ಜನರ ತಲೆ ಮೇಲೆ ಕಾಂಗ್ರೆಸ್‌ ಸಾಲದ ಹೊರೆ: ವಿಪಕ್ಷ ನಾಯಕ ಆರ್.ಅಶೋಕ

KannadaprabhaNewsNetwork | Updated : Mar 16 2024, 03:32 PM IST

ಸಾರಾಂಶ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ದೇಶವಷ್ಟೇ ಅಲ್ಲ, ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ದೇಶವಷ್ಟೇ ಅಲ್ಲ, ಇಡೀ ಜಗತ್ತು ಕಾತುರದಿಂದ ಕಾಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ತಿಳಿಸಿದರು.

ನಗರದ ವಾಣಿ ಹೊಂಡಾ ಶೋ ರೂಂ ಆವರಣದಲ್ಲಿ ಶುಕ್ರವಾರ ಲೋಕಸಭಾ ಕ್ಷೇತ್ರದ ಚುನಾವಣೆ ಬಿಜೆಪಿ ಕಾರ್ಯಾಲಯ ಉದ್ಘಾಟನೆ ಹಾಗೂ 10 ವರ್ಷದ ಸಾಧನೆಯ ಪರ್ವ ರಿಪೋರ್ಟ್ ಕಾರ್ಡ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ರೈತರು, ಮಹಿಳೆಯರ ಪರವಾಗಿ ಮೋದಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. 

ಕಾಂಗ್ರೆಸ್‌ನವರು ರಾಜ್ಯದಲ್ಲಿ ಕಾಲಿಡುತ್ತಿದ್ದಂತೆ ಭೀಕರ ಬರಗಾಲ ತಂದಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಆವರಿಸುತ್ತದೆ. ಬಿಜೆಪಿಯ 10 ವರ್ಷದಲ್ಲಿ ಎಂದಿಗೂ ಬರ ಬಂದಿಲ್ಲ. ಎಲ್ಲಾ ಅಣೆಕಟ್ಟು ತುಂಬಿ, ಅತಿವೃಷ್ಟಿಯಾಗುತ್ತಿತ್ತು. ಜಾನುವಾರುಗಳು ಈಗ ಮೇವಿಲ್ಲದೇ ತತ್ತರಿಸುತ್ತಿವೆ. ಕಾಂಗ್ರೆಸ್ ಸರ್ಕಾರದ ಯೋಗ್ಯತೆಗೆ ಒಂದೇ ಒಂದು ಗೋಶಾಲೆಯೂ ಕಟ್ಟಿಲ್ಲ ಎಂದು ಟೀಕಿಸಿದರು.

ರೈತರಿಗೆ ಹಣವೇ ನೀಡುತ್ತಿಲ್ಲ: ಗ್ಯಾರಂಟಿ ಹೆಸರಿನಲ್ಲಿ ಪ್ರತಿಯೊಬ್ಬರ ತಲೆ ಮೇಲೆ 97 ಸಾವಿರ ರು. ಸಾಲ ಆಗುವಂತೆ ಸಾಲದ ಹೊರೆ ಹೊರಿಸಿದ್ದಾರೆ. ಸಿದ್ದರಾಮಯ್ಯ ಇದೇ ತಮ್ಮ ಕೊನೆಯ ಚುನಾವಣೆ ಅಂತಾ ಅಧಿಕಾರ ಮಾಡಿ, ಜನರ ತಲೆ ಮೇಲೆ ಸಾಲ ಹೊರೆ ಹೊರಿಸಿ, ಹೋಗುತ್ತಿದ್ದಾರೆ. 

ಕೇಂದ್ರದಿಂದ ರೈತರಿಗೆ 6 ಸಾವಿರ, ಹಿಂದಿನ ಬಿಜೆಪಿ ಸರ್ಕಾರ 4 ಸಾವಿರ ರು.ಗಳ ರಾಜ್ಯದ ರೈತರ ಖಾತೆಗೆ ಜಮಾ ಮಾಡುತ್ತಿತ್ತು. ಆದರೆ, ಕರುಣೆ ಇಲ್ಲದ ಕಾಂಗ್ರೆಸ್‌ ರೈತರಿಗೆ ಹಣವನ್ನೇ ನೀಡುತ್ತಿಲ್ಲ. ದಲಿತರ ಪರ ಇರುವುದಾಗಿ ಹೇಳಿ, ಅದೇ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ನುಂಗಿದ್ದಾರೆ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಎನ್.ರವಿಕುಮಾರ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುವ ಮೂಲಕ ನರೇಂದ್ರ ಮೋದಿ ಹ್ಯಾಟ್ರಿಕ್ ಪ್ರಧಾನಿ ಆಗಲಿದ್ದಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ. ಪ್ರಧಾನಿ ಅಭ್ಯರ್ಥಿ ನೋಡಿ ಮತ ನೀಡಿ ದೇಶ ಗೆಲ್ಲಿಸುವ ಕೆಲಸ ಮತದಾರರಿಂದ ಆಗಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ, ಬಿಜೆಪಿ ಜಿಲ್ಲಾ ಉಸ್ತುವಾರಿ ಭೈರತಿ ಬಸವರಾಜ ಮಾತನಾಡಿ, ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿಯಬೇಕೆಂಬುದು ನಮ್ಮೆಲ್ಲರ ಸಂಕಲ್ಪ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಎಲ್ಲಾ ಬೇಸರ, ವೈಮನಸ್ಸು ಬಿಟ್ಟು, ಒಗ್ಗಟ್ಟಾಗಿ ಮೋದಿಯವರ ಗೆಲ್ಲಿಸಲು ಸಂಕಲ್ಪ ಮಾಡಬೇಕು ಎಂದರು.

ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ ಗೌಡ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಪ್ರೊ.ಎನ್.ಲಿಂಗಣ್ಣ, ಜಿ.ಎಂ.ಲಿಂಗರಾಜ, ಯಶವಂತರಾವ್ ಜಾಧವ್, ಎಸ್.ಎಂ.ವೀರೇಶ ಹನಗವಾಡಿ, ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಚನ್ನಗಿರಿ ತುಮ್ಕೋಸ್ ಶಿವಕುಮಾರ, ಅಣಬೇರು ಜೀವನಮೂರ್ತಿ, ಜಿ.ಎಸ್.ಅನಿತಕುಮಾರ, ಮಾಯಕೊಂಡ ಜಿ.ಎಸ್.ಶ್ಯಾಮ್‌, ಅನಿಲನಾಯ್ಕ, ಡಾ.ಬಸವಂತಪ್ಪ, ಲಿಂಗರಾಜ, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ ಇತರರಿದ್ದರು.

ದಾವಣಗೆರೆ ಕ್ಷೇತ್ರವೇ ನನ್ನ ಕುಟುಂಬ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನನ್ನ ಹೆಸರು ಬಿಡುಗಡೆಯಾಗುತ್ತಿದ್ದಂತೆ ದಿಗ್ಬ್ರಮೆಗೊಂಡಿದ್ದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ನನಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ. ಹಿಂದೆ ಭೀಮಸಮುದ್ರದಲ್ಲಿ ಇದ್ದದ್ದು ಮಾತ್ರ ನಮ್ಮ ಕುಟುಂಬವಾಗಿತ್ತು. ಈಗ ದಾವಣಗೆರೆ ಕ್ಷೇತ್ರವನ್ನೇ ನಮ್ಮ ಕುಟುಂಬವೆಂದು ಭಾವಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. -ಗಾಯತ್ರಿ ಸಿದ್ದೇಶ್ವರ, ಬಿಜೆಪಿ ಅಭ್ಯರ್ಥಿ.

Share this article