ಮೋಹನ್ ರಾಜ್ಕನ್ನಡಪ್ರಭ ವಾರ್ತೆ ಮಡಿಕೇರಿಮಡಿಕೇರಿ-ಕುಶಾಲನಗರ ಹೆದ್ದಾರಿ ನಡುವಿನ ಸುಂಟಿಕೊಪ್ಪ ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ತಂಗುದಾಣ ಎದುರು ನಿತ್ಯ ಖಾಸಗಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವುದರಿಂದ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಪ್ರಯಾಣಿಕರಿಗೂ ಸಂಕಟ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಸಾರ್ವಜನಿಕರು, ಪ್ರಯಾಣಿಕರಿಗೆ ಅನುಕೂಲವಾಗಲೆಂದು ಇಲ್ಲಿನ ಬಸ್ ಸ್ಟಾಪ್ ನಿರ್ಮಿಸಲಾಗಿದೆ. ಆದರೆ ಇದನ್ನು ಯಾರು ಉಪಯೋಗಿಸಿದಂತಹ ಸ್ಥಿತಿ ಎದುರಾಗಿದೆ. ಯಾಕೆಂದರೆ ಪ್ರತಿ ನಿತ್ಯ ವಾಹನಗಳನ್ನು ಬಸ್ ಸ್ಟಾಪ್ ಎದುರೇ ನಿಲ್ಲಿಸುತ್ತಿರುವುದ್ದರಿಂದ ಇದರೊಳಗೆ ಇದ್ದವರಿಗೆ ಬಸ್ ಬರುವುದು ತಿಳಿಯದೆ ಜನರಿಗೆ ಬಸ್ ಹಿಡಿಯುವುದು ಸಾಧ್ಯವಾಗುತ್ತಿಲ್ಲ. ಬಸ್‌ಗಾಗಿ ಕಾದು ನಿಲ್ಲುವ ಸಾರ್ವಜನಿಕರು ತಂಗುದಾಣವಿದ್ದರೂ ಕೂಡ ಬಿಸಿಲಿಗೆ ಮೈಯೊಡ್ಡಿ ನಿಲ್ಲುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. * ಟ್ರಾಫಿಕ್ ಸಮಸ್ಯೆ ಹೆಚ್ಚಳ
ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ನಗರದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಬಸ್ ಸ್ಟಾಪ್ ಎದುರು ಖಾಸಗಿ ವಾಹನಗಳು ನಿಂತಿರುವ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲುತ್ತಿವೆ. ಇದರಿಂದಾಗಿ ಹಿಂದೆ ಬರುವ ವಾಹನಗಳಿಗೆ ಮುಂದೆ ಸಂಚರಿಸಲು ಸ್ಥಳಾವಕಾಶ ಸಿಗದೆ, ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.ವಾರಾಂತ್ಯದ ದಿನಗಳಲ್ಲಂತೂ ಹೆದ್ದಾರಿಯಲ್ಲಿ ಈ ಮಾರ್ಗವಾಗಿ ಸಾಲು-ಸಾಲು ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ರಸ್ತೆ ದಾಟುವುದಕ್ಕೂ ಪರದಾಡಬೇಕಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಒಮ್ಮಿಂದೊಮ್ಮೆ ಒಟ್ಟೊಟ್ಟಿಗೆ ರಸ್ತೆಯಲ್ಲೇ ನಿಲುಗಡೆ ನೀಡುವುದರಿಂದ ವಾಹನ ದಟ್ಟಣೆ ಸೃಷ್ಟಿಯಾಗುತ್ತಿದೆ.* ಪ್ರಯಾಣಿಕರ ಸರ್ಕಸ್ಬಸ್ ಸ್ಟಾಪ್ ಎದುರು ಖಾಸಗಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುದ್ದರಿಂದ ಬಸ್‌ಗಾಗಿ ಕಾದು ಕೂರುವ ಪ್ರಯಾಣಿಕರು ಎಲ್ಲೆಂದರದಲ್ಲಿ ನಿಲುಗಡೆ ನೀಡಿ, ಮುಂದೆ ಸಾಗುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡುತ್ತಾ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.ವಯಸ್ಸಾದ ಹಿರಿಯರು, ಅಂಗವಿಕಲರು, ಮಕ್ಕಳು ಸೇರಿದಂತೆ ಅನೇಕರು ಬಸ್ ಹತ್ತಲು ಸರ್ಕಸ್ ಮಾಡುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸುವ ವಾಹನಗಳ ಮಧ್ಯೆ ಸುರಕ್ಷಿತವಾಗಿ ಬಸ್ ಹಿಡಿಯುವ ಸಂಕಷ್ಟ ಪ್ರಯಾಣಿಕರದ್ದಾಗಿದೆ. ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಮತ್ತು ಬಸ್ ಹತ್ತಲು ಸರ್ಕಸ್ ಮಾಡುವ ಪ್ರಯಾಣಿಕರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ಪಟ್ಟಣದಲ್ಲಿ ನಿರ್ಮಿಸಲಾಗಿರುವ ಬಸ್ ಸ್ಟಾಪ್ ಸಂಪೂರ್ಣವಾಗಿ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಈ ಸ್ಥಳದಲ್ಲಿ ಸದಾಕಾಲ ಜೆಸಿಬಿ, ಲಾರಿ, ಕ್ರೇನ್ ಸೇರಿದಂತೆ ಇತರೆ ಖಾಸಗಿ ವಾಹನಗಳು ನಿಲುಗಡೆಗೊಂಡಿರುತ್ತವೆ. ಮೊದಲೇ ನಿಗದಿತ ಸ್ಥಳದಲ್ಲಿ ನಿಲ್ಲದ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಖಾಸಗಿ ವಾಹನಗಳ ನಿಲುಗಡೆಯ ನೆಪವೊಡ್ಡಿ ತಮಗೆ ಇಷ್ಟ ಬಂದ ಕಡೆಗಳಲ್ಲಿ ನಿಲುಗಡೆ ಮಾಡುತ್ತಿವೆ. ಇಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿರುವ ತಂಗುದಾಣ ಸೋಮಾರಿಗಳ, ಕುಡುಕರ ಅಡ್ಡೆಯಾಗಿದೆ. ನಿಲ್ದಾಣದಲ್ಲಿ ಬಸ್‌ಗಳು ನಿಲುಗಡೆ ನೀಡದೆ ಇರುವುದಿಂದ ಮುಖ್ಯರಸ್ತೆಯ ಅಂಚಿನಲ್ಲಿ ಬಸ್‌ಗಾಗಿ ಕಾದು ನಿಲ್ಲುವ ಸಾರ್ವಜನಿಕರು ತಂಗುದಾಣವಿದ್ದರೂ ಕೂಡ ಬಿಸಿಲಿಗೆ ಮೈಯೊಡ್ಡಿ ನಿಲ್ಲುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.। ಅಯ್ಯಪ್ಪ, ಸುಂಟಿಕೊಪ್ಪ ನಿವಾಸಿ.ಕೆಲವು ವೇಳೆ ಖಾಸಗಿ ಟೆಂಪೋ, ಆಟೋ, ಲೋಡ್ ತುಂಬಿದ ಲಾರಿ, ಕ್ರೇನ್, ಇತರೆ ವಾಹನಗಳು ನಿಲುಗಡೆಗೊಂಡಿದ್ದ ವೇಳೆ ರಸ್ತೆಯಲ್ಲೇ ಬಸ್ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ವೃದ್ಧರು ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿದೆ. ಬಸ್ ಇಳಿದು ರಸ್ತೆ ದಾಟುವಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಅಧಿಕಾರಿಗಳು ಬಸ್ ಬಂದಾಗ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಿದರೆ ಉತ್ತಮ.। ಐಶ್ವರ್ಯ, ಪ್ರಯಾಣಿಕರು
ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಬಸ್ ಸ್ಟಾಪ್‌ಗಳ ಎದುರು ಖಾಸಗಿ ವಾಹನಗಳನ್ನು ನಿಲ್ಲಿಸಬಾರದು. ಹಾಗೇನಾದರೂ ನಿಲ್ಲಿಸಿರುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.। ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ