ಕನ್ನಡಪ್ರಭ ವಾರ್ತೆ ಶಿವಮೊಗ್ಗ ಭೂಮಿ ಹುಣ್ಣಿಮೆ ಪ್ರಯುಕ್ತ ಜಿಲ್ಲಾದ್ಯಂತ ಶನಿವಾರ ಜನರು ಗದ್ದೆ ಮತ್ತು ತೋಟದಲ್ಲಿ ಪೈರನ್ನು ಪೂಜಿಸಿ, ಸಕಾಲಕ್ಕೆ ಉತ್ತಮ ಮಳೆ-ಬೆಳೆ ಹಾಗೂ ಇಳುವರಿ ಕರುಣಿಸುವಂತೆ ಪ್ರಾರ್ಥಿಸಿದರು. ರೈತರು ಹೊಲಗದ್ದೆಯಲ್ಲಿ ತುಂಬು ಗರ್ಭಿಣಿಗೆ ಸೀಮಂತ ಶಾಸ್ತ್ರ ಮಾಡುವಂತೆ ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು. ವಿಶೇಷ ಖಾದ್ಯಗಳನ್ನು ತಯಾರಿಸಿ, ಭೂ ಮಣ್ಣಿ ಬುಟ್ಟಿಗಳಲ್ಲಿ ಕೊಂಡೊಯ್ದು ಎಡೆ ಇಟ್ಟು ಭೂಮಿತಾಯಿಗೆ ಪೂಜೆ ಸಲ್ಲಿಸಿ, ಮನೆಯವರೆಲ್ಲ ಹೊಲದಲ್ಲೇ ಕುಳಿತು ಊಟ ಮಾಡಿದರು. ಜಮೀನುಗಳ ಗಡಿಯಲ್ಲಿ ಚರಗ ಚೆಲ್ಲಿ ಆಚರಣೆ ನೆರವೇರಿಸಿದರು. ವಿಶೇಷ ಭೂಮಣ್ಣಿ ಬುಟ್ಟಿ: ಭೂಮಿ ಹುಣ್ಣಿಮೆ ಹಬ್ಬದಲ್ಲಿ ಭೂ ಮಣಣ್ಣಿ ಬುಟ್ಟಿಗೆ ವಿಶೇಷ ಸ್ಥಾನವಿದೆ. ದೊಡ್ಡ ಬುಟ್ಟಿ ಆಗೂ ಚಿಕ್ಕ ಬುಟ್ಟಿಗಗಳಿವೆ. ನವರಾತ್ರಿಯ ವಿಜಯದಶಮಿ ಹಬ್ಬದಂದು ಈ ಬುಟ್ಟಿಗೆ ಸಗಣಿ, ಕೆಮ್ಮಣ್ಣು ಬಳಿದು ಪೂಜಿಸಿ ನಂತರ ಅಕ್ಕಿ ಹಿಟ್ಟಿನಿಂದ ಬಣ್ಣ ತಯಾರಿಸಿ, ಬುಟ್ಟಿಗಳ ಮೇಲೆ ಚಿತ್ತಾರಗಳ ಬರೆಯುತ್ತಾರೆ. ಈ ಚಿತ್ತಾರ ಕಲೆಯಲ್ಲಿ ಮಲೆನಾಡಿನ ಸುಂದರ ಬದುಕನ್ನು ಬಿಂಬಿಸುವ ಚಿತ್ರಗಳಿರುತ್ತವೆ. ಇದರಲ್ಲಿ ಹೂವಿನ ಸಾಲು, ಗಡಿಗೆ, ಬಸವನ ಪಾದ, ಆರತಿ ಚಿತ್ತಾರ, ಭತ್ತದ ಸಸಿ, ತೆಂಗಿನ ಮರ, ಅಡಕೆ ಮರ, ಪಶು-ಪಕ್ಷಿ, ಸೂರ್ಯ, ಚಂದ್ರ, ಉಳುಮೆಯ ಸಾಮಗ್ರಿಯನ್ನು ಚಿತ್ತರಾಗಿತ್ತಿಯರು ಚಿತ್ರಿಸುತ್ತಾರೆ. ಇಡೀ ರಾತ್ರಿ ಅಡುಗೆ ಸಂಭ್ರಮ: ಭೂಮಿ ಹುಣ್ಣಿಮೆ ಪೂಜೆ ಹಿನ್ನೆಲೆ ಮಹಿಳೆಯರು ರಾತ್ರಿಪೂರ್ತಿ ಅಡುಗೆ ಮಾಡುತ್ತಾರೆ. ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ. ಹಲವು ತರಕಾರಿಗಳು, ಸೊಪ್ಪುಗಳನ್ನು ಹಾಕಿ ಬೇಯಿಸಿ ಹಚ್ಚಂಬಲಿ ತಯಾರಿ ಮಾಡುತ್ತಾರೆ. ಹಚ್ಚಂಬಲಿಯನ್ನು ಬುಟ್ಟಿಯಲ್ಲಿ ಇರಿಸಿಕೊಂಡು, ಪೂಜೆಯಾದ ಬಳಿಕ ಗದ್ದೆಯ ತುಂಬೆಲ್ಲ ಬೀರಲಾಗುತ್ತದೆ. ‘ಹಚ್ಚಂಬಲಿ.. ಹಾಲಂಬಲಿ. ಗುಡ್ಡದ ಮೇಲಿನ ನೂರೊಂದು ಕುಡಿ ಭೂ ತಾಯಿ ಬಂದು ಉಂಡೋಗಲಿ’ ಎಂದು ಹಾಡುತ್ತ ರೈತರು ಹಚ್ಚಂಬಲಿಯನ್ನು ಬೀರಿದರು. ಫಸಲಿಗೆ ತಾಳಿ ಕಟ್ಟುತ್ತಾರೆ: ಬೆಳೆದು ನಿಂತ ಫಸಲಿಗೆ ಒಂದು ಕಡೆಯಲ್ಲಿ ಪುಟ್ಟ ಮಂಟಪ ನಿರ್ಮಿಸಿ, ಹೂವು ಕಟ್ಟಿ, ಬಾಳೆಗೊನೆಯನ್ನು ನಿಲ್ಲಿಸಿ ಪೂಜೆ ಸಲ್ಲಿಸಲಾಗುತ್ತದೆ. ಈ ವೇಳೆ ಫಸಲಿಗೆ ತಾಳಿಯನ್ನು ಹಾಕಿ, ಅಲಂಕರಿಸಲಾಗುತ್ತದೆ. ಕೆಲವು ಕಡೆ ಮಹಿಳೆಯರು ತಮ್ಮದೇ ತಾಳಿಯನ್ನು ತೆಗೆದು ಭೂಮಿತಾಯಿಗೆ ಅಲಂಕರಿಸುತ್ತಾರೆ. ಉಳಿದ ಕಡೆಯಲ್ಲಿ ದೇವರ ಮನೆಯಲ್ಲಿರಿಸಿದ ತಾಳಿಯನ್ನು ಫಸಲಿಗೆ ಕಟ್ಟುವ ರೂಢಿಯೂ ಇದೆ. ಕಾಗೆಗಳಿಗೆ ಎಡೆ: ಭೂಮಿ ಹುಣ್ಣಿಮೆಯಂದು ರೈತರು ಕಾಗೆ (ಗುಳಿಯಾ)ಗಳಿಗೆ ಎಡೆ ಇಡುತ್ತಾರೆ. ನಿಧನರಾದ ಕುಟುಂಬದ ಹಿರಿಯರಿಗೆ ಎಡೆ ಅರ್ಪಿಸಲಾಗುತ್ತದೆ. ಅದಕ್ಕಾಗಿ ಕಾಗೆಗಳಿಗೆ ಒಂದೆಡೆ ಎಡೆ ಇಡಲಾಗುತ್ತದೆ. ಪೂಜೆಗೆ ತಂದ ಕಡಬನ್ನು ಗದ್ದೆಯ ಒಂದು ಭಾಗದಲ್ಲಿ ಹೂಳಲಾಗುತ್ತದೆ. ಭತ್ತದ ಕೊಯ್ಲಿನ ಸಂದರ್ಭ ಈ ಕಡಬನ್ನು ಹೊರಗೆ ತೆಗೆಯುತ್ತಾರೆ. ಆ ದಿನ ಅಡುಗೆ ವೇಳೆ ಆ ಕಡಬು ಹಾಕಲಾಗುತ್ತದೆ. ಕೊಯ್ಲಿಗೆ ಬಂದವರಿಗೆಲ್ಲ ಇದನ್ನು ಪ್ರಸಾದದ ರೀತಿಯಲ್ಲಿ ಕೊಡಲಾಗುತ್ತದೆ. ಕೃಷಿ ಚಟುವಟಿಕೆ ಮತ್ತು ನಿಸರ್ಗಕ್ಕೆ ಪೂಜನೀಯ ಸ್ಥಾನ ನೀಡಿ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಆಧುನಿಕತೆ ಅಬ್ಬರದ ನಡುವೆಯೂ, ಭೂಮಿ ಪೂಜೆ ಎಂಬ ಸಂಪ್ರದಾಯ ಇಂದಿಗೂ ಮುಂದುವರಿಯುತ್ತಿರುವುದು ವಿಶೇಷ. - - - -28ಎಸ್‌ಎಂಜಿಕೆಪಿ03: ಶಿವಮೊಗ್ಗ ತಾಲೂಕಿನ ಬಾಳೆಕೊಪ್ಪದಲ್ಲಿ ಹುಬ್ಬಳ್ಳೇರ ಚಂದ್ರಪ್ಪ ಅವರ ತೋಟದಲ್ಲಿ ಭೂಮಿ ಹುಣ್ಣಿಮೆಯ ಹಬ್ಬವನ್ನು ಕುಟುಂಬ ಸದಸ್ಯರು ಸಡಗರ ಸಂಭ್ರಮದಿಂದ ಆಚರಿಸಿದರು.