ರೈತರ ಸಂಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅರಿವಿಲ್ಲ

KannadaprabhaNewsNetwork |  
Published : Oct 15, 2026, 03:00 AM IST
14ದ್ಗದ್ದ್ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆ ಮತ್ತು ರೈತರ ಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಾಯೋಗಿಕ ಜ್ಞಾನವಿಲ್ಲ. ನಿವೃತ್ತ ಅಧಿಕಾರಿಗಳನ್ನು ಸಚಿವರನ್ನಾಗಿ ಮಾಡಿದರೆ ರೈತರ ಸಮಸ್ಯೆ ಹೇಗೆ ಅರ್ಥವಾಗುತ್ತದೆ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ರಾಜ್ಯದ ಕಬ್ಬು ಬೆಳೆಗಾರರ ಬೇಡಿಕೆ ಮತ್ತು ರೈತರ ಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಪ್ರಾಯೋಗಿಕ ಜ್ಞಾನವಿಲ್ಲ. ನಿವೃತ್ತ ಅಧಿಕಾರಿಗಳನ್ನು ಸಚಿವರನ್ನಾಗಿ ಮಾಡಿದರೆ ರೈತರ ಸಮಸ್ಯೆ ಹೇಗೆ ಅರ್ಥವಾಗುತ್ತದೆ ಎಂದು ಸಹಕಾರಿ ಸಚಿವ ಲಕ್ಷ್ಮಣ ಸವದಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬು ಬೆಳೆಗಾರರ ಬೇಡಿಕೆಗಳು, ಎಥೆನಾಲ್ ದರ ಹೆಚ್ಚಳ ಹಾಗೂ ಕೇಂದ್ರ ಸಚಿವರೊಂದಿಗಿನ ಸಭೆಯ ವಿಫಲತೆಯ ಬಗ್ಗೆ ಪ್ರತಿಕ್ರಿಯೆ ನೀಡಿದರು. ಒಂದು ಎಕರೆ ಕಬ್ಬು ಬೆಳೆಯಲು ಎಷ್ಟು ಖರ್ಚಾಗುತ್ತದೆ, ರಸಗೊಬ್ಬರ, ಲೇಬರ್ ಹಾಗೂ ಕ್ರಿಮಿನಾಶಕಗಳ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಅಧ್ಯಯನವೇ ಮಾಡಿಲ್ಲ. ಕಬ್ಬಿನ ಎಂಎಸ್‌ಪಿ (MSP) ಹೆಚ್ಚಿಸುವಂತೆ ಒಂದು ವರ್ಷದಿಂದ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸವದಿ ಬೇಸರ ವ್ಯಕ್ತಪಡಿಸಿದರು.

ಎರಡು ರೀತಿ ಬೆಲೆ ನಿಗದಿ ಅಗತ್ಯ:

ಕಾರ್ಖಾನೆಗಳು ರೈತರಿಗೆ ಕಬ್ಬಿನ ಹೆಚ್ಚಿನ ದರ ನೀಡಬೇಕಾದರೆ, ಸಕ್ಕರೆಗೆ ಎರಡು ರೀತಿಯ ಬೆಲೆ ನಿಗದಿಪಡಿಸಬೇಕು. ಸಾಮಾನ್ಯ ಗ್ರಾಹಕರಿಗೆ ಒಂದು ದರ ಹಾಗೂ ವಾಣಿಜ್ಯ ಬಳಕೆಗೆ (ಕೋಕಾ-ಕೋಲಾ, ಸಿಹಿ ತಿಂಡಿಗಳ ತಯಾರಿಕೆ) ಹೆಚ್ಚಿನ ದರ ನಿಗದಿಪಡಿಸಿ, ಅದರಿಂದ ಬರುವ ಲಾಭವನ್ನು ಎಂಎಸ್‌ಪಿಯಾಗಿ ರೈತರಿಗೆ ನೀಡಬೇಕು. ಇದನ್ನು ನಾವು ಅನೇಕ ಬಾರಿ ಹೇಳಿದ್ದೇವೆ. ಆದರೆ, ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಎಥೆನಾಲ್ ವಿಚಾರದಲ್ಲಿ ತೈಲ ಕಂಪನಿಗಳು ಮಾಡುತ್ತಿರುವ ಲಾಭದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸವದಿ, ಕೇಂದ್ರದ ಸೂಚನೆಯಂತೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆ ಮಾಡುತ್ತಿವೆ. ಆದರೆ, ರೈತರಿಂದ ಸರಾಸರಿ ₹62ಕ್ಕೆ ಎಥೆನಾಲ್ ಖರೀದಿಸಿ, ಅದನ್ನು ಪೆಟ್ರೋಲ್ ಜೊತೆ ಬೆರೆಸಿ ಜನರಿಗೆ ₹110ಕ್ಕೆ ಮಾರಾಟ ಮಾಡಲಾಗುತ್ತಿದೆ. ರೈತರು ಕಷ್ಟಪಟ್ಟು ಬೆಳೆ ಬೆಳೆದರೆ, ಯಾವುದೇ ಶ್ರಮವಿಲ್ಲದೆ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ ₹50 ರಷ್ಟು ಲಾಭ ಮಾಡುತ್ತಿವೆ. ಇದನ್ನು ತಪ್ಪಿಸಿ, ಎಥೆನಾಲ್ ದರವನ್ನು ಕನಿಷ್ಠ ₹90ಕ್ಕೆ ಹೆಚ್ಚಿಸಿದರೆ, ರೈತರಿಗೆ ಪ್ರತಿ ಟನ್‌ ಕಬ್ಬಿಗೆ ₹5,000 ನೀಡಲು ಸಾಧ್ಯವಾಗುತ್ತದೆ ಎಂದು ಲೆಕ್ಕಾಚಾರ ಸಮೇತ ಸಚಿವ ಸವದಿ ವಿವರಿಸಿದರು.

ಕೇಂದ್ರ ಸಚಿವರ ಸಭೆ ವಿಫಲ:

ಇತ್ತೀಚೆಗೆ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚವ್ಹಾಣ ಹಾಗೂ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಡೆದ ಸಭೆಯ ಬಗ್ಗೆ ಮಾತನಾಡಿದ ಅವರು, ಸಭೆಯಲ್ಲಿ ತಕ್ಷಣವೇ ಬೆಲೆ ಹೆಚ್ಚಳದ ಘೋಷಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ, ಮತ್ತೆ ಸಮಿತಿ ರಚಿಸಿ ಒಂದು ತಿಂಗಳ ನಂತರ ನಿರ್ಧರಿಸುತ್ತೇವೆ ಎಂದು ಹೇಳಿ ಸುಮ್ಮನಾದರು. ಇದು ಯಾರಿಗೂ ಒಪ್ಪಿಗೆಯಾಗಿಲ್ಲ. ಆ ಸಭೆ ವಿಫಲವಾಗಿದೆ. ಎಥೆನಾಲ್ ಖರೀದಿಗೆ ಸಂಬಂಧಿಸಿದಂತೆ ಪೆಟ್ರೋಲಿಯಂ ಸಚಿವರು ಆ ಸಭೆಯಲ್ಲಿ ಇರಬೇಕಿತ್ತು. ಆದರೆ, ಅವರೇ ಗೈರಾಗಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿಜ್ಞಾನ, ರೈತರ ಸಮಸ್ಯೆ ಅರಿವಿಲ್ಲದ ಸಚಿವರು:

ಕೇಂದ್ರದಲ್ಲಿರುವ ಅನೇಕ ಸಚಿವರು ನಿವೃತ್ತ ಐಎಎಸ್ (IAS) ಅಧಿಕಾರಿಗಳು. ಅವರಿಗೆ ಕಚೇರಿಯ ಆಡಳಿತಾತ್ಮಕ ಜ್ಞಾನವಿದೆಯೇ ಹೊರತು, ಕೃಷಿಯ ಬಗ್ಗೆ ಪ್ರಾಯೋಗಿಕ ಅನುಭವವಿಲ್ಲ. ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಭೆ ಯಶಸ್ವಿಯಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸವದಿ, ಸಭೆ ಯಶಸ್ವಿಯಾಗಿದ್ದರೆ ರೈತರು ಯಾಕೆ ಇಂದು ರಸ್ತೆಗೆ ಇಳಿದು ಹಗಲು-ರಾತ್ರಿ ಧರಣಿ ಮಾಡುತ್ತಿದ್ದಾರೆ? ಅವರಿಗೆ ರೈತರ ಕಷ್ಟಗಳೇನು ಗೊತ್ತು? ಕೇಂದ್ರದಲ್ಲಿರುವ ಸಚಿವರಿಗೆ ಆಡಳಿತಾತ್ಮಕ ಜ್ಞಾನವಿದೆ ಹೊರತು ರೈತರ ಕಷ್ಟ, ಕೃಷಿಜ್ಞಾನ ಅವರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ:

ರೈತರು ಬೆಳೆಯುವ ಕಬ್ಬಿಗೆ ಯೋಗ್ಯ ದರ ಸಿಗಬೇಕು. ಸಕ್ಕರೆಗೆ ಎಂಎಸ್‌ಪಿ ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟಿಸುತ್ತಿದ್ದಾರೆ. ರೈತರ ಹೋರಾಟಗಳು ಇನ್ನಷ್ಟು ತೀವ್ರಗೊಂಡು ವಿಮಾನ ನಿಲ್ದಾಣಗಳು ಮತ್ತು ರೈಲುಗಳನ್ನು ಬಂದ್ ಮಾಡಿದರೆ ದೇಶದಲ್ಲಿ ಹಾಹಾಕಾರ ಉಂಟಾಗುತ್ತದೆ, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದು ಸವದಿ ಎಚ್ಚರಿಕೆ ನೀಡಿದರು.

​ಸಿಡಿ ವಿಚಾರ- ಸತ್ಯ ಹೊರಬರಲಿದೆ:

ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಲಕ್ಷ್ಮಣ ಸವದಿ, ನಾನು ದೆಹಲಿಯಲ್ಲಿದ್ದ ಕಾರಣ ನನಗೆ ಆ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ವಿರೋಧ ಪಕ್ಷಗಳು ಇಂತಹ ಊಹಾಪೋಹ ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸಹಜ. ಆದರೆ, ನಮ್ಮ ರಾಜ್ಯದ ಜನ ಪ್ರಜ್ಞಾವಂತರಿದ್ದಾರೆ. ಕೊನೆಗೊಂದು ದಿನ ಸತ್ಯ ಹೊರಬಂದೇ ಬರುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಕುಸ್ತಿ: ಬೆಳಗಾವಿ ತಂಡ ಮೇಲುಗೈ
ಗಾಂಜಾ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ