ಈ ದೇಶದ ಮೂಲ ಸಂಸ್ಕೃತಿಯೇ ಜನಪದ-ಸ್ವಾಮೀಜಿ

KannadaprabhaNewsNetwork |  
Published : Jul 22, 2025, 12:00 AM IST
20ಎಂಡಿಜಿ1, ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಏರ್ಪಡಿಸಿದ್ದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮದ ಅಂಗವಾಗಿ ಜರುಗಿದ ಜನಪದ ಸಂಭ್ರಮದಲ್ಲಿ ದಕ್ಷಿಣ ಭಾರತದ ಮಹಿಳಾ ಸಾಧಕಿ ಪ್ರಶಸ್ತಿ ಪಡೆದ ವೀಣಾ ಹೇಮಂತಗೌಡ ಪಾಟೀಲ ಅವರಿಗೆ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ ಸತ್ಕರಿಸಿದರು. | Kannada Prabha

ಸಾರಾಂಶ

ಈ ದೇಶದ ನಮ್ಮ ಮೂಲ ಸಂಸ್ಕೃತಿಯೇ ಜನಪದ ಸಂಸ್ಕೃತಿ. ದೇಶಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿದವರೇ ಜನರು ಎಂದು ಮುಂಡರಗಿ ತೋಂಟದಾರ್ಯ ಮಠದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಮುಂಡರಗಿ: ಈ ದೇಶದ ನಮ್ಮ ಮೂಲ ಸಂಸ್ಕೃತಿಯೇ ಜನಪದ ಸಂಸ್ಕೃತಿ. ದೇಶಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಿದವರೇ ಜನರು ಎಂದು ಮುಂಡರಗಿ ತೋಂಟದಾರ್ಯ ಮಠದ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಶರಣ ಚರಿತಾಮೃತ ಪ್ರವಚನದ ಅಂಗವಾಗಿ ಆಯೋಜಿಸಿದ್ದ ಜನಪದ ಸಂಸ್ಕೃತಿ ವಿಶೇಷ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಜನರಿಗಿಂತ ಮೊದಲು ಮಠಗಳು ಇರಲಿಲ್ಲ. ಸ್ವಾಮಿಗಳು ಇರಲಿಲ್ಲ, ರಾಜಕಾರಣಿಗಳು ಇರಲಿಲ್ಲ, ರಾಜಕಾರಣವೂ ಇರಲಿಲ್ಲ. ನಾಗರಿಕತೆಯ ಬೇರು ಜನಗಳಿಂದ ಬಂದಿರುವಂಥದ್ದು. ನಾಗರಿಕತೆಗೆ ಗಟ್ಟಿತನವನ್ನು ಕೊಟ್ಟವರು ಕುಟುಂಬಸ್ಥರು. ಹೀಗಾಗಿ ಈ ಜನಪದ ಸಂಸ್ಕೃತಿ ಗ್ರೀಕ್, ಅಮೇರಿಕ, ಲ್ಯಾಟಿನ್ ಸೇರಿದಂತೆ ಜಗತ್ತಿನ ಎಲ್ಲ ದೇಶಗಳಲ್ಲಿ ಇದೆ. ಎಲ್ಲ ದೇಶಗಳಲ್ಲಿನ ಮೂಲ ಸಂಸ್ಕೃತಿ ಜನಪದ ಸಂಸ್ಕೃತಿಯೇ ಆಗಿದೆ ಎಂದರು.

ಹಾಡುಗಾರಿಕೆಯಲ್ಲಿ ಬಹುದೊಡ್ಡ ಸಂಸ್ಕೃತಿಯನ್ನು ಇಟ್ಟುಕೊಂಡು ಬಂದವರು ನಮ್ಮ ಜನಪದರು. ನಂತರ ಬಂದಿರುವಂತಹ ಕಾವ್ಯ, ಕವನ, ಷಟ್ಪದಿ, ರಗಳೆ, ವಚನ ಸಾಹಿತ್ಯ ಇವೆಲ್ಲವೂ ಅಕ್ಷರ ಸಂಸ್ಕೃತಿಯಿಂದ ಬಂದಿರುವಂತವು. ಈ ಅಕ್ಷರ ಸಂಸ್ಕೃತಿ ಮೀರಿ ಜನಪದ ಸಂಸ್ಕೃತಿ ಇತ್ತು. ಈ ಅಕ್ಷರ ಸಂಸ್ಕೃತಿಗೆ ಮೂಲ ತಾಯಿ ಬೇರು ಜನಪದ ಸಂಸ್ಕೃತಿಯಾಗಿದೆ. ಅಕ್ಷರ ಸಂಸ್ಕೃತಿಗೆ ಜನಪದ ಸಾಹಿತ್ಯವೇ ತಾಯಿ. ಈ ಅಕ್ಷರ ಸಂಸ್ಕೃತಿ ಮೇಲ್ವರ್ಗದಿಂದ ಬಂದಿರುವಂತದ್ದು. ಜನಪದ ಸಂಸ್ಕೃತಿ ನಮ್ಮ ತಾಯಿ ತುಟಿಯಿಂದ ಬಂದಿರುವಂಥದ್ದು. ''''ಆಚಾರಕ್ಕೆ ಅರಸಾಗು ಜ್ಯೋತಿಗೆ ಪ್ರಭುವಾಗು ಮಾತಿನಲಿ ಚೂಡಾಮಣಿಯಾಗು ನನಕಂದ ಜ್ಯೋತಿಯೇ ಆಗು ಜಗಕೆಲ್ಲ'''' ಎಂದು ಈ ಜಗತ್ತಿಗೆ ಜನಪದದ ಪಾಠವನ್ನು ನಮ್ಮ ಗ್ರಾಮೀಣ ತಾಯಿ ಹೇಳಿದ್ದಾಳೆ ಎಂದರು. ಪ್ರವಚನಕಾರರಾಗಿ ಬಸವೇಶ್ವರಿ ಮಾತಾಜಿ ಮಾತನಾಡಿ, 12ನೇ ಶತಮಾನದಲ್ಲಿ ನೀಡುವವರುಂಟು, ಬೇಡುವವರಿಲ್ಲದೇ ನಾನು ಬಡವನಾದೆ ಎನ್ನುವಂತೆ ಎಲ್ಲ ಕಾಯಕ ಮಾಡುವವರು ಇದ್ದರು. ಕೈಲಾಸವನ್ನೂ ನಾಚಿಸುವಂತೆ ಸಮೃದ್ದವಾಗಿ ಬಸವಣ್ಣನವರು ಕಲ್ಯಾಣವನ್ನು ಕಟ್ಟಿದ್ದರು. ತೆಕ್ಕೆ ಕಾಯಕ, ಮುಳ್ಳಾವಿಗೆ ಕಾಯಕ, ಕಲ್ಲುಬಾಗಿಲು ಕಾಯಕ, ಬಹಬುರೂಪಿ ಚೌಡಯ್ಯನ ಕಾಯಕ ಎಚ್ಚರಿಕೆ ಕಾಯಕ ಹೀಗೆ ಅನೇಕ ಕಾಯಕಗಳಿದ್ದವು. ಈ ಎಲ್ಲ ಕಾಯಕಗಳ ಮುಖಾಂತರ ಸಮೃದ್ದ ಹಾಗೂ ಸಂತೃಪ್ತಿಯಾದ ರಾಜ್ಯವನ್ನು ಬಸವಣ್ಣನವರು ಕಟ್ಟಿ ತೋರಿಸಿದ್ದರು.

ಸದಾಚಾರ ಸದ್ಭಕ್ತಿಗೆ ದೇವರು ಒಲೆಯುತ್ತಾನೆ ಎನ್ನುವುದನ್ನು ಬಿಟ್ಟರೆ ನಮ್ಮ ಅನೇಕ ಮೂಢನಂಬಿಕೆ, ಕಂದಾಚಾರ, ಶಿಷ್ಟಾಚಾರಗಳನ್ನು ಮಾಡುತ್ತಾ ಅವುಗಳಲ್ಲಿಯೇ ಸಮಯವನ್ನು ವ್ಯರ್ಥ ಮಾಡಿ ನಾವು ಯಾವಾಗಲೂ ದೇವರ ಹತ್ತಿರ ಹೋಗುವುದಿಲ್ಲ. ಬಸವಣ್ಣನವರು ದೇವರು ಧರ್ಮದ ಬಗ್ಗೆ ತಮ್ಮ ವಚನಗಳ ಮೂಲಕ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ದಕ್ಷಿಣ ಭಾರತ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕೃತ ವೀಣಾ ಹೇಮಂತಗೌಡ ಪಾಟೀಲ, ಸ್ಕಾಯ್ ಮಾರ್ಶೆಲ್ ಆರ್ಟ್ಸ್ ದಲ್ಲಿ ರಾಷ್ಟ್ರಮಟ್ಟದ ಪದಕ ಪುರಸ್ಕೃತ ಕೃಷ್ಣಪ್ರಸಾದಗೌಡ ಪಾಟೀಲ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜೆ.ಟಿ. ವಿದ್ಯಾ ಸಮಿತಿ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ಹಾಸನದ ಬೇಲೂರು ವಿರಕ್ತಮಠದ ಮಹಾಂತಸ್ವಾಮೀಜಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರವಚನ ಸಮಿತಿ ಅಧ್ಯಕ್ಷ ಬಸಯ್ಯ ಗಿಂಡಿಮಠ, ಎಸ್.ಎಸ್. ಗಡ್ಡದ, ವೀರಪ್ಪ ಮಡಿವಾಳರ, ಕೊಟ್ರೇಶ ಅಂಗಡಿ, ಪಾಲಾಕ್ಷಿ ಗಣದಿನ್ನಿ, ಪವನ್ ಚೋಪ್ರಾ, ದೇವಪ್ಪ ರಾಮೇನಹಳ್ಳಿ, ಶಿವಯೋಗಿ ಕೊಪ್ಪಳ ಉಪಸ್ಥಿತರಿದ್ದರು. ನಂತರ ನವಲಗುಂದದ ಶರಣು ಯಮನೂರು ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಿತು. ಡಾ.ನಾಗಯ್ಯ ಅಜ್ಜವಾಡಿಮಠ ನಿರೂಪಿಸಿದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ