ಗಿರೀಶ್ ಮಾದೇನಹಳ್ಳಿಕನ್ನಡಪ್ರಭ ವಾರ್ತೆ ಬೆಂಗಳೂರು
ತಲೆಬುರಡೆ ಸುಳ್ಳಿನ ಕತೆ ರೂಪಿಸುವಲ್ಲಿ ದೆಹಲಿ ಮೂಲದ ವ್ಯಕ್ತಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮೂವರು ಸಾಮಾಜಿಕ ಕಾರ್ಯಕರ್ತರು, ಇಬ್ಬರು ಯೂಟ್ಯೂಬರ್‌ಗಳು ಹಾಗೂ ಉತ್ತರ ಕರ್ನಾಟಕದ ವ್ಯಕ್ತಿ ಸೇರಿ ಒಟ್ಟು ಏಳು ಮಂದಿ ಪಾತ್ರಧಾರಿಗಳಾಗಿದ್ದು, ಇದರಲ್ಲಿ ಉಜಿರೆಯವರೇ ‘ಪ್ರಮುಖ’ ಸೂತ್ರಧಾರಿಗಳಾಗಿದ್ದಾರೆ.ಅಲ್ಲದೆ, ತಲೆಬುರುಡೆ ಕಥಾ ಸರಣಿಯಲ್ಲಿ ಹೇಗೆಲ್ಲ ಸಾರ್ವಜನಿಕವಾಗಿ ನಡೆದುಕೊಳ್ಳಬೇಕು ಹಾಗೂ ಪೊಲೀಸರ ತನಿಖೆಯನ್ನು ಹೇಗೆ ಎದುರಿಸಬೇಕು ಎಂಬುದು ಸೇರಿ ಪ್ರತಿ ಹಂತದ ಬಗ್ಗೆ ಚಿನ್ನಯ್ಯನಿಗೆ ದೊಡ್ಡ ಬಿಳಿ ಹಾಳೆ ಮೇಲೆ ನೀಲ ನಕ್ಷೆ ರೂಪಿಸಿ ಸಂಚುಕೋರರು ವಿವರಿಸಿದ್ದರು. ಎಸ್‌ಐಟಿ ದಾಳಿ ವೇಳೆ ಪ್ರಮುಖ ಸಂಚುಕೋರನ ಮನೆಯಲ್ಲಿ ಆ ನೀಲನಕ್ಷೆ ಸಹ ಸಿಕ್ಕಿದೆ.
ಅಲ್ಲದೆ, ತನಗೆ ಬೆಂಗಳೂರಿನ ದೊಡ್ಡಬಿದರಕಲ್ಲು ಸಮೀಪದ ಸಾಮಾಜಿಕ ಕಾರ್ಯಕರ್ತ ಹಾಗೂ ಉಜಿರೆಯ ಸಾಮಾಜಿಕ ಕಾರ್ಯಕರ್ತನ ಜತೆ ಸ್ನೇಹ ಹೊಂದಿರುವ ದೆಹಲಿಯ ವ್ಯಕ್ತಿಯ ಮನೆಯಲ್ಲಿ ಸಭೆ ನಡೆಸಿ ‘ಮಾರ್ಗದರ್ಶನ’ ಮಾಡಿದ್ದರು ಎಂದು ಎಸ್‌ಐಟಿ ವಿಚಾರಣೆಯಲ್ಲಿ ಚಿನ್ನಯ್ಯ ಬಹಿರಂಗಪಡಿಸಿರುವುದಾಗಿ ಉನ್ನತ ಮೂಲಗಳು ’ಕನ್ನಡಪ್ರಭ’ಕ್ಕೆ ತಿಳಿಸಿವೆ.ದೆಹಲಿಯಲ್ಲಿರುವ ಕರ್ನಾಟಕ ಮೂಲದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿಯೊಬ್ಬರ ಮನೆಯಲ್ಲಿ ಸಭೆ ನಡೆದಿತ್ತು ಎಂಬ ಚರ್ಚೆ ಈ ಹಿಂದೆ ಕೇಳಿಬಂದಿತ್ತು. ಆದರೆ, ಆ ಚರ್ಚೆ ನಡೆದಿದ್ದು ನ್ಯಾಯವಾದಿಯ ಮನೆಯಲ್ಲಿ ಅಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಸಂಚಿನ ಆರೋಪಿತ ವ್ಯಕ್ತಿ ಅಂಗಡಿ ಇಟ್ಟಿದ್ದರು. ಹೀಗಾಗಿ ಹಲವು ವರ್ಷಗಳಿಂದ ಆತನಿಗೆ ಧರ್ಮಸ್ಥಳದಲ್ಲಿ ಪೌರ ಕಾರ್ಮಿಕರಾಗಿದ್ದ ಚಿನ್ನಯ್ಯ ಹಾಗೂ ಆತನ ಸೋದರರ ಜತೆ ಸ್ನೇಹವಿತ್ತು. 2023ರಲ್ಲಿ ಒಂದು ದಿನ ಚಿನ್ನಯ್ಯನ ಬಗ್ಗೆ ಆತನ ಸೋದರನ ಬಳಿ ವಿಚಾರಿಸಿದ್ದ ಅವರು, ಏನೋ ಮಾತನಾಡಬೇಕಿದೆ ಎಂದು ಚಿನ್ನಯ್ಯನನ್ನು ಆತನ ಅಣ್ಣನ ಮೂಲಕ ಸಂಪರ್ಕಿಸಿದ್ದರು. ಆದರೆ ತಲೆಬುರಡೆ ಕತೆ ಬಗ್ಗೆ ಚಿನ್ನಯ್ಯನ ಸೋದರನಿಗೆ ಮಾಹಿತಿ ಇರಲಿಲ್ಲ. ಆನಂತರ ಚಿನ್ನಯ್ಯನನ್ನು ಭೇಟಿಯಾಗಿ ಇನ್ನುಳಿದವರು ಷಡ್ಯಂತ್ರ ರೂಪಿಸಿದರು. 2024ರ ಅಕ್ಟೋಬರ್‌ನಲ್ಲಿ ತಲೆಬರುಡೆ ಕತೆ ಸಿದ್ಧವಾಯಿತು. ಆಗಲೇ ದೆಹಲಿ ಹಾಗೂ ಬೆಂಗಳೂರಿನಲ್ಲಿ ಸಭೆಗಳು ನಡೆದಿವೆ ಎಂದು ಮೂಲಗಳು ಹೇಳಿವೆ.ಎಎನ್‌ಎಫ್ ಕಣ್ಣಿಗೆ ಬಿದ್ದಿದ್ದ ಗ್ಯಾಂಗ್:
ಈ ತಲೆಬರುಡೆ ಪ್ರಕರಣದಲ್ಲಿ ಸಂಚಿಗೆ ಆರೋಪಿತರ ಮೊಬೈಲ್ ಹಾಗೂ ಪ್ರಮುಖ ಸಂಚುಕೋರನ ಮನೆಯಲ್ಲಿ ಸಿಕ್ಕಿದ ದಾಖಲೆಗಳು ಮಹತ್ವದ ಪುರಾವೆ ಒದಗಿಸಿವೆ. ಒಬ್ಬರಿಂದ ಒಬ್ಬರಿಗೆ ವಾಟ್ಸಾಪ್ ಮೂಲಕ ರವಾನೆಯಾಗಿರುವ ಸಂದೇಶಗಳು ಹಾಗೂ ವಿಡಿಯೋಗಳಲ್ಲಿ ತಲೆಬರುಡೆ ಕತೆ ನಿರೂಪಣೆ ಇದೆ ಎಂದು ತಿಳಿದು ಬಂದಿದೆ.ಏಳು ಮಂದಿ ಪೈಕಿ ಓರ್ವ ಸಾಕ್ಷಿದಾರ?
ಸಂಚಿನ ಪಾತ್ರ ವಹಿಸಿದ್ದಾತನೇ ಸಾಕ್ಷಿಯಾದರೆ ಆರೋಪ ರುಜುವಾತಿಗೆ ಮಹತ್ವದ ಪುರಾವೆಯಾಗಲಿದೆ. ಹೀಗಾಗಿ ಅಪ್ರೋವರ್ ಆಗುವವನ ಬಗ್ಗೆ ಪ್ರಾಥಮಿಕ ಹಂತದ ತನಿಖೆ ಸಹ ನಡೆಸಲಾಗಿದೆ. ಈ ಪ್ರಕರಣದಲ್ಲಿ ಆತ ‘ಸಂದೇಶ ವಾಹಕ’ ನಂತರೆ ಕೆಲಸ ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದ್ದು, ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.