ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರು:ಉದ್ಘಾಟನೆಯಾಗಿ ಐದು ತಿಂಗಳು ಕಳೆಯುತ್ತ ಬಂದರೂ ಸಹ ನಗರದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕಟ್ಟಡ ಬಳಕೆಗೆ ದೊರಕದಿರುವುದು ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ.ನಗರದ ನೆಹರೂ ವೃತ್ತದ ಬಳಿಯಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತುಂಬಾ ಹಳೆಯ ಹಾಗೂ ಬಹಳಚ ಚಿಕ್ಕದು ಇದ್ದದ್ದರಿಂದ ಗುರುಭವನದ ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಮಾರು ₹1.60 ಕೋಟಿ ವೆಚ್ಚದಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತವಾಗಿ ನಿರ್ಮಾಣಗೊಂಡ ನೂತನ ಕಚೇರಿಯ ಕಟ್ಟಡದಲ್ಲಿ ಇದೀಗ ವಿದ್ಯುತ್ ಸರಬರಾಜಿನ ಪಾಯಿಂಟ್‌ಗಳ ಕೊರತೆ ಮತ್ತು ಲಿಫ್ಟ್ ಕಾಮಗಾರಿಯ ಕಾರಣಕ್ಕಾಗಿ 5 ತಿಂಗಳಿಂದ ಕಚೇರಿ ಉಪಯೋಗಕ್ಕೆ ಕಟ್ಟಡವನ್ನು ಬಳಸದಂತಾಗಿದೆ.
ಬಾಕಿ ಉಳಿದಿರುವ ವಿದ್ಯುತ್ ಕಾಮಗಾರಿ ಪೂರ್ಣ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸಂಬಂಧಪಟ್ಟ ಶಿವಮೊಗ್ಗ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಪತ್ರದ ಮೇಲೆ ಪತ್ರ ಬರೆಯಲಾಗಿದೆ. ಆದರೂ ಸಹ ಸಮರ್ಪಕ ವಿದ್ಯುತ್ ಪಾಯಿಂಟ್ ಅಳವಡಿಸುವ ಗೋಜಿಗೆ ಹೋಗಿಲ್ಲ. ಲಿಫ್ಟ್ ಕಾಮಗಾರಿ ತಡವಾದರೂ ಚಿಂತೆಯಿಲ್ಲ ಆದರೆ ವಿದ್ಯುತ್ ಸೌಲಭ್ಯ ಸಮರ್ಪಕವಾಗಿರಬೇಕು ಎಂದು ಗುತ್ತಿಗೆದಾರರಿಗೆ ಐದಾರು ಬಾರಿ ಪತ್ರ ಮುಖೇನ ತಿಳಿಸಲಾಗಿದ್ದರು, ಸಹ ಎಸ್ಟಿಮೇಟ್‌ನಲ್ಲಿನ ಕೆಲಸ ಮಾಡಿದ್ದೇವೆ ಎಂಬ ಉತ್ತರ ಬರುತ್ತಲಿದೆ. ಇನ್ನಷ್ಟು ಅನುದಾನದ ಬೇಡಿಕೆ ಇಟ್ಟಿದ್ದು ಅದರ ಪೂರೈಕೆಗಾಗಿ ಕಾಯಲಾಗುತ್ತಿದೆ.ನೂತನ ಕಚೇರಿ ಕಟ್ಟಡದ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಕಚೇರಿಯನ್ನು ತಮಗೆ ಹಸ್ತಾಂತರ ಮಾಡಿ ಎಂದು ಮಾರ್ಚ್, ಮೇ, ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಜೊತೆಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗುತ್ತಿಗೆದಾರನಿಗೆ ಕರೆ ಮಾಡಿ ಉಳಿದ ಕೆಲಸ ಮುಗಿಸುವಂತೆ ತಾಕೀತು ಮಾಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಿವಮೊಗ್ಗಕ್ಕೆ ಕಳಿಸಿರುವ ಎಲ್ಲಾ ಪತ್ರಗಳನ್ನು ಉಲ್ಲೇಖಿಸಿ ಎಲೆಕ್ಟ್ರಾನಿಕ್ ಗುತ್ತಿಗೆದಾರನಿಗೆ ನೋಟೀಸ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೂ ಸಹ ಕಚೇರಿ ಕಾಮಗಾರಿ ಸಂಪೂರ್ಣಗೊಳಿಸಿ ಶಿಕ್ಷಕರ ಅನುಕೂಲಕ್ಕೆ ಬಿಟ್ಟುಕೊಡದೆ ಅರ್ಧವರ್ಷ ಮುಗಿಸಲಾಗಿದೆ. ಯುಪಿಎಸ್ ಸೌಲಭ್ಯ ಇಲ್ಲದ ಕಚೇರಿಯಲ್ಲಿ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.ಕಚೇರಿ ಕೆಳಭಾಗದಲ್ಲಿ ಐದು ಮತ್ತು ಮೇಲ್ಭಾಗದಲ್ಲಿ ಎರಡು ಕೋಣೆಗಳು ಸೇರಿ ಒಟ್ಟು 7 ಕೋಣೆಗಳಿದ್ದು ಒಂದು ದೊಡ್ಡ ದಾಸ್ತಾನು ಒಳಗೊಂಡಿರುವ ನೂತನ ಕಟ್ಟಡದ ಬಾಗಿಲು ಯಾವಾಗ ತೆಗೆಯುತ್ತದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಆರಂಭದಲ್ಲಿ ಶಾಲಾ ಆವರಣದಲ್ಲಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ಕಟ್ಟಲು ಜಾಗ ಗುರುತು ಮಾಡಿದಾಗ ಶಾಲೆಗೆ ಆಟದ ಮೈದಾನಕ್ಕೆ ಕೊರತೆ ಉಂಟಾಗುತ್ತದೆ ಎಂದು ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದವು. ಕೊನೆಗೆ ಎಲ್ಲಾ ತೊಡಕುಗಳನ್ನು ಬಗೆಹರಿಸಿ ಕಟ್ಟಿದ ಕಟ್ಟಡ ಉದ್ಘಾಟನೆಯಾದರು ಸಹ ಕಚೇರಿ ಬಳಕೆಗೆ 5 ತಿಂಗಳಾದರೂ ಸಿಗದಿರುವುದು ದುರಂತದ ಸಂಗತಿ. ತಾಲೂಕಿನಲ್ಲಿ ಸರ್ಕಾರಿ ಅನುದಾನಿತ ಪ್ರೌಢಶಾಲೆ ಹಾಗೂ ಅತಿಥಿ ಶಿಕ್ಷಕರು ಸೇರಿದಂತೆ ಸಾವಿರಾರು ಶಿಕ್ಷಕರಿದ್ದು ಕಚೇರಿ ಕೆಲಸಕ್ಕೆಂದು ಬರುವವರಿಗೆ ಈಗಿನ ಹಳೆಯ ಬಿಇಒ ಕಚೇರಿಯಿಂದ ಹೊಸ ಕಟ್ಟಡಕ್ಕೆ ಸ್ಥಳಾತರವಾಗುವುದು ಯಾವಾಗ ಎಂಬ ಪ್ರಶ್ನೆ ಹಾಗೇ ಉಳಿದಿದೆ.-----
(ಬಾಕ್ಸ್)₹6 ಲಕ್ಷ ವೆಚ್ಚದ ವಿದ್ಯುತ್ ಕಾಮಗಾರಿ ಕೆಲಸ ಬಾಕಿ: ಸಿಎಂ ತಿಪ್ಪೇಸ್ವಾಮಿ
ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ ಮಾತನಾಡಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ಸಚಿವರ ಕಡೆಯಿಂದ ಉದ್ಘಾಟನೆಯೂ ಆಗಿದೆ. ಆದರೆ ವಿದ್ಯುತ್ ಪಾಯಿಂಟ್ ಮತ್ತು ಲಿಫ್ಟ್ ಸಮಸ್ಯೆಯಿಂದ ನೂತನ ಕಚೇರಿಗೆ ಸ್ಥಳಾಂತರವಾಗಲು ಸಾಧ್ಯವಾಗಿಲ್ಲ. ಈಗಾಗಲೇ ನಮ್ಮ ಇಲಾಖೆ ವತಿಯಿಂದ ಸಂಬಂಧಪಟ್ಟ ವಿದ್ಯುತ್ ಇಲಾಖೆಗೆ ಮತ್ತು ಕಟ್ಟಡ ನಿರ್ಮಾಣದ ಹೊಣೆ ಹೊತ್ತ ಇಲಾಖೆಗೆ ಪತ್ರ ಮುಖೇನ ಹಲವು ಬಾರಿ ಮನವಿ ಮಾಡಿ ಸಣ್ಣಪುಟ್ಟ ಸಮಸ್ಯೆಗಳ ನಿವಾರಣೆ ಮಾಡಿಕೊಡಿ ಎಂದು ಮನವಿ ಮಾಡಿದ್ದೇವೆ. ಇನ್ನೂ 6 ಲಕ್ಷ ರು. ವಿದ್ಯುತ್ ಕಾಮಗಾರಿ ಕೆಲಸವಿದೆ. ಲಿಫ್ಟ್ ಕಾಮಗಾರಿ ತಡವಾದರೂ ನಡೆಯುತ್ತದೆ. ಆದರೆ ಕಚೇರಿ ಕೆಲಸಕ್ಕೆ ಹೆಚ್ಚಿನ ವಿದ್ಯುತ್ ಪಾಯಿಂಟ್ ಬೇಕಾಗುತ್ತದೆ. ನೂತನ ಕಚೇರಿಗೆ ಈಗಿನ ಹಳೆಯ ಕಚೇರಿಯ ಉಪಕರಣಗಳನ್ನೇ ಬಳಸಿಕೊಂಡು ಕಾರ್ಯ ನಿರ್ವಹಿಸಲಾಗುತ್ತದೆ. ಆದರೆ ವಿದ್ಯುತ್ ಪಾಯಿಂಟ್‌ಗಳ ಕಾಮಗಾರಿ ಆಗಬೇಕಾಗಿದ್ದು ಸಚಿವರ ಗಮನಕ್ಕೆ ತಂದಿದ್ದೇವೆ ಎಂದರು.