ತಾಳಿ ಕಟ್ಟುವ ವೇಳೆ ವಧು ಮದುವೆ ನಿರಾಕರಿಸಿದ ಪರಿಣಾಮ ಮದುವೆ ನಿಂತು ಹೋದ ಘಟನೆ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ. ಚಳ್ಳಕೆರೆ ಸುಕನ್ಯಾ ಹಾಗೂ ಜಿ.ಟಿ. ಮಧು ದಂಪತಿ ಮಗಳು ಯಮುನಾ ಜಿ.ಎಂ ಹಾಗೂ ಚಿಕ್ಕಬ್ಯಾಲದಕೆರೆ ನಾಗರತ್ನಮ್ಮ ಹಾಗೂ ಸಿ.ಬಿ. ಲಕ್ಷ್ಮಣ್ಣ ದಂಪತಿ ಮಗ ಮಂಜುನಾಥ್ ಅವರೊಂದಿಗೆ ಗುರುವಾರ ಚಿಕ್ಕಬ್ಯಾಲದಕೆರೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು.
ಅರ್ಧಕ್ಕೆ ನಿಂತು ಹೋದ ಮದುವೆ । ವಧುವಿನ ನಡೆಗೆ ಕಂಗಾಲಾದ ವರಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಳಿ ಕಟ್ಟುವ ವೇಳೆ ವಧು ಮದುವೆ ನಿರಾಕರಿಸಿದ ಪರಿಣಾಮ ಮದುವೆ ನಿಂತು ಹೋದ ಘಟನೆ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ಗುರುವಾರ ನಡೆದಿದೆ. ಚಳ್ಳಕೆರೆ ಸುಕನ್ಯಾ ಹಾಗೂ ಜಿ.ಟಿ. ಮಧು ದಂಪತಿ ಮಗಳು ಯಮುನಾ ಜಿ.ಎಂ ಹಾಗೂ ಚಿಕ್ಕಬ್ಯಾಲದಕೆರೆ ನಾಗರತ್ನಮ್ಮ ಹಾಗೂ ಸಿ.ಬಿ. ಲಕ್ಷ್ಮಣ್ಣ ದಂಪತಿ ಮಗ ಮಂಜುನಾಥ್ ಅವರೊಂದಿಗೆ ಗುರುವಾರ ಚಿಕ್ಕಬ್ಯಾಲದಕೆರೆಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಶಾಸ್ತ್ರೋಕ್ತವಾಗಿ ಮದುವೆ ನಡೆಸಲು ಹಿರಿಯರೆಲ್ಲಾ ನಿರ್ಧರಿಸಿದ್ದರು. ಅದರಂತೆ ಅದ್ಧೂರಿಯಾಗಿ ಮದುವೆ ಆಯೋಜನೆ ಮಾಡಿದ್ದರು. ಎಲ್ಲರ ಒಪ್ಪಿಗೆಯಂತೆ ಬುಧವಾರ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಹಲವು ಶಾಸ್ತ್ರಗಳು ನಿಯಮವಾಗಿಯೇ ನಡೆದಿದ್ದವು. ಗುರುವಾರ ಬೆಳಗ್ಗೆ 9.30ಕ್ಕೆ ತಾಳಿ ಕಟ್ಟುವ ಸಮಯದಲ್ಲಿ ವಧು ಬಲಗೈಯಲ್ಲಿ ತಾಳಿ ತಳ್ಳಿದ್ದಾಳೆ. ಹಿರಿಯರು, ಸಂಬಂಧಿಕರು ಎಷ್ಟೇ ಮನವೊಲಿಸಿದರು ವಧು ಮಾತ್ರ ಮದುವೆ ನಿರಾಕರಿಸಿದ್ದಾಳೆ. ವಧುವಿನ ವರ್ತನೆಯಿಂದ ವರ ಹಾಗೂ ಆತನ ಕುಟುಂಬ ವಿಚಲಿತರಾಗಿದ್ದಾರೆ. ವಧುವಿನ ಪೋಷಕರು ಹಾಗೂ ವರನ ಪೋಷಕರ ನಡುವೆ ಕೆಲಕಾಲ ಮಾತಿನ ಚಕಮುಕಿ ನಡೆದಿದೆ. ನಂತರ ಮದುವೆ ಸ್ಥಗಿತಗೊಳಿಸಲಾಗಿದೆ. ವಧುವಿನ ಪೋಷಕರು ಬಡವರಾಗಿದ್ದರಿಂದ ಮದುವೆಯ ಸಂಪೂರ್ಣ ವೆಚ್ಚವನ್ನು ವರನೇ ನೋಡಿಕೊಂಡಿದ್ದ ಎನ್ನಲಾಗಿದೆ. ಅಲ್ಲದೇ ವರ ಕೃಷಿಕನಾಗಿದ್ದು ಸಂಭಾವಿತನಾಗಿದ್ದ ಎನ್ನಲಾಗುತ್ತಿದೆ. ಈ ಘಟನೆಯಿಂದ ವರನ ಕುಟುಂಬ ದಿಗ್ಬ್ರಮೆಗೊಂಡಿದೆ.ವಧುವಿನ ಪ್ರೇಮ ಕಹಾನಿ:
ವಧು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಮನೆಯಲ್ಲಿ ಮದುವೆ ವಿಷಯ ಪ್ರಸ್ತಾಪಿಸಿದಾಗ ಪ್ರೀತಿ ವಿಷಯವನ್ನು ಮುಚ್ಚಿಟ್ಟಿದ್ದಾಳೆ. ತಾನು ತಂದೆ-ತಾಯಿ ಹೇಳಿದ ವರವನ್ನೇ ವಿವಾಹವಾಗುತ್ತೆನೆಂದು ಹೇಳಿ ನಂಬಿಸಿದ್ದಾಳೆ. ಈಕೆಯ ಮಾತು ನಂಬಿದ ಪೋಷಕರು ಎಂಟು ತಿಂಗಳ ಮುಂಚಿತವಾ ಗಿಯೇ ನಿಶ್ಚಿತಾರ್ಥ ಮಾಡಿದ್ದಾರೆ. ವಧುವಿನ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚನ್ನಾಗಿಲ್ಲದ ಕಾರಣ ಮದುವೆಯ ಸಂಪೂರ್ಣ ವೆಚ್ಚವನ್ನು ವರನ ಕುಟುಂಬಸ್ಥರು ಭರಿಸಿದ್ದರಂತೆ. ವಧು ಮತ್ತು ಆಕೆಯ ಪ್ರಿಯಕರ ಪೂರ್ವ ಯೋಚಿತವಾಗಿ ತಾಳಿ ಕಟ್ಟುವ ಸಂದರ್ಭದಲ್ಲಿ 112 ಮತ್ತು ಮಾಧ್ಯಮದವರಿಗೆ ಬರಲು ಹೇಳಿದ್ದು, ಈ ರೀತಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.ಅಂತಿಮವಾಗಿ ಈ ಪ್ರಕರಣ ಶ್ರೀರಾಂಪುರ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು, ಮದುವೆ ವೆಚ್ಚವನ್ನು ವಧುವಿನ ಕಡೆಯವರು ಭರಿಸಬೇಕು ಎಂದು ರಾಜಿ ಸಂಧಾನ ಮಾಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.