ಹಾನಗಲ್ಲ: ಜನಕ್ಕೆ ಟೋಪಿ ಹಾಕಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರದ ನಡೆ ಒಂದಾದರೆ, ಇದೇ ಕಾಂಗ್ರೆಸ್ಸಿಗರು ದೇಶದಲ್ಲಿ ಅರಾಜಕತೆ ಸೃಷ್ಟಿಸಿ ವ್ಯವಸ್ಥೆಯನ್ನು ದಿವಾಳಿ ಮಾಡುವ ಹುನ್ನಾರದಲ್ಲಿದ್ದಾರೆ, ಇದಕ್ಕೆ ಮೋದಿ ಸರ್ಕಾರ ಬಗ್ಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ''''ದೇತು ದಿಲಾತು ದೇನೇವಾಲೆಂಕೋ ದಿಖಾತು'''' ಎಂದು ಹೇಳುವ ಸರ್ಕಾರ. ಈ ಸರ್ಕಾರದಲ್ಲಿ ನೈತಿಕತೆಯ ಅಧಃಪತನವಾಗಿದೆ. ೨೦೨೮ಕ್ಕೆ ರಾಜ್ಯದಲ್ಲಿ ಹಾಗೂ ೨೦೨೯ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಖಚಿತ. ರೈತರ ಪರವಾಗಿ ನಾವಿದ್ದೇವೆ. ವರದಾ-ಬೇಡ್ತಿ ಯೋಜನೆ ಸಾಕಾರದಿಂದ ರೈತರ ಬಹುತೇಕ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಯಾರಿಗೂ ತೊಂದರೆಯಾಗದಂತೆ ವರದಾ ಬೇಡ್ತಿ ಆರಂಭವಾಗಬೇಕು. ಇದು ನಮ್ಮ ಭವಿಷ್ಯ. ಸದನದಲ್ಲಿ ನಮ್ಮ ಧ್ವನಿಯಾಗಲು ಎಸ್.ವಿ. ಸಂಕಣೂರ ಅವರನ್ನು ಬೆಂಬಲಿಸಿ ಎಂದರು.
ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಕರ್ನಾಟಕ ಕಾಂಗ್ರಸ್ ಸರ್ಕಾರ ಬಿಟ್ಟಿ ಭಾಗ್ಯಗಳ ಸರ್ಕಾರ. ಇವರು ಕೊಡುವ ಭಾಗ್ಯಕ್ಕಿಂತ ಹಲವು ಪಟ್ಟು ತೆರಿಗೆ ವಸೂಲಿ ಮಾಡಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಭೀಕರ ಬರಗಾಲವಿದ್ದರೂ ಒಂದು ಕಾಸು ಪರಿಹಾರವಿಲ್ಲ. ರೈತರ ಬಗೆಗೆ ಕಾಳಜಿಯೇ ಇಲ್ಲದ ಸರ್ಕಾರ, ಒಂದು ಕುಟುಂಬಕ್ಕೆ ೨೫೦೦ ರು. ಬೆಳೆ ಹಾನಿ ಪರಿಹಾರ ಘೋಷಿಸಿರುವ ಈ ಸರ್ಕಾರಕ್ಕೆ ರೈತರ ಬೆಲೆಯೇ ಗೊತ್ತಿಲ್ಲ. ರೈತರ ಪರವಾಗಿ ಸರ್ಕಾರದಲ್ಲಿ ಧ್ವನಿ ಎತ್ತಲು ಸಂಕನೂರ ಅವರನ್ನು ಬೆಂಬಲಿಸಿ ಎಂದರು.ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೆಗೌಡರ, ಶೋಭಾ ನಿಸ್ಸಿಮಗೌಡರ, ಶೋಭಾ ಉಗ್ರಣ್ಣನವರ, ಮಾಜಿ ಶಾಸಕ ಶಿವರಾಜ ಸಜ್ಜನ, ಬಿ.ಎಸ್. ಅಕ್ಕಿವಳ್ಳಿ, ಭರತ ಬೊಮ್ಮಾಯಿ, ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಪದ್ಮನಾಭ ಕುಂದಾಪೂರ, ಶಿವಲಿಂಗಪ್ಪ ತಲ್ಲೂರ, ಆರ್.ಬಿ. ಪಾಟೀಲ, ಸಂತೋಷ ಭಜಂತ್ರಿ, ಮಾಲತೇಶ ಸೊಪ್ಪಿನ, ರಾಘವೇಂದ್ರ ತಹಶೀಲ್ದಾರ, ಮಲ್ಲಿಕಾರ್ಜುನ ಅಗಡಿ, ಭೋಜರಾಜ ಕರೂದಿ ವೇದಿಕೆಯಲ್ಲಿದ್ದರು.