ಮೀನುಗಾರಿಕೆ ಮುಗಿಸಿ ಶುಕ್ರವಾರ ನಸುಕಿನ ಜಾವ ನಾಲ್ಕು ಗಂಟೆಗೆ ವಾಪಸಾಗುತ್ತಿದ್ದಾಗ ಉಳ್ಳಾಲ ಸಮುದ್ರದಲ್ಲಿ ಕಲ್ಲೊಂದಕ್ಕೆ ಡಿಕ್ಕಿಯಾಗಿ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಉಳ್ಳಾಲ
ಅರಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟ್ ಶುಕ್ರವಾರ ಮುಂಜಾನೆ ಉಳ್ಳಾಲ ಸಮುದ್ರ ಮಧ್ಯೆ ಮುಳುಗಡೆಯಾಗಿದೆ. ಆದರೆ ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಸಕಾಲಿಕ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ಸತತ ಕಾರ್ಯಾಚರಣೆ ಬಳಿಕ ಮುಳುಗಡೆಯಾದ ಬೋಟ್‌ನ್ನು ಸಹ ದಡಕ್ಕೆ ಸೇರಿಸಲಾಗಿದೆ.ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರ ಮಾಲೀಕತ್ವದ ‘ನವಾಮಿ ಶಿವಾನಿ’ ಹೆಸರಿನ ಟ್ರಾಲ್ ಬೋಟ್‌ನಲ್ಲಿ ಸ್ಥಳೀಯ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶದ ಐವರು ಮೀನುಗಾರರು ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ಮುಗಿಸಿ ಶುಕ್ರವಾರ ನಸುಕಿನ ಜಾವ ನಾಲ್ಕು ಗಂಟೆಗೆ ವಾಪಸಾಗುತ್ತಿದ್ದಾಗ ಉಳ್ಳಾಲ ಸಮುದ್ರದಲ್ಲಿ ಕಲ್ಲೊಂದಕ್ಕೆ ಡಿಕ್ಕಿಯಾಗಿ ಬೋಟ್ ಮುಳುಗಡೆಯಾಗಿದೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳೀಯ ಮೀನುಗಾರಿಕೆಗೆ ತೆರಳಿದ್ದ ಬೇರೆ ಎರಡು ಬೋಟ್‌ನ ಮೀನುಗಾರರು ಬೋಟ್‌ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‌ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು, ಬೋಟ್‌ಗೆ ಹಾನಿಯಾಗಿದೆ.
ಬೋಟ್‌ನಲ್ಲಿದ್ದ ಮೂವರನ್ನು ನಾಡದೋಣಿಯಲ್ಲಿ ಆಗಮಿಸಿದ ರಾಮ ಸುವರ್ಣ ಮತ್ತು ಯತೀಶ್ ಸುವರ್ಣ ರಕ್ಷಿಸಿದರೆ, ಉಳಿದ ಇಬ್ಬರನ್ನು ಪ್ರಕಾಶ್ ಖಾರ್ವಿ ಮಾಲೀಕತ್ವದ ದುರ್ಗಾ ಲಕ್ಷ್ಮಿ ಮತ್ತು ಮನೋಜ್ ಖಾರ್ವಿ ಮಾಲೀಕತ್ವದ ಶ್ರೀ ಗೌರಿ ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ.ಕಲ್ಲಿಗೆ ಡಿಕ್ಕಿಯಾಗಿ ಹಾನಿ: ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ‘ನವಾಮಿ ಶಿವಾನಿ’ ಬೋಟ್‌ನ ಪ್ರೊಫೈಲರ್‌ಗೆ ಸಮುದ್ರದಲ್ಲಿ ಕಡಲ್ಕೊರೆತ ತಡೆಗೆ ರೀಫ್ ಬಳಿ ಹಾಕಿದ್ದ ಸರ್ವೆ ಕಲ್ಲಿಗೆ ಡಿಕ್ಕಿಯಾಗಿ ಪ್ರೊಪೈಲರ್ ನಿಂತಿದ್ದು, ಬಳಿಕ ಬೋಟ್ ಮುಳುಗಲಾರಂಭಿಸಿತ್ತು. ಬೋಟ್ ಮುಳುಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಮೀನುಗಾರಿಕೆಗೆ ತೆರಳಿದ್ದ ದುರ್ಗಾಲಕ್ಷ್ಮೀ ಮತ್ತು ಶ್ರೀ ಗೌರಿ ಬೋಟ್‌ನ ಮೀನುಗಾರರು ರಕ್ಷಿಸಿ, ಮುಳುಗುತ್ತಿದ್ದ ಬೋಟನ್ನು ಸಮುದ್ರ ಕಿನಾರೆಗೆ ಎಳೆದುಕೊಂಡು ಹೋಗಿದ್ದಾರೆ. ಹಗ್ಗ ಕಟ್ಟಿ ಸ್ವಲ್ಪ ದೂರ ಎಳೆದುಕೊಂಡು ಹೋದಾಗ ಹಗ್ಗ ತುಂಡಾಗಿದೆ. ಬಳಿಕ ಅಶ್ವಿನ್ ಕೋಟ್ಯಾನ್ ಮಾಲೀಕತ್ವದ ಜೈ ಮಾರುತಿ ಸ್ಪೀಡ್ ಬೋಟ್ ಮೂಲಕ ಹಳೆ ಬಂದರು ದಕ್ಕೆಗೆ ಎಳೆದು ತರಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.