ಕೇಂದ್ರ ಸರ್ಕಾರ ರೈತರ ಸಂಕಷ್ಟಗಳನ್ನು ನಿರ್ಲಕ್ಷಿಸುತ್ತಿದೆ. ಎಥೆನಾಲ್ ಉತ್ಪಾದನೆಯ ಲಾಭ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕಬ್ಬಿನ ಎಫ್ಆರ್ಪಿ ಹೆಚ್ಚಳ ಕುರಿತಂತೆ ಸಭೆ ನಡೆಸಿದಂತೆ, ಸಮಿತಿ ರಚಿಸಿ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಸರ್ಕಾರ ರೈತರ ಸಂಕಷ್ಟಗಳನ್ನು ನಿರ್ಲಕ್ಷಿಸುತ್ತಿದೆ. ಎಥೆನಾಲ್ ಉತ್ಪಾದನೆಯ ಲಾಭ ರೈತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಕಬ್ಬಿನ ಎಫ್ಆರ್ಪಿ ಹೆಚ್ಚಳ ಕುರಿತಂತೆ ಸಭೆ ನಡೆಸಿದಂತೆ, ಸಮಿತಿ ರಚಿಸಿ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಆರೋಪಿಸಿದರು.
ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರೈತರ ಸಮಯಹರಣ ಮಾಡಿದ್ದಾರೆ. ಕಬ್ಬು ಹಾಗೂ ಸಕ್ಕರೆಗೆ ಸೂಕ್ತ ಬೆಲೆ ನಿಗದಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳಿಗೆ ಕೇಂದ್ರ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಇದರಿಂದ ನಾಡಿನ ಅನ್ನದಾತರಿಗೆ ಕೇಂದ್ರ ಸರ್ಕಾರ ಘೋರ ಅನ್ಯಾಯ ಮಾಡಿದೆ. ಗೊಬ್ಬರ, ಕೂಲಿ, ಇಂಧನ ಸೇರಿದಂತೆ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದರೂ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ಹೆಚ್ಚುವರಿಯಾಗಿ 50 ರು. ನೆರವು ನೀಡಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ರೈತರಿಗೆ ಗಣನೀಯ ಆರ್ಥಿಕ ನೆರವು ಒದಗಿಸಲಾಗಿತ್ತು ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿ, ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ, ಬರ ನಿರ್ವಹಣೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಜನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆಧ್ಯತೆ ನೀಡಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, 226 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಸರ್ಕಾರ ಇದನ್ನು ಎದುರಿಸಲು ಸಜ್ಜಾಗಿದ್ದು, ಈಗಾಗಲೇ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಾದಗಂತೆ ಪ್ರತಿ ಜಿಲ್ಲೆಗೆ 10 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರತಿ ಅರ್ಹ ರೈತರಿಗೆ 2,500 ರು. ಮುಂಗಡ ಬರ ಪರಿಹಾರ: ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬದ್ಧವಾಗಿದೆ. ಸಚಿವ ಸಂಪುಟದ ನಿರ್ಧಾರದಂತೆ ಮೊದಲ ಹಂತದಲ್ಲಿ ಪ್ರತಿ ಅರ್ಹ ರೈತರಿಗೆ 2,500 ರು. ಮುಂಗಡ ಬರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೇ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಹಣ ಕೂಡ ಬರಲಿದೆ.
ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಜನರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಡೆಯಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ 120 ದಿನಗಳಲ್ಲಿ ಬೀದರ್ ಜಿಲ್ಲೆಯಲ್ಲಿ ಸುಮಾರು 21ರಿಂದ 22 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ನಿತ್ಯ ಸರಾಸರಿ 30 ಸಾವಿರ ಕಾರ್ಮಿಕರಿಗೆ ಉದ್ಯೋಗ ಒದಗಿಸಲಾಗುತ್ತಿದೆ ಎಂದು ಸಚಿವ ಖಂಡ್ರೆ ವಿವರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.