ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ವಿವಿ ಸಾಗರದ ಒಡಲಿಗೆ ಮತ್ತೆ ಭದ್ರೆ ಹರಿದು ಬರಲಿದ್ದಾಳೆ. ಭದ್ರಾ ಜಲಾಶಯದಿಂದ ತರೀಕೆರೆ ಏತ ನೀರಾವರಿ ಯೋಜನೆಯ ಅಡಿ ಬರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಹಾಗೂ ಇದರಡಿ ಬರುವ ನಿಗದಿತ 79 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಅರ್ಧದಷ್ಟನ್ನು ತುಂಬಿಸಲು ಅನುವಾಗುವಂತೆ 1.47 ಟಿಎಂಸಿ ನೀರನ್ನು, ಪ್ರಾಯೋಗಿಕವಾಗಿ ಹರಿಸಲಾಗುತ್ತಿದೆ.ತರೀಕೆರೆ ತಾಲೂಕಿನ ಕೆರೆಗಳಿಗೆ ನೀರು ಹಾಯಿಸಲು ಕೇವಲ 100 ಕ್ಯುಸೆಕ್ಸ್ ನೀರಿಗೆ ಕೊಳವೆ ಮಾರ್ಗಗಳ ಡಿಜೈನ್ ಮಾಡಲಾಗಿದೆ. ಭದ್ರಾ ಜಲಾಶಯದ ನೀರು ಲಿಫ್ಟ್ ಮಾಡಲು ಒಂದು ಮೋಟಾರು ಪಂಪ್ ಸಾಮರ್ಥ್ಯ 700 ಕ್ಯುಸೆಕ್ ಇದೆ. ಹಾಗಾಗಿ ತರೀಕೆರೆಗೆ 100 ಕ್ಯುಸೆಕ್ ನೀರು ಕೊಡಬೇಕಾದರೆ ಉಳಿಕೆ 600 ಕ್ಯುಸೆಕ್ ನೀರನ್ನು ವಾಣಿ ವಿಲಾಸ ಜಲಾಶಯಕ್ಕೆ ಹರಿಸುವುದು ಅನಿವಾರ್ಯ.ವಿವಿ ಸಾಗರ ಜಲಾಶಯಕ್ಕೆ 2 ಟಿಎಂಸಿ ನೀರು ಹಂಚಿಕೆಯಾಗಿದ್ದು ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಕಡೂರು ಹಾಗೂ ಹೊಸದುರ್ಗ ತಾಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಭಾಗಶಃ ಕೆರೆಗಳಿಗೆ ನೀರನ್ನು ಹರಿಸಲು 0.50 ಟಿಎಂಸಿ ಮತ್ತು ಕಡೂರು ಕೆರೆ ತುಂಬುವ ಯೋಜನೆಯ ಹಂತ 1 ರಡಿ ಬರುವ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು 0.24 ಟಿಎಂಸಿ ಸೇರಿದಂತೆ ಭದ್ರಾ ಜಲಾಶಯದಿಂದ ಸುಮಾರು 4.21 ಟಿಎಂಸಿ ನೀರೆತ್ತಲು ಜಲ ಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾ ಮಣಿಯವರು ಆದೇಶ ಹೊರಡಿಸಿದ್ದಾರೆ.
ವಿವಿ ಸಾಗರ ಜಲಾಶಯದಲ್ಲಿ 23.943 ಟಿಎಂಸಿ ಅಂದರೆ 124.50 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ಡಿಸೆಂಬರ್‌ನಲ್ಲಿ ಜಲಾಶಯ 3ನೇ ಬಾರಿ ಕೋಡಿ ಬಿದ್ದಿತ್ತು. ಬರಗಾಲದ ಪ್ರದೇಶವೆಂದೇ ಗುರುತಿಸಿಕೊಂಡಿರುವ ಈ ಭಾಗಕ್ಕೆ ವಿವಿ ಸಾಗರ ಜಲಾಶಯವೇ ಆಧಾರ ಸ್ಥಂಬವಾಗಿದ್ದು ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲೂಕುಗಳ ಜನರ ಕುಡಿಯುವ ನೀರಿನ ದಾಹ ಹಿಂಗಿಸುವ ಜಲಾಶಯವು 12.135 ಹೆಕ್ಟರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಮಳೆಗಾಲವಿದ್ದು ನೀರು ಲಿಫ್ಟ್ ಮಾಡಿದರೆ ಈ ಬಾರಿಯೂ ವಾಣಿವಿಲಾಸ ಸಾಗರ ಭರ್ತಿ ಆಗಲಿದೆ.ನೀರು ಲಿಫ್ಟ್ ಮಾಡಲು ರಾಜ್ಯ ಸರ್ಕಾರ ಅನುಮತಿಸಿದ್ದು ಭದ್ರಾ ಮೇಲ್ದಂಡೆ ಅಧಿಕಾರಿಗಳು ವೇಳಾಪಟ್ಡಿ ಪ್ರಕಟಿಸುವುದು ಬಾಕಿ ಇದೆ.