ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಅರುಣ್ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲೆಯ ಶಿಕ್ಷಕಿ ಭಾರತಿ ದಂಪತಿಯ ಪುತ್ರ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ (13) ಮೃತ ಬಾಲಕ.
ಕನ್ನಡಪ್ರಭ ವಾರ್ತೆ ಕುಂದಾಪುರ ಮನೆಯಿಂದ ಶಾಲೆಗೆ ಹೊರಟಿದ್ದ ವೇಳೆ ಕುಸಿದು ಬಿದ್ದು 13 ವರ್ಷದ ಬಾಲಕ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ತಲ್ಲೂರಿನಲ್ಲಿ ಸಂಭವಿಸಿದೆ. ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಅರುಣ್ ಶೆಟ್ಟಿ ಹಾಗೂ ಹಕ್ಲಾಡಿ ಪ್ರೌಢಶಾಲೆಯ ಶಿಕ್ಷಕಿ ಭಾರತಿ ದಂಪತಿಯ ಪುತ್ರ, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪೃಥ್ವಿರಾಜ್ ಶೆಟ್ಟಿ (13) ಮೃತ ಬಾಲಕ. ಶನಿವಾರ ಬೆಳಗ್ಗೆ 9 ಗಂಟೆಯ ವೇಳೆ ಶಾಲೆಯ ಬಸ್‌ಗೆ ತೆರಳಲು ಮನೆಯಿಂದ ಪೋಷಕರಿಗೆ ಟಾಟಾ ಹೇಳಿ ಓಡುತ್ತಲೇ ಹೋಗಿದ್ದ ಪೃಥ್ವಿರಾಜ್ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದನು. ಪುತ್ರ ಬಿದ್ದಿರುವುದನ್ನು ನೋಡಿ ಓಡಿ ಬಂದ ತಂದೆ ಅರುಣ್ ಶೆಟ್ಟಿ, ಮಗನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಬಾಲಕನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಪೃಥ್ವಿರಾಜ್ ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಜ ಕಾರಣ ತಿಳಿಯಬೇಕಾಗಿದೆ. ವರ್ಷದೊಳಗೆ ಎರಡು ದುರಂತ: ಓರ್ವ ಪುತ್ರಿ ಹಾಗೂ ಪುತ್ರನನ್ನು ಹೊಂದಿದ್ದ ಅರುಣ್ ಶೆಟ್ಟಿ ಹಾಗೂ ಭಾರತಿ ದಂಪತಿಗೆ ಈಗ ಮಗನ ಸಾವು ಎರಡನೇ ದುರಂತವಾಗಿ. ಕಳೆದ ವರ್ಷ ಅಕ್ಟೋಬರ್ 27ರಂದು 8ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಅನುಶ್ರೀ (14) ಮನೆಯ ಮೊದಲ ಮಹಡಿಯಲ್ಲಿ ಓದುತ್ತಿದ್ದಾಗ, ಇದೇ ರೀತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಮೃತಪಟ್ಟಿದ್ದಳು. ಇದೀಗ ಓರ್ವ ಪುತ್ರನೂ ಅಸುನೀಗಿರುವುದು ಹೆತ್ತವರನ್ನು ಶೋಕದಲ್ಲಿ ಮುಳುಗಿಸಿದೆ. ಶುಕ್ರವಾರ ಹುಟ್ಟುಹಬ್ಬದ ಸಂಭ್ರಮ: ಅ.20ರಂದು ಪೃಥ್ವಿರಾಜ್ ಜನ್ಮದಿನ. ಕಳೆದ ವರ್ಷ ತಮ್ಮನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಅಕ್ಕ ಅನುಶ್ರೀ, ಒಂದು ವಾರದ ಬಳಿಕ ಇಹಲೋಕ ತ್ಯಜಿಸಿದ್ದಳು. ಈ ಬಾರಿ ಅಗಲಿದ ಪ್ರೀತಿಯ ಅಕ್ಕನ ನೆನಪಿನಲ್ಲೇ ದುಖಃದಿಂದ ಜನ್ಮದಿನ ಆಚರಿಸಿದ್ದ ಪೃಥ್ವಿರಾಜ್, ಮರುದಿನವೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಪದೇ-ಪದೇ ವೈದ್ಯಕೀಯ ಪರೀಕ್ಷೆ: ಪುತ್ರಿ ಅನುಶ್ರೀ ಅವರ ಆಕಸ್ಮಿಕ ದುರಂತದಿಂದ ಕಂಗೆಟ್ಟಿದ್ದ ಪೋಷಕರು ಪುತ್ರನ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿದ್ದರು. ಮಗಳ ಸಾವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯ ಸಂಬಂಧಿ ಕಾರಣಗಳನ್ನು ಹೇಳಿದ್ದರಿಂದ, ನಿಯಮಿತವಾಗಿ ಪುತ್ರನನ್ನು ಹೃದಯ ತಜ್ಞರ ಬಳಿಯಲ್ಲಿ ತಪಾಸಣೆ ನಡೆಸಿ, ಆರೋಗ್ಯದ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪುತ್ರನ ಅಕಾಲಿಕ ಮರಣ ಹೆತ್ತವರನ್ನು ಕಾಡುತ್ತಿದೆ. ಶಾಸಕರಾದ ಗುರುರಾಜ್ ಗಂಟಿಹೊಳೆ, ಎ. ಕಿರಣಕುಮಾರ ಕೊಡ್ಗಿ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಮತ್ತಿತರರು ಸಂತಾಪ ಸೂಚಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.