ಚಿಕ್ಕಮಗಳೂರುಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡುವಂತೆ ಚಿಕ್ಕಮಗಳೂರಿನ ಕುದುರೆಮುಖ ಭಾಗದ ಕೆಲವು ಚಾರಣದ ದಾರಿಗಳಲ್ಲಿ ನೀಲಕುರಿಂಜಿಯಂತಹ ನೀಲಿ–ನೇರಳೆ ಬಣ್ಣದ ಅಪರೂಪದ ಹೂವುಗಳು ಅರಳಿದ್ದು, ಚಾರಣಪ್ರಿಯರು ಹಾಗೂ ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿವೆ.
ಚಾರಣಪ್ರಿಯರು, ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿರುವ ನೀಲಿ ಸುಂದರಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡುವಂತೆ ಚಿಕ್ಕಮಗಳೂರಿನ ಕುದುರೆಮುಖ ಭಾಗದ ಕೆಲವು ಚಾರಣದ ದಾರಿಗಳಲ್ಲಿ ನೀಲಕುರಿಂಜಿಯಂತಹ ನೀಲಿ–ನೇರಳೆ ಬಣ್ಣದ ಅಪರೂಪದ ಹೂವುಗಳು ಅರಳಿದ್ದು, ಚಾರಣಪ್ರಿಯರು ಹಾಗೂ ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿವೆ.
2022-23 ನೇ ಸಾಲಿನಲ್ಲಿ ಕುದುರೆಮುಖದ ಕೆಲವು ಬೆಟ್ಟ ಪ್ರದೇಶಗಳಲ್ಲಿ ಈ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದರೆ, ಈ ಬಾರಿ ಸೀಮಿತ ಪ್ರಮಾಣದಲ್ಲಿ ಅರಳಿರುವುದು ಕಂಡುಬಂದಿದೆ.
ಹಸಿರು ಬೆಟ್ಟಗಳ ನಡುವೆ ಅಲ್ಲಲ್ಲಿ ಅರಳಿರುವ ನೀಲಿ–ನೇರಳೆ ಹೂವುಗಳು ಕುದುರೆಮುಖದ ನೈಸರ್ಗಿಕ ಸೌಂದರ್ಯಕ್ಕೆ ಹೊಸ ಆಕರ್ಷಣೆ ನೀಡುತ್ತಿವೆ.
ಕುದುರೆಮುಖದ ಚಾರಣ, ಪ್ರಕೃತಿ ವೀಕ್ಷಣೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ವಿವಿಧ ಚಾರಣ ಮಾರ್ಗಗಳಿದ್ದು, ಇಲ್ಲಿನ ಹುಲ್ಲುಗಾವಲು, ಶೋಲಾ ಕಾಡುಗಳು, ಜಲ ಧಾರೆಗಳು ಹಾಗೂ ಸಮೃದ್ಧ ಜೀವವೈವಿಧ್ಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ.
ನೀಲಕುರಿಂಜಿಯ ನೀಲಿ ಲೋಕ
ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ನೀಲಿ–ನೇರಳೆ ಬಣ್ಣದಲ್ಲಿ ಕಂಗೊಳಿಸುವ ಅಪರೂಪದ ಹೂವುಗಳೆಂದೇ ನೀಲಕುರಿಂಜಿ ಜನಪ್ರಿಯವಾಗಿದೆ. ಹೂವುಗಳ ಅರಳುವಿಕೆ ಪ್ರಕೃತಿಯ ವಿಶಿಷ್ಟ ಎಕಲಾಜಿಕಲ್ ಸೈಕಲ್‌ನ ಭಾಗವಾಗಿದೆ. ಈ ಹೂವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಹೂವುಗಳನ್ನು ಕೀಳದಂತೆ, ಗಿಡಗಳಿಗೆ ಹಾನಿ ಮಾಡದಂತೆ ಹಾಗೂ ಪರಿಸರದ ಸ್ವಚ್ಛತೆ ಕಾಪಾಡುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.
ಕರ್ನಾಟಕ ಪ್ರವಾಸೋದ್ಯಮವೂ ಕುದುರೆಮುಖವನ್ನು ಪ್ರಕೃತಿ ಮತ್ತು ಪರಿಸರ ಆಧಾರಿತ ಪ್ರವಾಸೋದ್ಯಮ ತಾಣವಾಗಿ ಗುರುತಿಸಿದೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರವಾಸೋದ್ಯಮದ ಅವಕಾಶವಾಗಿ ಬಳಸಿಕೊಳ್ಳುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಕುದುರೆಮುಖದಂತಹ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಚಾರಣ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ನಿಯಮಗಳು ಮತ್ತು ಅನುಮತಿಗೆ ಅನುಗುಣವಾಗಿಯೇ ನಡೆಯಬೇಕು.
ಪ್ರವಾಸಿಗರಿಗೆ ಮಾಹಿತಿ- ಸೌಲಭ್ಯಕ್ಕೆ ಒತ್ತು
ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ ಹಾಗೂ ಅವುಗಳ ಪರಿಸರ ಮಹತ್ವದ ಕುರಿತು ಪ್ರವಾಸಿಗರಿಗೆ ಸೂಕ್ತ ಮಾಹಿತಿ ಒದಗಿಸುವುದು, ನೈಸರ್ಗಿಕ ತಾಣಗಳಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮ ಉತ್ತೇಜಿಸುವುದು ಹಾಗೂ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.-- ಕೋಟ್ --
ಕುದುರೆಮುಖದ ಬೆಟ್ಟಗಳಲ್ಲಿ ಅರಳಿರುವ ನೀಲಕುರಿಂಜಿಯಂತಹ ಹೂವುಗಳು ಕರ್ನಾಟಕದ ಪ್ರಕೃತಿ ಸಂಪತ್ತಿನ ಅಪೂರ್ವ ಸೌಂದರ್ಯ ನಮಗೆ ಪರಿಚಯಿಸುತ್ತವೆ. ಇಂತಹ ನೈಸರ್ಗಿಕ ವಿಶೇಷತೆ ವೀಕ್ಷಿಸಲು ತೆರಳುವ ವೇಳೆ ಪರಿಸರ ಸ್ನೇಹಿ ಪ್ರವಾಸ ಕೈಗೊಳ್ಳಬೇಕು. ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಜೊತೆಗೆ, ಅದರ ಸಂರಕ್ಷಣೆ ಜವಾಬ್ದಾರಿ ಅರಿತುಕೊಳ್ಳಬೇಕು.
- ಕೆ.ಜೆ. ಜಾರ್ಜ್, ಪ್ರವಾಸೋದ್ಯಮ ಸಚಿವ-- ಕೋಟ್---
ಕುದುರೆಮುಖದಲ್ಲಿ ಈ ಬಾರಿ ಸೀಮಿತ ಪ್ರಮಾಣದಲ್ಲಿ ಕಂಡುಬರುತ್ತಿರುವ ನೀಲಿ–ನೇರಳೆ ಹೂವುಗಳು ಚಾರಣಪ್ರಿಯರು ಮತ್ತು ಪ್ರಕೃತಿ ಪ್ರವಾಸಿಗರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ. ಇಂತಹ ನೈಸರ್ಗಿಕ ವಿದ್ಯಮಾನ ಪರಿಸರಸ್ನೇಹಿ ಪ್ರವಾಸೋದ್ಯಮದೊಂದಿಗೆ ಪರಿಚಯಿಸುವ ಅಗತ್ಯವಿದೆ. ಹೂವುಗಳು ಮತ್ತು ಅವುಗಳ ಆವಾಸಸ್ಥಳಕ್ಕೆ ಯಾವುದೇ ಹಾನಿ ಯಾಗದಂತೆ ಪ್ರವಾಸಿಗರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ಮತ್ತು ಸೌಲಭ್ಯ ಒದಗಿಸುವ ಕುರಿತು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
- ಡಾ. ರಾಮ್ ಪ್ರಸಾತ್ ಮನೋಹರ್, ಸರ್ಕಾರದ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.