ಸಂಜೀವಕುಮಾರ ಹಿರೇಮಠ
ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ, ಪ್ರಕೃತಿಯನ್ನು ದೇವರೆಂದು ನಂಬುವ ಭಾರತೀಯ ಸಂಸ್ಕೃತಿಯ ಅನಾದಿ ಕಾಲದ ಆಚರಣೆಯೊಂದಕ್ಕೆ ಸಮೀಪದ ಬೆನಹಾಳ ಗ್ರಾಮ ಸಾಕ್ಷಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ಇಲ್ಲಿನ ರೈತ ಮಹಿಳೆಯರು ಮಳೆರಾಯನನ್ನು ಒಲಿಸಿಕೊಳ್ಳಲು ನಿರಂತರ ಜಾಗರಣೆ ಮಾಡುತ್ತಾ, ಜಾನಪದ ಸೊಗಡಿನ ಪದಗಳನ್ನು ಕಟ್ಟಿ ವರುಣದೇವನಿಗೆ ಮೊರೆ ಇಡುತ್ತಿದ್ದಾರೆ.
ಹಿರಿಯರ ಹಾದಿಯಲ್ಲಿ ಜಾಗರಣೆ: ಸಾಮಾನ್ಯವಾಗಿ ಮಳೆ ಕೈಕೊಟ್ಟಾಗ ಭಜನೆ, ವಿಶೇಷ ಪೂಜೆ, ಜಾಗರಣೆ ಮಾಡುವುದು ಗ್ರಾಮೀಣ ಭಾಗದಲ್ಲಿ ವಾಡಿಕೆ. ಆದರೆ ಬೆನಹಾಳ ಗ್ರಾಮದ ಮಾರುತೇಶ್ವರ ನಾಟ್ಯ ಸಂಘದ ಆವರಣದಲ್ಲಿ ನಡೆಯುತ್ತಿರುವ ಈ ದೃಶ್ಯ ಮಾತ್ರ ಇಡೀ ಭಾಗದ ಗಮನ ಸೆಳೆಯುತ್ತಿದೆ. ಪ್ರತಿದಿನ ರಾತ್ರಿ ಕತ್ತಲಾಗುತ್ತಿದ್ದಂತೆ ನೂರಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು ಒಂದೆಡೆ ಸೇರುತ್ತಾರೆ. ತಡರಾತ್ರಿ 2 ಗಂಟೆ ವರೆಗೂ ಒಣಗುತ್ತಿರುವ ಹೊಲಗಳ ಚಿಂತೆಯಲ್ಲಿ ಮಳೆರಾಯನ ಕೃಪೆಗಾಗಿ ಪ್ರಾರ್ಥಿಸುತ್ತಿದ್ದಾರೆ.ಪದಗಳಲ್ಲಿದೆ ನೋವು: ಕೇವಲ ಉಪವಾಸ, ಜಾಗರಣೆಯಷ್ಟೇ ಅಲ್ಲದೇ ಮಹಿಳೆಯರು ಮಳೆರಾಯನ ಮೇಲೆ ತಾವೇ ಸ್ವತಃ ಜಾನಪದ ಶೈಲಿಯಲ್ಲಿ ಭಾವನಾತ್ಮಕ ಪದಗಳನ್ನು ಕಟ್ಟಿ ಹಾಡುತ್ತಿದ್ದಾರೆ. ಬಿತ್ತನೆಗಾಗಿ ಸಾಲ-ಸೋಲ ಮಾಡಿ, ಬೆವರು ಹರಿಸಿ ಬೆಳೆಸಿದ ಬೆಳೆಗಳು ಕೈಗೆ ಬರುವ ಹೊತ್ತಿಗೆ ಮಳೆಯಿಲ್ಲದೆ ಒಣಗುತ್ತಿರುವುದನ್ನು ಕಂಡು ನೊಂದ ಜೀವಗಳು ಹಾಡುವ ಈ ಪದಗಳು, ಕೇವಲ ಗೀತೆಯಾಗಿರದೇ ರೈತ ಸಮುದಾಯದ ಒಡಲೊಳಗಿನ ನೋವಾಗಿದೆ.
ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದಾಗ ಹಿರಿಯರು ಹೀಗೆ ಜಾಗರಣೆ ಕುಳಿತು ಮಳೆರಾಯನನ್ನು ಕರೆಯುತ್ತಿದ್ದರು. ಆಗ ವರುಣದೇವ ಒಲಿದು ಭಿನ್ನಹಕ್ಕೆ ಓಗೊಟ್ಟು ಧರೆಗೆ ಇಳಿಯುತ್ತಿದ್ದನಂತೆ. ಅದೇ ನಂಬಿಕೆಯನ್ನು ಇಟ್ಟುಕೊಂಡು ನಾವು ಕೂಡ ಹಿರಿಯರ ವಾಣಿಯಂತೆ ಜಾಗರಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ಬೆನಹಾಳ ಗ್ರಾಮದ ರೈತ ಮಹಿಳೆಯರು.