ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿಈ ವರ್ಷ ಬರಗಾಲದ ಮಧ್ಯೆಯೂ ರೈತರು ಸೀಗಿ ಹುಣ್ಣಿಮೆಯ ಚರಗಕ್ಕೆ ಸಿದ್ಧರಾಗಿದ್ದಾರೆ.
ಉತ್ತಮವಾಗಿ ಮಳೆಯಾದ ವರ್ಷ ಈ ಸಮಯದಲ್ಲಿ ಭೂತಾಯಿ ಹಸಿರು ಸೀರೆಯುಟ್ಟಂತೆ ಕಂಗೊಳಿಸುತ್ತಾಳೆ. ಆದರೆ ಈ ವರ್ಷ ಆ ಪರಿಸ್ಥಿತಿ ಇಲ್ಲ. ಆದರೂ ಕೃಷಿಕರಲ್ಲಿ ಆಶಾಭಾವನೆ ಇದೆ. ಮುಂದಿನ ಬೆಳೆಯಾದರೂ ಚೆನ್ನಾಗಿ ಬರಲಿ ಎಂಬುದು ಅವರ ಪ್ರಾರ್ಥನೆ. ಹೀಗಾಗಿ ಸಂಪ್ರದಾಯದಂತೆ ಯಾವುದೇ ಆಚರಣೆ ಬಿಡದೆ ಮಾಡುತ್ತಿದ್ದಾರೆ.ಸೀಗಿ ಹುಣ್ಣಿಮೆ ಎಂದರೆ ರೈತರಿಗೆ ಸಂಭ್ರಮ. ಇದು ಭೂಮಿತಾಯಿಯ ಪೂಜೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಶ್ರದ್ಧಾ-ಭಕ್ತಿಯಿಂದ ಆಚರಿಸುತ್ತಾರೆ. ಫಸಲಿಗೆ ಸೀರೆಯುಡಿಸಿ ಉಡಿ ಕಟ್ಟಿ, ಕುಪ್ಪುಸ ತೊಡಿಸಿ, ಪೂಜಿಸುತ್ತಾರೆ. ಪಂಚ ಪಾಂಡವರ ದ್ಯೋತಕವಾಗಿ ಜಮೀನಿನಲ್ಲಿ ೫ ಕಲ್ಲುಗಳನ್ನಿರಿಸಿ ಪೂಜೆ ಸಲ್ಲಿಸುತ್ತಾರೆ. ಹೊಲದ ನಾಲ್ಕು ಸುತ್ತ ಚೆರಗ ಚೆಲ್ಲುವಾಗ ಮುಂದೆ ಒಬ್ಬರು ನೀರನ್ನು ಸಿಂಪಡಿಸಿ ಹುಲಿಗೋ, ಹುಲ್ಲುಲಗೋ ಎಂದು ಕೂಗುತ್ತಾರೆ.
ಫಸಲಿಗೆ ಪೂಜಿಸಿ ಧನ್ಯತೆ:ಅ. 27ರಂದು ಸೀಗಿ ಹುಣ್ಣಿಮೆ ಇದ್ದು, ಕೆಲವರು ಮರುದಿನವೂ ಆಚರಣೆ ಮಾಡುತ್ತಾರೆ. ಹುಣ್ಣಿಮೆಯ ಸಡಗರ ಎರಡು ದಿನ ಕಂಡುಬರುತ್ತದೆ. ಈ ದಿನ ವಿಶೇಷವಾಗಿ ರೈತರ ಶಕ್ತಿಯಾಗಿರುವ ಬಸವಣ್ಣನೆಂದು ನಂಬಿರುವ ಎತ್ತುಗಳ ಮೈತೊಳೆದು ಸಿಂಗರಿಸಿ, ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜತೆಗೆ ಹೊಲಕ್ಕೆ ಹೋಗುತ್ತಾರೆ. ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವ ಅನುಭವಿಸುತ್ತಾರೆ.
ಹೊಲದಲ್ಲಿಯೇ ಸಿಗುವ ಗುಂಡು ಕಲ್ಲುಗಳಿಂದ ಪಾಂಡವರ ಮೂರ್ತಿ ನಿರ್ಮಿಸಿ ಅವುಗಳಿಗೂ ಪೂಜೆ ಸಲ್ಲಿಸುತ್ತಾರೆ. ಕುಟುಂಬದ ಯಜಮಾನ ಫಸಲಿಗೆ ಅರ್ಪಿಸಿರುವ ಎಡೆ (ಊಟ) ಸೇವಿಸುತ್ತಾನೆ. ಎಡೆ ಸ್ವೀಕರಿಸುವ ಸಂದರ್ಭದಲ್ಲಿ ಯಾರೊಂದಿಗೂ ಮಾಡನಾಡುವುದಿಲ್ಲ. ಅತ್ಯಂತ ಶ್ರದ್ಧೆಯಿಂದ ಪ್ರಸಾದ ಸೇವಿಸುತ್ತಾರೆ. ಅದರಿಂದ ಮುಂದಿನ ವರ್ಷದ ವರೆಗೆ ಯಾವುದೇ ತಾಪತ್ರಯ ಇಲ್ಲದಂತೆ ಫಸಲು ಕೈಹಿಡಿಯಲಿದೆ ಎನ್ನುವ ನಂಬಿಕೆ ಇದೆ.ಸಿಹಿಬುತ್ತಿಯ ಸಂಭ್ರಮ:
ಸೀಗಿ ಹುಣ್ಣಿಮೆಗಾಗಿ ಈ ಭಾಗದಲ್ಲಿ ಹತ್ತಾರು ತೆರನಾದ ಹಬ್ಬದಡುಗೆ ಸಿದ್ಧಗೊಳ್ಳುತ್ತವೆ. ಕಡುಬು, ಕರ್ಜಿಕಾಯಿ, ಹೋಳಿಗೆ, ಎಣ್ಣೆ ಹೋಳಿಗೆ, ಎಣಗಾಯಿ ಪಲ್ಯೆ, ಮಡಕಿಕಾಳು, ಹೆಸರು ಪಲ್ಯೆ, ವಿಧವಿಧದ ಬುತ್ತಿ ಹೀಗೆ ಹಲವಾರು ಪದಾರ್ಥಗಳನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜತೆಗೂಡಿ ಸೇವಿಸುತ್ತಾರೆ.ಮನೆಗೆ ಮರಳುವ ಸಂದರ್ಭದಲ್ಲಿ ಸ್ವಲ್ಪ ಫಸಲು ಕೊಯ್ದು ಮನೆಗೆ ತಂದು ಪೂಜೆ ಸಲ್ಲಿಸುತ್ತಾರೆ. ಮುಂದೆ ಫಸಲಿನ ರಾಶಿಯಲ್ಲಿ ಅದನ್ನು ಇಟ್ಟರೆ ಮತ್ತಷ್ಟು ಸಮೃದ್ಧವಾಗಲಿದೆ ಎನ್ನುವ ಭಾವನೆ ಇದೆ.
ಒಟ್ಟಾರೆ ಭೂತಾಯಿಯ ಆರಾಧನೆಗೆ ಮೀಸಲಿರುವ ಸೀಗಿ ಹುಣ್ಣಿಮೆ ಈ ಪ್ರದೇಶದಲ್ಲಿ ಅತ್ಯಂತ ಶ್ರದ್ಧೆಯಿಂದ ಮಾಡಲಾಗುತ್ತದೆ.ಸೀಗಿ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗಿದೆ. ರೈತರು ಈ ಹಬ್ಬದಂದು ಮನೆಗಳಲ್ಲಿ ವಿವಿಧ ಬಗೆಯ ಕಾಳು ಕುದಿಸಿ, ಸಿಹಿ ತಿನಿಸುಗಳನ್ನು ಮಾಡಿ ಅವುಗಳನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿ ಚೆಲ್ಲುವುದರಿಂದ ಫಸಲು ಸಮೃದ್ಧವಾಗಲಿದೆ ಎನ್ನುವ ನಂಬಿಕೆ ಇದೆ. ಜತೆಗೆ ಪಕ್ಷಿಗಳು ಅದನ್ನು ತಿನ್ನಲು ಬಂದು ಫಸಲಿಗೆ ಮುತ್ತಿರುವ ಕ್ರಿಮಿಕೀಟಗಳನ್ನು ತಿನ್ನುತ್ತವೆ ಎಂಬ ಕಾರಣವೂ ಇದೆ ಎನ್ನುತ್ತಾರೆ ಗೋಟಗೊಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶಿವಾನಂದ ಎನ್. ದೊಡ್ಡಮನಿ.