ಕನ್ನಡಪ್ರಭ ವಾರ್ತೆ ಬಾದಾಮಿ
ಉತ್ತರ ಕರ್ನಾಟಕದ ಪ್ರಸಿದ್ಧ ಸುಕ್ಷೇತ್ರ ಬಾದಾಮಿ-ಬನಶಂಕರಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಸಂಜೆ 5 ಗಂಟೆಗೆ ಮಾಹಾ ರಥೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಮಧ್ಯೆ ಸಡಗರ, ಸಂಭ್ರಮದಿಂದ ಜರುಗಿತು.ಜಾತ್ರಾ ಮಹೋತ್ಸವದ ಅಂಗವಾಗಿ ಜ.18 ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಲಿದ್ದು, ಗುರುವಾರ ಬೆಳಗ್ಗೆ ಬನಶಂಕರಿ ದೇವಿಗೆ ರುದ್ರಾಭಿಷೇಕ, ಕ್ಷೀರಾಭಿಷೇಕವನ್ನು ಪೂಜಾರ ಕುಟುಂಬದವರು ನೆರವೇರಿಸಿದರು.
ಬನಶಂಕರಿ ಮಾಹಾ ರಥೋತ್ಸವಕ್ಕೆ ಸಾಂಪ್ರಾದಾಯಿಕವಾಗಿ ರಥಾಂಗ ಹೋಮ ಹಾಗೂ ಪೂಜೆ ನೆರೆವೇರಿಸಿದ ನಂತರ ಮಾಡಲಗೇರಿಯಿಂದ ತಂದ ರಥದ ಹಗ್ಗದಿಂದ ರಥ ಎಳೆಯಲಾಯಿತು.ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಮೆರೆದ ಭಕ್ತ ಸಮೂಹ ಬನಶಂಕರಿದೇವಿ ನಿನ್ನ ಪಾದಕ ಶಂಭು ಕೋ... ಎಂದು ನಾಮಸ್ಮರಣೆ ಮಾಡಿದರು. ಬನಶಂಕರಿ ದೇವಸ್ಥಾನ ಕಮಿಟಿಯ ಚೇರ್ಮನ್ ಮಲ್ಲಾರಭಟ್ ಶಂಕರಭಟ್ಟ ಪೂಜಾರ, ಸದಸ್ಯರಾದ ಪ್ರಕಾಶ, ಶ್ರೀನಿವಾಸ, ಕಿರಣ, ಮಹೇಶ, ಅಪ್ಪಣ್ಣ ಸೇರಿದಂತೆ ಪೂಜಾರ ಕುಟುಂಬದವರು ಉಪಸ್ಥಿತರಿದ್ದರು.
ಮಹಾರಥೋತ್ಸವದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಹನುಮಂತ ಅಪ್ಪನ್ನವರ, ಯುವಮುಖಂಡ ಮಹೇಶ ಹೊಸಗೌಡ್ರ, ತಹಸೀಲ್ದಾರ್ ಜೆ.ಬಿ.ಮಜ್ಜಗಿ, ತಾ.ಪಂ.ಇಒ ಮಲ್ಲಿಕಾರ್ಜುನ ಬಡಿಗೇರ, ಚೊಳಚಗುಡ್ಡ ಗ್ರಾಪಂ ಅಧ್ಯಕ್ಷೆ ರಕ್ಷಿತಾ ಮರಡಿತೋಟದ, ಪಿಡಿಒ ರವಿ ದೊಮಡನಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಸಿ.ಪಿ.ಐ. ಡಿ.ಡಿ.ಧೂಳಖೇಡ, ಪಿ.ಎಸ್.ಐ.ನಿಂಗಪ್ಪ ಪೂಜಾರ ಸೇರಿದಂತೆ ಹಾಗೂ ಗುಳೇದಗುಡ್ಡ, ಕೆರೂರ, ಬಾಗಲಕೋಟಿಯಿಂದ ಆಗಮಿಸಿದ್ದ ಪೊಲೀಸ್ ಸಿಬ್ಬಂದಿ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಭಕ್ತ ಸಾಗರ; ಬಾದಾಮಿ ಶ್ರೀ ಬನಶಂಕರಿದೇವಿ ಮಹಾರಥೋತ್ಸವ ದಿನ ಗುರುವಾರ ಬೆಳಗ್ಗೆಯಿಂದ ರಾಜ್ಯ ಸೇರಿದಂತೆ ಬೇರೆ ಜಿಲ್ಲೆ, ತಾಲೂಕಿನ ವಿವಿಧ ಭಾಗಗಳಿಂದ ಸಹಸ್ರಾರು ಜನ ಭಕ್ತ ಸಮೂಹ ಪಾದಯಾತ್ರೆಯ ಮೂಲಕ ಬನಶಂಕರಿಗೆ ಆಗಮಿಸಿದ್ದರು.