ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಈ ಬಾರಿಯೂ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಹೊರಗಿನವರು

KannadaprabhaNewsNetwork |  
Published : Mar 14, 2024, 02:03 AM IST
ಸೋಮಣ್ಣ | Kannada Prabha

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರಿಗೆ ಟಿಕೆಟ್ ಘೋಷಣೆಯಾಗುವ ಮೂಲಕ ಕಳೆದ ಬಾರಿಯಂತೆ ಈ ಬಾರಿಯೂ ಹೊರಗಿನವರಿಗೆ ಮಣೆ ಹಾಕಿದಂತಾಗಿದೆ.

ಉಗಮ ಶ್ರೀನಿವಾಸ್

ಕನ್ನಡಪ್ರಭ ವಾರ್ತೆ, ತುಮಕೂರು

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಅವರಿಗೆ ಟಿಕೆಟ್ ಘೋಷಣೆಯಾಗುವ ಮೂಲಕ ಕಳೆದ ಬಾರಿಯಂತೆ ಈ ಬಾರಿಯೂ ಹೊರಗಿನವರಿಗೆ ಮಣೆ ಹಾಕಿದಂತಾಗಿದೆ. ಕಳೆದ ಬಾರಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಜೆಡಿಎಸ್, ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ವಿ. ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗುವುದು. ಅಲ್ಲದೇ ಕುಮಾರಸ್ವಾಮಿ ಅವರೇ ಸ್ಪರ್ಧಿಸುತ್ತಾರೆಂಬ ಎಲ್ಲಾ ಊಹಾಪೋಗಳಿಗೆ ಬಿಜೆಪಿ ಪಕ್ಷ ಟಿಕೆಟ್ ಘೋಷಿಸುವುದರೊಂದಿಗೆ ತೆರೆ ಬಿದ್ದಿದೆ.ತುಂಬಾ ಜನ ಆಕಾಂಕ್ಷಿಗಳಿದ್ದರು....

ಹಾಗೆ ನೋಡಿದರೆ ಹಾಲಿ ಸಂಸದ ಜಿ.ಎಸ್. ಬಸವರಾಜು ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ದಿನದಿಂದ ಹಲವಾರು ಅಭ್ಯರ್ಥಿಗಳು ಬಿಜೆಪಿ ವರಿಷ್ಠರ ಗಮನ ಸೆಳೆಯಲು ಸಾಕಷ್ಟು ಕಸರತ್ತು ನಡೆಸಿದ್ದರು. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಕೂಡ ಆಕಾಂಕ್ಷಿಯಾಗಿದ್ದರು. ಅಲ್ಲದೇ ಮಾಧುಸ್ವಾಮಿಗೆ ಟಿಕೆಟ್ ನೀಡಬೇಕೆಂದು ಅವರ ಬೆಂಬಲಿಗರು ಟೈರ್ ಸುಟ್ಟಿ ಪ್ರತಿಭಟನೆ ನಡೆಸಿದರು. ಆದರೆ ಯಾವ ಒತ್ತಡಕ್ಕೂ ಮಣೆ ಹಾಕದೇ ಹೈಕಮಾಂಡ್ ಸೋಮಣ್ಣಗೆ ಟಿಕೆಟ್ ನೀಡಿದೆ.

ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾಗಿದ್ದ ಮುದ್ದಹನುಮೇಗೌಡರು ಕೂಡ ಈ ಬಾರಿ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಟಿಕೆಟ್ ಸಿಗುವುದಿಲ್ಲವೆಂದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಟಿಕೆಟ್ ಕೂಡ ಗಿಟ್ಟಿಸಿಕೊಂಡರು. ಇನ್ನು ಸಿದ್ಧಗಂಗಾ ಆಸ್ಪತ್ರೆಯ ಡಾ. ಪರಮೇಶ್ ಕೂಡ ಟಿಕೆಟ್ ಗಾಗಿ ಸಾಕಷ್ಟು ಕಸರತ್ತು ನಡೆಸಿದ್ದರು. ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಅವರಿಗೂ ಸಹ ಟಿಕೆಟ್ ಸಿಗಲಿಲ್ಲ. ಇನ್ನು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಕೂಡ ಟಿಕೆಟ್ ಆಕಾಂಕ್ಷಿ ರೇಸ್ ನಲ್ಲಿದ್ದರು. ಈ ಹಿಂದೆ ಜಿ.ಪಂ. ಸದಸ್ಯರಾಗಿದ್ದ ಹಾಗೂ ಎರಡನೇ ಬಾರಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಹೆಬ್ಬಾಕ ಅವರಿಗೂ ಟಿಕೆಟ್ ಸಿಗಲಿಲ್ಲ.ಉಳಿದಂತೆ ಸಂಘ ಪರಿವಾರದಲ್ಲಿ ಸಾಕಷ್ಟು ಗುರುತಿಸಿಕೊಂಡಿರುವ ಸ್ಪೂರ್ತಿ ಡೆವಲಪರ್ಸ್ ನ ಚಿದಾನಂದ್, ವಿನಯ ಬಿದರೆ ಹಾಗೂ ಎಚ್.ಎನ್. ಚಂದ್ರಶೇಖರ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ವಿ. ಸೋಮಣ್ಣ ಅವರಿಗೆ ಟಿಕೆಟ್ ನೀಡುವುದರೊಂದಿಗೆ ಟಿಕೆಟ್ ಗಾಗಿ ನಡೆದ ಎಲ್ಲಾ ತೆರೆಮರೆ ರಾಜಕೀಯಕ್ಕೆ ತೆರೆ ಬಿದ್ದಂತಾಗಿದೆ.

ವಿ.ಸೋಮಣ್ಣ ಅವರು ಈ ಹಿಂದೆ ತುಮಕೂರು ಜಿಲ್ಲೆಗೆ ಉಸ್ತುವಾರಿಯಾಗಿದ್ದರು. ಅಲ್ಲದೇ ಸಿದ್ಧಗಂಗಾ ಮಠದ ಭಕ್ತರೂ ಆಗಿದ್ದರು. ಎಲ್ಲಕ್ಕೂ ಮಿಗಿಲಾಗಿ ಜಿಲ್ಲೆಯ ಹಳ್ಳಿಗಳನ್ನು ಸುತ್ತಾಡಿದ್ದಾರೆ. ತುಂಬಾ ಮಂದಿಯ ಪರಿಚಯ ಕೂಡ ಇವರಿಗೆ ಇದೆ. ಸದ್ಯ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರ ಬರಲಿದ್ದು ಇದರಲ್ಲಿ ಕೊರಟಗೆರೆ, ಮಧುಗಿರಿ, ತಿಪಟೂರು ಮತ್ತು ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ ಇನ್ನು ಬಿಜೆಪಿ ತುಮಕೂರು ನಗರ, ಮತ್ತು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರಿದ್ದಾರೆ. ಹಾಗೆಯೇ ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆಯಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಒಟ್ಟಾರೆಯಾಗಿ 8 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ 4 ಶಾಸಕರು ಹಾಗೂ ಮೈತ್ರಿಯ 4 ಶಾಸಕರಿದ್ದು ಯಾರಿಗೆ ವಿಜಯದ ಮಾಲೆ ಬೀಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!