ಚಿಕ್ಕಾಡೆಯಲ್ಲಿ ಸಂಭ್ರಮದ ಶ್ರೀದೇವಿರಮ್ಮ ಹಬ್ಬ; ಹೆಬ್ಬಾರೆ ಉತ್ಸವ

KannadaprabhaNewsNetwork | Published : Feb 19, 2024 1:32 AM

ಸಾರಾಂಶ

ರಥಸಪ್ತಮಿ ನಂತರ ದೇವಿರಮ್ಮನ್ನ ಹೆಬ್ಬಾರೆ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಹಬ್ಬದ ಪ್ರಯುಕ್ತವಾಗಿ ಪುರೋಹಿತರು, ಯಜಮಾನರು ಹಾಗೂ ದಲಿತ ಸಮುದಾಯದ ಮುಖಂಡರ ನೇತೃತ್ವದಲ್ಲಿ ಫೆ.19ರ ಸೋಮವಾರ ದೇವಸ್ಥಾನದ ಬಾಗಿಲು ತೆಗೆದು ದೇವರಿಗೆ ಅಭಿಷೇಕ ಸಲ್ಲಿಸಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಾಡೆ ಗ್ರಾಮದ ಹೊರ ವಲಯದ ಶ್ರೀದೇವಿರಮ್ಮ ಹಬ್ಬ, ಜಾತ್ರಾ ಮಹೋತ್ಸವ ಹಾಗೂ ಹೆಬ್ಬಾರೆ ಉತ್ಸವವು ಸಡಗರ ಸಂಭ್ರಮದಿಂದ ಜರುಗಿತು.

ದೇವಿರಮ್ಮ ಹೆಬ್ಬಾರೆ ಉತ್ಸವವು ತನ್ನದೆಯಾದ ಇತಿಹಾಸ ಹೊಂದಿದೆ. ವರ್ಷಕ್ಕೆ ಎರಡು ದಿನ ಮಾತ್ರ ದೇವಾಲಯದ ಬಾಗಿಲು ತೆಗೆಯುವುದರಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.

ರಥಸಪ್ತಮಿ ನಂತರ ದೇವಿರಮ್ಮನ್ನ ಹೆಬ್ಬಾರೆ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಹಬ್ಬದ ಪ್ರಯುಕ್ತವಾಗಿ ಪುರೋಹಿತರು, ಯಜಮಾನರು ಹಾಗೂ ದಲಿತ ಸಮುದಾಯದ ಮುಖಂಡರ ನೇತೃತ್ವದಲ್ಲಿ ಫೆ.19ರ ಸೋಮವಾರ ದೇವಸ್ಥಾನದ ಬಾಗಿಲು ತೆಗೆದು ದೇವರಿಗೆ ಅಭಿಷೇಕ ಸಲ್ಲಿಸಿ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ.

ದೇವಿರಮ್ಮನ ಹೆಬ್ಬಾರೆ ಉತ್ಸವದಲ್ಲಿ ಗಂಡು ಹೆಬ್ಬಾರೆ ಮತ್ತು ಹೆಣ್ಣು ಹೆಬ್ಬಾರೆಯನ್ನು ಮೆರವಣಿಗೆ ಮಾಡಲಾಗುತ್ತದೆ. ಹಬ್ಬದ ಮತ್ತೊಂದು ವಿಶೇಷವೆಂದರೆ ಎರಡು ಹಬ್ಬಾರೆಗಳನ್ನು ಕಟ್ಟಿ, ಬಗೆಬಗೆ ಹೂಗಳಿಂದ ಅಲಂಕರಿಸಿ, ಮೆರವಣಿಗೆ ನಡೆಸುವುದು ದಲಿತ ಜನಾಂಗದವರು.

ಹರಿಜನ ಕಾಲೋನಿಯ ಶ್ರೀಹುಚ್ಚಮ್ಮ ದೇವಾಲಯದಿಂದ ಹೆಬ್ಬಾರೆಗಳನ್ನು ತೆಗೆದುಕೊಂಡು ಚಿಕ್ಕಾಡೆ-ದೇವೇಗೌಡನಕೊಪ್ಪಲು ಮಧ್ಯೆ ಇರುವ ಚಿಕ್ಕಬೆಟ್ಟದ ಹೆಬ್ಬಾರೆ ಕಟ್ಟೆಯ ಬಳಿ ತೆಗೆದುಕೊಂಡು ಹೋಗಿ, ಅಲ್ಲಿ ಹೆಬ್ಬಾರೆ ಕಟ್ಟಲಾಗುತ್ತದೆ. ಬಳಿಕ ಕುಂತಿಬೆಟ್ಟದ ತಪ್ಪಲ್ಲಿನ ಬಳಿ ಹಿರೇಮರಳಿ ಗ್ರಾಮಸ್ಥರು ಪೂಜೆಸಲ್ಲಿಸುತ್ತಾರೆ.

ಮತ್ತೆ ದೇವೇಗೌಡನಕೊಪ್ಪಲು ಬಳಿಯ ಕಾಚೇನಹಳ್ಳಿ ಅಮ್ಮನವರ ದೇವಸ್ಥಾನಕ್ಕೆ ತೆಗೆದುಕೊಂಡು ಬಂದು ಹೂವುಗಳಿಂದ ಅಲಂಕರಿಸಿದ ಬಳಿಕ ದೇವೇಗೌಡನಕೊಪ್ಪಲು ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಆ ಬಳಿಕ ಅದ್ಧೂರಿ ಮೆರವಣಿಗೆ ಮೂಲಕ ಹೆಬ್ಬಾರೆಗಳನ್ನು ರಾತ್ರಿ ವೇಳೆಗೆ ಚಿಕ್ಕಾಡೆ ಗ್ರಾಮಕ್ಕೆ ತೆಗೆದುಕೊಂಡು ಬಂದು ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇರಿಸಲಾಗುತ್ತಿದೆ. ದೇವಸ್ಥಾನದ ಬಳಿ ಹರಕೆ ಹೊತ್ತು ಭಕ್ತರಿಗೆ ಬಾಯಿಬೀಗ ಹಾಕಲಾಗುತ್ತದೆ. ಮಂಗಳವಾರ ಮಧ್ಯಾಹ್ನ ಮೆರವಣಿಗೆ ಮೂಲಕ ಗ್ರಾಮದ ಹೊರ ವಲಯದಲ್ಲಿರುವ ದೇವಿರಮ್ಮನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ವೇಳೆ ಹರಕೆ ಹೊತ್ತು ಭಕ್ತರು, ಸಾರ್ವಜನಕರು ಹೆಬ್ಬಾರೆ ಕೆಳಗೆ ಕುಳಿತುಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಬಳಿಕ ಹರಕೆ ಹೊತ್ತ ಭಕ್ತರು ದೇವಿರಮ್ಮನ ದೇವಸ್ಥಾನಕ್ಕೆ ಬಾಳೆಹಣ್ಣಿನ ಗೊನೆಗಳು, ಕಜ್ಜಾಯವನ್ನು ಅರ್ಪಿಸುತ್ತಾರೆ. ದೇವಸ್ಥಾನದಲ್ಲಿ ಸಂಜೆಯವರೆಗೂ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಾರೆ. ನಂತರ ಮಂಗಳವಾರ ರಾತ್ರಿ ಗ್ರಾಮದ ಯಜಮಾನರು, ಪುರೋಹಿತರು, ದಲಿತ ಮುಖಂಡರು ಸಮ್ಮುಖದಲ್ಲಿ ಮತ್ತೆ ದೇವಸ್ಥಾನವನ್ನು ಮುಚ್ಚಲಾಗುತ್ತದೆ.

Share this article