ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಸೆಕೆಂಡ್ ಹ್ಯಾಂಡ್ ಕಾರು ವರ್ತಕರನ್ನು ಕೂಡಿಹಾಕಿ ಮರ್ಮಾಂಗಕ್ಕೆ ಶಾಕ್ ಕೊಟ್ಟು, ಸಿಗರೇಟಿನಿಂದ ಸುಟ್ಟು ವಿಕೃತಿ ಹಾಗೂ ಕ್ರೌರ್ಯ ಮೆರೆದಿರುವ ಪ್ರಕರಣದಲ್ಲಿ ಪರಾರಿಯಾಗಿರುವ ಖದೀಮರ ಬಂಧನ ಯಾವಾಗ? ಎಂದು ಕಲಬುರಗಿ ಜನ ನಗರ ಪೊಲೀಸರನ್ನು ಪ್ರಶ್ನಿಸುತ್ತಿದ್ದಾರೆ.
ವಿಕೃತಿಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಮೋಬೈಲ್ ಲೊಕೇಶನ್ ಆಧರಿಸಿ ದುಷ್ಟರ ಕೂಟ ಅವಿತುಕೊಂಡಿದ್ದ ಸ್ಥಳದ ಮೇಲೆ ದಾಳಿ ಮಾಡಿ, ಕಾರು ವ್ಯಾಪಾರಿ ಅರ್ಜುನ್ ಮಡಿವಾಳ ಸೇರಿ ಮೂವರನ್ನು ರಕ್ಷಿಸಿದ್ದಾರೆ.ಪೊಲೀಸರ ದಾಳಿಯಿಂದ ಹೆದರಿ ಆರೋಪಿಗಳಾದ ಇಮ್ರಾನ್, ಮತೀನ್ ಪಟೇಲ್, ಜೀಯಾವುಲ್ಲಾ ಹುಸ್ಸೇನಿ, ಮಹ್ಮದ್ ಅಫ್ಹಲ್, ರಮೇಶ್ ಸೇರಿ 7 ಜನ ಅದಾಗಲೇ ಪೊಲೀಸರ ಬಂಧನಕ್ಕೊಳಗಾಗಿದ್ದಾರೆ. ಆದರೆ ಅಪರಾಧ ನಡೆದ ಸ್ಥಳದಲ್ಲಿದ್ದ ಹಾಗೂ ಚಿತ್ರಹಿಂಸೆ ಕೊಡುವಲ್ಲಿ ಪ್ರಮುಖ ಪಾತ್ರಧಾರಿಗಳಾಗಿದ್ದರು ಎಂದು ಹೇಳಲಾದ ಇನ್ನೂ ಐವರು ಖದೀಮರು ಪೊಲೀಸರಗೆ ಕೈಗೆ ಸಿಗದೆ ಪರಾರಿಯಾಗಿದ್ದಾರೆ.
ಈ ಪ್ರಕರಣ ನಡೆದು 11 ದಿನಗಳೇ ಉರುಳಿದರೂ ಇನ್ನೂ ಪರಾರಿಯಾದ ಖದೀಮರ ಸುಳಿವು ಪತ್ತೆಯಾಗಿಲ್ಲ. ಸದರಿ ಕ್ರೌರ್ಯದ ಪ್ರಕರಣ ಲೋಕಸಭೆ ಚುನವಣೆಯ ಮತದಾನದ ದಿನಕ್ಕೂ ಮುಂಚೆಯೇ ಹೊರಬಿದ್ದರೂ ಅದು ಬಹಿರಂಗವಾಗಿರೋದು ಮೇ 7ರ ಮತದಾನದ ನಂತರ ಎಂಬುದು ಗಮನಾರ್ಹ ಸಂಗತಿ!ಮೊದಲೇ ಲೋಕಸಭೆ ಮತದಾನದ ಸುತ್ತಮುತ್ತ ವಿವಾದಗಳ ಗೂಡಾಗಿದ್ದ ಕಲಬುರಗಿಯಲ್ಲಿ ಇದೊಂದು ಹೊಸ ವಿವಾದ ಚಚ್ರೆಗೆ ಗ್ರಾಸವಾದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು ಎಂದು ಈ ಪ್ರಕರಣ ಮತದಾನದ ನಂತರವೇ ಸುದ್ದಿಯಾಗುವಂತೆ ಮಾಡಲಾಯ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.
ಅದ್ಯಾರು ಈ ಸಂಗತಿಯನ್ನು ಗೌಪ್ಯವಾಗಿಟ್ಟರೋ? ಮೇ 4 ರಂದೇ ಪ್ರಕರಣ ಬೆಳಕಿಗೆ ಬಂದು, ನೋವು , ಯಾತನೆ ಅನುಭವಿಸಿದವರು ನೀಡಿದ ದೂರಿನ ಮೇರೆಗೆ ಕಳೆದ ಮೇ 5 ರಂದೇ ಎಫ್‌ಐಆರ್ ದಾಖಲಾಗಿದೆ. ಪ್ರಕರಣ ಹೊರಬಿದ್ದು 11 ದಿನ ಉರುಳಿದರೂ ಪರಾರಿಯಾದ ಆರೋಪಿಗಳ ಹೆಡಮುರಿ ಕಟ್ಟುವಲ್ಲಿ ಯಾಕೆ ವಿಳಂಬ ? ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.ಸಿಗರೇಟಿನಿಂದ ಸುಟ್ಟರು- ಕುತ್ತಿಗೆ ಹಿಸುಕಲು ಮುಂದಾದರು: ಟಾಟಾ ಹಾರಿಯರ್ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟದ ವಿಚಾರದಲ್ಲಿ ಚಿತ್ತಾಪುರದಿಂದ ರಮೇಶ ದೊಡ್ಮನಿ ಆಹ್ವಾನದ ಮೇರೆಗೆ ಕಲಬುರಗಿಗೆ ಬಂದಿದ್ದ ವರ್ತಕ ಅರ್ಜುನ, ಮತ್ತವರ ಇಬ್ಬರು ಗೆಳೆಯರನ್ನು ದುಷ್ಟರೆಲ್ಲರೂ ಸೇರಿಕೊಂಡು ಹಾಗರಗಾ ಕ್ರಾಸ್ ಇನಾಮದಾರ್ ಕಾಲೇಜು ಸಮೀಪದ ಮನೆಯೊಂದರಲ್ಲಿ ಕೂಡಿ ಹಾಕಿ ಬೆತ್ತಲೆ ಮಾಡಿ ಕರೆಂಟ್ ಶಾಕ್ ನೀಡಿ ವಿಕೃತಿ ಮೆರೆದಿದ್ದರು.
ಅರ್ಜುನ ಮಡಿವಾಳ ನೀಡಿದ ದೂರಿನಲ್ಲಿ ಖದೀಮರು ಸಿಗರೇಟಿನಿಂದ ಮೈ ಸುಟ್ಟಿದ್ದಾರೆ. ಕಾಲಿನಿಂದ ಕುತ್ತಿಗೆ ಒತ್ತಲು ಯತ್ನಿಸಿದ್ದಾರೆಂದು ಅಲ್ಲಿ ತಾವು ಅನುಭವಿಸಿದ ಕ್ರೌರ್ಯಗಳನ್ನೆಲ್ಲ ವಿವರಿಸಿದ್ದಾನೆ.ನನ್ನ ಜೊತೆಗಿದ್ದ ಅಬ್ದುಲ್ ರಹೇಮಾನ್ ಈತನಿಗೆ ಬಡಿಗೆಗಳಿಂದ ಥಳಿಸಿದ್ದರಿಂದ ಭಾರಿ ಗಾಯಗಳಾಗಿವೆ, ಸಿಗರೇಟಿವನಿಂದ ಈತನನ್ನೇ ಸುಟ್ಟಿದ್ದಾರೆ. ನನ್ನ ಜೊತೆಗಿದ್ದ ಸಮೀರುದ್ದಿನ್ ಈತನಿಗೂ ಥಳಿಸಿದ್ದರಿಂದ ಇನಿಗೂ ಗಾಯಗಳಾಗಿವೆ. ನಮ್ಮ ಬೆನ್ನಿಗೆ ಲಾಂಗ್‌ನಿಂದ ಚುಪಚ್ಚಿ ಪ್ರಾಣ ಬೆದರಿಕೆ ಹಾಕಿದ್ದಾರೆಂದು ಅರ್ಜುನ ಮಡಿವಾಳ ದೂರಿನಲ್ಲಿ ವಿವರಿಸಿದ್ದಾನೆ.
ಇದಲ್ಲದೆ ಮೇ. 5 ರಂದು ಖದೀಮರಲ್ಲಿ ಒಬ್ಬ ಅರ್ಜುನನಿಗೆ ಮನೆಯಿಂದ ಹಣ ತರಿಸಿ ಕೊಡುವಂತೆ ಸತಾಯಿಸಿದ್ದಾನೆ. ಹಣಕೊಡದೆ ಹೋದರೆ ಜೀವ ಸಹಿತ ಬಿಡೋದಿಲ್ಲವೆಂದು ಬೆದರಿಕೆ ಹಾಕಿದಾಗ ಅಂಜಿ 50 ಸಾವಿರ ರುಪಾಯಿ ಹೆಂಡತಿ ಮೋಬೈಲ್‌ನಿಂದ ನನ್ನ ಮೋಬೈಲ್‌ಗೆ ಹಾಕಿಸಿಕೊಂಡಿದ್ದೆ. ಇಮ್ರಾನ್ ಎಂಬಾತ ನನ್ನ ಮೋಬೈಲ್ ಕಿತ್ತುಕೊಂಡು, ಅದರ ಪೋನ್ ಪೇ, ಗೂಗಲ್ ಪೇ ಪಾಸವರ್ಡ್‌ಗಳನ್ನೆಲ್ಲ ಪಡೆದು ಹೊರಗಡೆ ಹೋಗಿ ನಾಲ್ಕಾರು ಸಾವಿರ ರುಪಾಯಿ ಖರ್ಚು ಮಾಡಿದ್ದಾನೆ. ಹೀಗೆ ನಮ್ಮನ್ನು ತುಂಬ ಸತಾಯಿಸಿದ್ದಾರೆಂದು ಅರ್ಜುನ ದೂರಿನಲ್ಲಿ ವಿವರಿಸಿದ್ದಾನೆ.ತಿಂಗಳಿಗೆ 1 ಲಕ್ಷ ರು ಹಫ್ತಾಕ್ಕೆ ಬೇಡಿಕೆ ಇಟ್ಟಿದ್ದ ಖದೀಮರು: ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರುವ ನೀವು ನಮಗೆ ತಿಂಗಳಿಗೆ 1 ಲಕ್ಷ ರು ತಂದು ಕೊಡಬೇಕು. ಇಲ್ಲದೆ ಹೋದರೆ ನಿಮಗೆ ಬಿಡೋದಿಲ್ಲ. ನೀವು 1 ಲಕ್ಷ ರು ಹಣ ಮಾಸಿಕ ಒಪ್ಪಿಸುತ್ತ ಹೋದರೆ ನಿಮ್ಮ ತಂಟೆಗೆ ಯಾರು ಬಂದರು ನಾವು ನೋಡಿಕೊಳ್ಳುತ್ತೇವೆ. ನಿಮಗೆ ಫುಲ್ ಬೆಂಬಲ ನೀಡುತ್ತೇವೆಂದು ಇಮ್ರಾನ್ ಸರಿದಂತೆ ಅಲ್ಲಿದ್ದ ಖದೀಮರು ಇವರಿಗೆ ಹೇಳಿದ್ದರಂತೆ.
ಅವರ ಷರತ್ತಿಗೆ ಸೊಪ್ಪು ಹಾಕದೆ ನಾವು ಸುಮ್ಮನಿದ್ದಾಗ, ಇಮ್ರಾನ್ ಎಂಬಾತ ತನ್ನ ಕಾಲಿನಿಂದ ಕುತ್ತಿಗೆ ಒತ್ತಲು ಶುರು ಮಾಡಿದ. ಉಸಿರು ಕಟ್ಟುತ್ತ ಹೋಯ್ತು. ಇನ್ನೇನು ಸಾವೇ ಗತಿ ಅಂತ ನಾನು ಒದ್ದಾಡುತ್ತಿದ್ದಾಗಲೇ ಪೊಲೀಸರು ಅಲ್ಲಿಗೆ ಬಂದು ರಕ್ಷಿಸಿದರು ಎಂದು ಅರ್ಜುನ ಹೇಳಿದ್ದಾನೆ.ಪೊಲೀಸರು ಬರುವ ಮುಂಚೆ 10 ರಿಂದ 12 ಜನರಿದ್ದ ಖಮೃದೀಮರು ಪೊಲೀಸರು ಬರುತ್ತಾರೆಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಅಲ್ಲಿಂದ ಪರಾರಿಯಾಗಲು ಮುಂದಾದರು. ಪೊಲೀಸರು 7 ಜನರನ್ನು ಬಂಧಿಸಿದ್ದಾರೆ, ನಾಲ್ಕೈದು ಜನ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆಂದೂ ಮಡಿವಾಳ ದೂರಿನಲ್ಲಿ ಹೇಳಿದ್ದಾನೆ.
ಗುಲ್ಬರ್ಗ ವಿವಿ ಠಾಣೆಯಲ್ಲಿ ಪ್ರಕರಣ ದಾಖಲು: ಸದರಿ ಪ್ರಕರಣ ಇಲ್ಲಿನ ಗುಲ್ಬರ್ಗ ವಿವಿ ಠಾಣೆಯಲ್ಲಿ ದಾಖಲಗಿದೆ. ಹಿಂಸೆಗೊಳಗಾದವರ ಪೈಕಿ ಅರ್ಜುನ ಮಡವಾಳ ನೀಡಿದ ದೂರನ್ನಾಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ 365 (ಉದ್ದೇಶವಿಟ್ಟುಕೊಂಡು ಅಪಹರಿಸಿ ರಹಸ್ಯವಾಗಿರಿಸೋದು), 342 (ಅಕ್ರಮ ಬಚ್ಚಿಡುವಿಕೆ), 364 ಎ (ಹಣಕ್ಕಾಗಿ ಅಪಹರಣ), 540 (ಉದ್ದೇಶಪೂರ್ವಕವಾಗಿ ಕೆಣಕುವುದು, ಇರಿಂದ ತಕಾನೂನು- ಸುವ್ಯವಸ್ಥೆಗೆ ಧಕ್ಕೆ ತರುವ ಉದ್ದೇಶ), 326 (ಭಾರಿ ಪ್ರಮಾಣದಲ್ಲಿ ದೇಹಕ್ಕೆ ಗಾಯಪಡಿಸುವುದು), 307 (ಕೊಲೆಗೆ ಯತ್ನ), 395 (ಸುಲಿಗೆ, ಡಕಾಯಿತಿಗೆ ಯತ್ನ), 506 (ಕ್ರಿಮಿನಲ್ ಉದ್ದೇಶಗಳಿಗಾಗಿ ಬೆದರಿಸೋದು, ಪ್ರಾಣ ಬೆದರಿಕೆ ಒಡ್ಡುವುದು), 149 (ಅಕ್ರಮಕೂಟ ರಚಿಸಿ ಅಪರಾಧ ಕೃತ್ಯ ಎಸಗುವುದು) ಪ್ರಕಾರ ಗುಲ್ಬರ್ಗ ವಿವಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.ಪರಾರಿಯಾದವರ ಶೀಘ್ರ ಬಂಧಿಸುತ್ತೇವೆ: ಕಮೀಷ್ನರ್
ಮರ್ಮಾಂಗಕ್ಕ್ ಶಾಕ್ ನೀಡಿ ಸೆಕೆಂಡ್ ಹ್ಯಾಂಡ್ ಕಾರ್ ಮಾರಾಟಗಾರರಾದ ಅರ್ಜುನ ಮತ್ತವರ ಇಬ್ಬರು ಗೆಳೆಯರಿಗೆ ಹಿಂಸೆ ನೀಡಿದ ಪ್ರಕರಣದಲ್ಲಿ ಈಗಾಗಲೇ 7 ಜನರ ಬಂಧನವಾಗಿದೆ. ಅಲ್ಲಿಂದ 5 ಜನ ಪರಾರಿಯಾಗಿದ್ದಾರೆಂಬ ಪಕ್ಕಾ ಮಾಹಿತಿ ಇದೆ. ಅದಾಗಲೇ ಅವರ ಬಗ್ಗೆಯೂ ಸುಳಿವು ಸಿಕ್ಕಿವೆ. ಶೀಘ್ರ ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಕಮೀಶ್ನರ್ ಚೇತನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೋಧ ಸಾಗಿದೆ, ಮಾಹಿತಿ ಕಲೆ ಹಾಕಲಾಗುತ್ತಿದೆ. ಆದಷ್ಟು ಶೀಘ್ರ ಬಂಧಿಸುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಶಸಾಸ್ತ್ರ ಕಾಯಿದೆ ಸೇರಿದಂತೆ ಹಲವು ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಿಂಸೆ ಅನುಭವಿಸಿ ಬಹೊರ ಬಂದವರಿಗೆ ಪೊಲೀಸ್ ರಕ್ಷಣೆ ನೀಡಲಾಗಿದೆ. ಅಗತ್ಯ ಕಂಡಲ್ಲಿ ಗನ್‌ಮ್ಯಾನ್ ಭದ್ರತೆ ಕೂಡಾ ಒದಗಿಸಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಕಮೀಷ್ನರ್ ಚೇತನ್ ಹೇಳಿದ್ದಾರೆ.