ಕೊಪ್ಪಳ: ಕರ್ನಾಟಕ ರಾಜ್ಯ ಮತ್ತು ದೇಶದಲ್ಲಿ ಪ್ರತಿಭಾನ್ವಿತ ನ್ಯಾಯಾಧೀಶರಿದ್ದು, ಜಾಗತಿಕವಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ರಾಜ್ಯದ ಹೈಕೋರ್ಟಗಳಲ್ಲಿ ಮತ್ತು ದೇಶದ ಸುಪ್ರೀಂ ಕೋರ್ಟನಲ್ಲಿ ಚಿಂತನಾಶೀಲ,ಜನಪರ ಕಾಳಜಿ ಹೊಂದಿದ ನ್ಯಾಯಾಧೀಶರು ಮತ್ತು ನ್ಯಾಯಮೂರ್ತಿಗಳಿದ್ದಾರೆ. ಈ ಕಾರಣದಿಂದಲೇ ನಮಗೆ ಉತ್ತಮ ನ್ಯಾಯ ಸಿಗುತ್ತಿದೆ ಎಂದ ಅವರು, ಸುಪ್ರೀಂ ಕೋರ್ಟನ ಒಂದು ಪೀಠವು ದಕ್ಷಿಣ ಭಾರತದ ಬೆಂಗಳೂರಲ್ಲಿ ಆರಂಭವಾಗುವ ದಿಸೆಯಲ್ಲಿ ರಾಜ್ಯ ಹೈಕೋರ್ಟನ ಎಲ್ಲ ನ್ಯಾಯಾಧೀಶರು ತೀರ್ಮಾನಿಸಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಇಡೀ ಜಗತ್ತಿನಲ್ಲಿಯೇ ಉತ್ತಮ ನ್ಯಾಯಾಂಗ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಎಲ್ಲ ನ್ಯಾಯಾಧೀಶರು ಪ್ರಾಮಾಣಿಕವಾಗಿ ನ್ಯಾಯ ನೀಡುತ್ತಿದ್ದಾರೆ. ಧಾರವಾಡ ಮತ್ತು ಕಲಬುರಗಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಪೀಠ ಆರಂಭವಾಗಿದ್ದು, ತ್ವರಿತ ನ್ಯಾಯದಾನಕ್ಕೆ ಅನುಕೂಲವಾಗಿದೆ ಎಂದರು.ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಮೂಲಸೌಕರ್ಯ ಬೇಕು ಎನ್ನುವ ನ್ಯಾಯಾಧೀಶರ ಸಲಹೆ ಅಭಿವೃದ್ಧಿಗೆ ಪೂರಕವಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ಉತ್ತಮ ಮೂಲಭೂತ ಸೌಕರ್ಯವಿದೆ.
ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಒತ್ತು ನೀಡಿದೆ. ಕೊಪ್ಪಳ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಕುಕನೂರು, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ ಸಹ ಹೊಸ ನ್ಯಾಯಾಲಯಗಳ ಸಂಕೀರ್ಣ ನಿರ್ಮಾಣಕ್ಕೆ ಒತ್ತು ಕೊಡಲಾಗಿದೆ ಎಂದರು.
ಈಗಾಗಲೇ ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳಲ್ಲಿ ಕೋಲ್ಡ್ ಸ್ಟೋರೇಜ್ ಇದ್ದು, ಆಹಾರ ಸಂಸ್ಕರಣ ಘಟಕ ತೆರೆಯಲು ಅವಕಾಶವಿದೆ. ಜನತೆ ಉತ್ಸಾಹ ತೋರಬೇಕು. ಯಲಬುರ್ಗಾದಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ರಾಯರೆಡ್ಡಿ ತಿಳಿಸಿದರು.