ಮುಂಡರಗಿ: ದೇಶದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯ, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತ್ರಿಪಡಿಸಿ, ಎಲ್ಲರ ನಡುವೆ ಭ್ರಾತೃತ್ವ ಹೆಚ್ಚಿಸುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ನಾವು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾ ನಾಯಕರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು. ನಮ್ಮ ರಾಷ್ಟ್ರವನ್ನು ಪ್ರಗತಿಯ ಹಾದಿಯಲ್ಲಿ ಕರೆದೊಯ್ಯುವಲ್ಲಿ ಶ್ರಮಿಸಿದ ರೈತರು, ಶಿಕ್ಷಕರು, ವಿಜ್ಞಾನಿಗಳು ಮತ್ತು ಕಾರ್ಮಿಕರು, ರಾಷ್ಟ್ರದ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸ್ಮರಿಸಬೇಕು. ಆಗ ಈ ಸಂಭ್ರಮ ಆಚರಣೆಗಳಿಗೆ ಗೌರವಿಸಿದಂತಾಗುತ್ತದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳು ಹಾಗೂ ನೌಕರರಿಗೆ ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ತಾಪಂ ಇಒ ವಿಶ್ವನಾಥ ಹೊಸಮನಿ, ಸಿಪಿಐ ಯಶವಂತ ಬಿಸನಳ್ಳಿ, ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ, ಸಿಡಿಪಿಒ ಮಹಾದೇವ ಇಸರನಾಳ, ಬಿಸಿಎಂ ಅಧಿಕಾರಿ ಶಿವಯೋಗಿ ಕಲ್ಮಠ, ಸಾಮಾಜಿಕ ಅರಣ್ಯಾಧಿಕಾರಿ ಸುನೀತಾ, ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಸವಿತಾ ಸಾಸ್ವಿಹಳ್ಳಿ ಉಪಸ್ಥಿತರಿದ್ದರು. ಬಿಇಒ ಗಂಗಾಧರ ಅಣ್ಣಿಗೇರಿ ಸ್ವಾಗತಿಸಿದರು. ವಿ.ಎಸ್. ಪಾಟೀಲ, ಸುಜಾತಾ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ವಿ.ಎಚ್. ಹೊಳೆಯಮ್ಮನವರ ವಂದಿಸಿದರು.ಶಿಷ್ಟಾಚಾರ ನೆಪದಲ್ಲಿ ನಿರ್ಲಕ್ಷ್ಯ: ಸ್ವಾಮೀಜಿ ಅಸಮಾಧಾನ
ಸರ್ಕಾರಿ ಕಚೇರಿ, ಶಾಲೆಗೆ ಮುಂಡರಗಿ ಅನ್ನದಾನೀಶ್ವರ ಮಠ ನೂರಾರು ಎಕರೆ ಭೂಮಿ ದಾನ ಮಾಡಿದ್ದರೂ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಿಷ್ಟಾಚಾರ ನೆಪದಲ್ಲಿ ತಮ್ಮನ್ನು ಆಹ್ವಾನಿಸದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.ಮುಂಡರಗಿ ಅನ್ನದಾನೀಶ್ವರ ಮಠ, ತಾಲೂಕು ಕ್ರೀಡಾಂಗಣಕ್ಕೆ, ತಾಲೂಕು ಸರ್ಕಾರಿ ಆಸ್ಪತ್ರೆ, ಪುರಸಭೆಗೆ, ಸರ್ಕಾರಿ ಪ್ರಾಥಮಿಕ ಶಾಲೆ, ರುದ್ರಭೂಮಿ ಸೇರಿದಂತೆ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಗಳಿಗೆ ನೂರಾರು ಎಕರೆ ಮಠ ತನ್ನ ಜಮೀನು ದಾನ ಮಾಡಿದೆ. ದುರಂತವೆಂದರೆ ಪ್ರತಿ ವರ್ಷ ಜರುಗುವ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವಗಳಿಗೆ ತಮ್ಮನ್ನು ಆಹ್ವಾನಿಸಲು ಅಧಿಕಾರಿಗಳು ಶಿಷ್ಟಾಚಾರದ ನೆಪ ಹೇಳುತ್ತಾರೆ. ಬರದೇ ಇರುವ ರಾಜಕಾರಣಿಗಳ ಹೆಸರು ಹಾಕಿ, ನಮ್ಮಂತಹ ದಾನಿಗಳನ್ನು ನಿರ್ಲಕ್ಷಿಸುತ್ತಿರುವುದು ಬೇಸರ ತಂದಿದೆ. ತಹಸೀಲ್ದಾರರು ಪ್ರತ್ಯೇಕವಾಗಿ ಆಹ್ವಾನಿಸಿರುವುದರಿಂದ ಈ ಬಾರಿ ಆಗಮಿಸಿದ್ದು, ಮುಂದಿನ ಬಾರಿ ಶಿಷ್ಟಾಚಾರದಂತೆ ನಮ್ಮ ಹೆಸರು ಬರದಿದ್ದರೆ ನಾವು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಶ್ರೀಗಳು ಎಚ್ಚರಿಸಿದರು.