ಹೊಸಪೇಟೆ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ರೈತರು, ಕಾರ್ಮಿಕರು, ಬಡ, ಮಧ್ಯಮ ವರ್ಗದವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ. ಬೆಲೆ ಏರಿಕೆ ಗಗನಕ್ಕೇರಿದರೂ ನಿಯಂತ್ರಣ ಮಾಡುತ್ತಿಲ್ಲ ಎಂದು ಸಿಪಿಎಂ ಪಕ್ಷದ ವಿಜಯನಗರ ಜಿಲ್ಲಾ ಮುಖಂಡ ಆರ್. ಭಾಸ್ಕರ್ ರೆಡ್ಡಿ ಹೇಳಿದರು.
ದೇಶದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಬಂದ್ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ, ಬಂದರುಗಳನ್ನು ಖಾಸಗಿಯವರಿಗೆ
ನೀಡಲಾಗುತ್ತಿದೆ. ಸರ್ಕಾರಿ ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ದೂರಿದರು.ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಂಬಲ ಬೆಲೆ ದೊರೆಯುತ್ತಿಲ್ಲ. ರೈತರ ಸಾಲಮನ್ನಾ ಮಾಡುತ್ತಿಲ್ಲ. ಬದಲಿಗೆ ಕಾರ್ಪೊರೇಟ್ ಸಂಸ್ಥೆಗಳ ₹17 ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ ಎಂದು ದೂರಿದರು.
ಚುನಾವಣೆಯಲ್ಲಿ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಜಮೆ ಮಾಡಲಾಗುವುದು. ಬೆಲೆ ಏರಿಕೆ ನಿಯಂತ್ರಿಸಲಾಗುವುದು, ರೈತರ ಆದಾಯ ದ್ವಿಗುಣಗೊಳಿಸಲಾಗುವುದು. ಪ್ರತಿ ವರ್ಷ ₹2 ಕೋಟಿ ಉದ್ಯೋಗ ನೀಡಲಾಗುವುದು ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಶಿಕ್ಷಣ ವ್ಯಾಪಾರಿಕರಣ ಮಾಡಲಾಗಿದೆ. ನಿವೇಶನ, ಬೆಲೆ ಗಗನಕ್ಕೇರಿದೆ. ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ಆಗುತ್ತಿಲ್ಲ. ಹೀಗಿದ್ದರೂ ಕೇಂದ್ರದ ಮೋದಿ ಸರ್ಕಾರ ಜನಪರ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಕರುಣಾನಿಧಿ, ಎಂ. ಜಂಬಯ್ಯ ನಾಯಕ, ಎನ್. ಯಲ್ಲಾಲಿಂಗ, ಕೆ. ನಾಗರತ್ನಮ್ಮ, ಎಂ. ಗೋಪಾಲ್, ವಿ. ಸ್ವಾಮಿ, ಹೇಮಂತ್ ನಾಯ್ಕ, ಶಕುಂತಲಮ್ಮ, ಯಲ್ಲಮ್ಮ, ರಮೇಶ್‌ಕುಮಾರ ಮತ್ತಿತರರಿದ್ದರು.