕ್ರವಾರ ರಾತ್ರಿ ನಡೆದಿರುವುದು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ಭಾನುವಾರ ಪಟ್ಟಣದ ಆರ್‌ಎಚ್ಎಂ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಠಾಣೆ ಮೇಲೆ ಕಲ್ಲು ತೂರಾಟದಿಂದ ಕರ್ತವ್ಯನಿರತ 11 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. 7 ಪೊಲೀಸ್ ವಾಹನಗಳನ್ನು ಜಖಂಗೊಳಿಸಿರುವುದು ಸರಿಯಲ್ಲ. ಸಮಾಜಕ್ಕೆ ರಕ್ಷಣೆ ಕೊಡುವಂತಹ ಪೊಲೀಸರಿಗೇ ಕಾಂಗ್ರೆಸ್ ಸರ್ಕಾರದಲ್ಲಿ ರಕ್ಷಣೆಯೇ ಇಲ್ಲದಂತಾಗಿದೆ. ಈ ಘಟನೆ ಖಂಡನೀಯ ಎಂದರು.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಜಿ. ಮುನ್ನೋಳಿ, ಆರಕ್ಷಕ ವೃತ್ತ ನಿರೀಕ್ಷಕ ನಿರಂಜನ್ ಅವರನ್ನು ಅಮಾನತುಪಡಿಸಿರುವುದು ಪೊಲೀಸರ ಧೈರ್ಯ ಕುಗ್ಗಿಸಿದೆ. ಯಾರನ್ನು ಮೆಚ್ಚಿಸಲು ಈ ಸರ್ಕಾರ ಪೊಲೀಸರನ್ನು ಅಮಾನತುಪಡಿಸಿದೆ ಎಂದು ಪ್ರಶ್ನಿಸಿದರು.ಆರೋಪಿಯಾಗಿದ್ದ ವ್ಯಕ್ತಿ ಸಾವು ಯಾವ ರೀತಿಯಾಗಿದೆ ಎಂದು ತಿಳಿದಿಲ್ಲ, ಶವ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ಯಾವುದೇ ತನಿಖೆಯೂ ಆಗಿಲ್ಲ. ಇಂತಹ ಯಾವುದೇ ವಿಚಾರಗಳನ್ನು ತಿಳಿಯದೇ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿ, ಧ್ವಂಸ ಮಾಡಿದ್ದಾರೆ. ಇದನ್ನು ಗಮನಿಸಿದರೆ ಘಟನೆ ಪೂರ್ವ ನಿಯೋಜಿತವಾಗಿತ್ತೆ ಎಂಬ ಶಂಕೆ ವ್ಯಕ್ತಪಡಿಸಿದರು.
ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ತಾಲೂಕಿನಲ್ಲಿ ಐಪಿಎಲ್, ಮಟ್ಕಾ, ಇಸ್ಪೀಟ್, ಒ.ಸಿ. ದಂಧೆಗಳ ಜೂಜುಗಳು ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿವೆ. ಇಂತಹ ಅಕ್ರಮ ಜೂಜುಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಕಡಿವಾಣ ಹಾಕದಿದ್ದರೆ ಉಗ್ರವಾದ ಹೋರಾಟ ಹಮ್ಮಿ ಕೊಳ್ಳಲಾಗುವುದು ಎಂದು ವಿರೂಪಾಕ್ಷಪ್ಪ ಎಚ್ಚರಿಸಿದರು.ಚನ್ನಗಿರಿ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ, ತಕ್ಕ ಶಿಕ್ಷೆ ನೀಡಬೇಕು. ಆ ಮೂಲಕ ಹಾನಿಯಾಗಿರುವ ವೆಚ್ಚವನ್ನು ಆರೋಪಿಗಳಿಂದಲೇ ವಸೂಲಿ ಮಾಡಬೇಕು. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗೌ.ಹಾಲೇಶ್, ಬುಳ್ಳಿ ನಾಗರಾಜ್, ಚ.ಮ. ಗುರುಸಿದ್ದಯ್ಯ, ಗಣೇಶ್ ಬುಳ್ಳಿ, ಬಿ.ಎಂ. ಕುಬೇಂದ್ರೋಜಿ ರಾವ್, ದಿಗ್ಗೇನಹಳ್ಳಿ ನಾಗರಾಜ್, ಗೊಪ್ಪೇನಳ್ಳಿ ಪ್ರಭಾಕರ್ ಇತರರು ಹಾಜರಿದ್ದರು.- - - -26ಕೆಸಿಎನ್‌ಜಿ1:
ಚನ್ನಗಿರಿಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿ ಮುಖಂಡರಾದ ಗೌ.ಹಾಲೇಶ್, ಬುಳ್ಳಿ ನಾಗರಾಜ್, ಚ.ಮ. ಗುರುಸಿದ್ದಯ್ಯ ಇತರರು ಇದ್ದರು.