ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ ಎಂಬ ತಪ್ಪು ಮಾಹಿತಿಯಿಂದ ಗಾಬರಿಗೊಂಡ ಮಕ್ಕಳು..!

KannadaprabhaNewsNetwork | Published : Jan 19, 2024 1:49 AM

ಸಾರಾಂಶ

ನಂಜನಗೂಡು ತಾಲೂಕು ಸಾಲುಂಡಿ ಗ್ರಾಮದಲ್ಲಿ ಘಟನೆ, ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲು. ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟವನ್ನು ಮಕ್ಕಳಿಗೆ ಬಡಿಸುವ ಮೊದಲು ನಾನು ಸೇವಿಸುತ್ತೇನೆ. ಇಂದು ಸಹ ನಾನು ಊಟ ಮಾಡಿದ್ದೇನೆ. ಮಕ್ಕಳು ಯಾವುದೋ ತರಕಾರಿಯ ತುಂಡೊಂದನ್ನು ಹಲ್ಲಿ ಎಂದು ಭಾವಿಸಿ ಗಾಬರಿ ಮಾಡಿಕೊಂಡಿದ್ದಾರೆ. ನನಗೆ ಅದನ್ನು ಮಕ್ಕಳು ತೋರಿಸಿದ್ದು, ಪರಿಶೀಲಿಸಲಾಗಿ ಅದು ಹಲ್ಲಿಯಲ್ಲ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರಬಿಸಿಯೂಟದಲ್ಲಿ ಹಲ್ಲಿ ಬಿದ್ದಿದೆ ಎಂಬ ತಪ್ಪು ಮಾಹಿತಿಯಿಂದ ಗಾಬರಿಗೊಂಡ ಮಕ್ಕಳು ಅಸ್ವಸ್ಥರಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಂಜನಗೂಡು ತಾಲೂಕು ಸಾಲುಂಡಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 34 ಮಕ್ಕಳಿದ್ದು, ಪ್ರತಿದಿನದಂತೆ ಬಿಸಿಯೂಟ ತಯಾರಿಸಲಾಗಿತ್ತು. ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಬಿಸಿಯೂಟವನ್ನು ಮಕ್ಕಳು ಸೇವಿಸಿದ್ದಾರೆ. ಊಟ ಮಾಡುವಾಗ ವಿದ್ಯಾರ್ಥಿನಿಯೊಬ್ಬರು ತಟ್ಟೆಯಲ್ಲಿ ಹಲ್ಲಿ ಆಕಾರದ ತರಕಾರಿ ಬಿದ್ದಿರುವುದನ್ನು ನೋಡಿ ಆತಂಕಗೊಂಡು ಶಾಲಾ ಮುಖ್ಯ ಶಿಕ್ಷಕಿ ಪುಷ್ಪರಿಗೆ ತಿಳಿಸಿದ್ದಾಳೆ. ಶಿಕ್ಷಕಿ ಅದನ್ನು ‌ಪರೀಕ್ಷಿಸಿ ಅದು ತರಕಾರಿಯ ಕೊನೆಯ ಭಾಗವೆಂದು ತಿಳಿಸಿ ತಮ್ಮ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ.

ಆದರೆ ಮಕ್ಕಳು ಪೋಷಕರು ಮಕ್ಕಳಿಗೆ ನಡೆದ ವಿಷಯವನ್ನು ತಿಳಿಸಲಾಗಿ ಗಾಬರಿಗೊಂಡ ಪೋಷಕರು ತಮ್ಮ ಮಕ್ಕಳನ್ನು ಟಿ. ನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ತಾಲೂಕು ಆಡಳಿತಾಧಿಕಾರಿ ಡಾ. ರವಿಕುಮಾರ್, ಆಡಳಿತ ವೈದ್ಯಾಧಿಕಾರಿ ಜಗನ್ನಾಥ್, ಮಕ್ಕಳ ತಜ್ಞೆ ಮಾನಸ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗಿಲ್ಲ. ಎಲ್ಲ ಮಕ್ಕಳು ಆರೋಗ್ಯವಾಗಿದ್ದು, ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇದೆ. ಯಾರಿಗೂ ಗಂಭೀರ ಸಮಸ್ಯೆ ಎದುರಾಗಿಲ್ಲ. ಮಕ್ಕಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ನಿಗಾ ಘಟಕದಲ್ಲಿ ಕಾದಿರಿಸಲಾಗಿದೆ. ಸ್ವಲ್ಪ ಸಮಯಸ ನಂತರ ಎಲ್ಲ ಮಕ್ಕಳನ್ನು ಮನೆಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಮಕ್ಕಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಹಾಗಾಗಿ ಪೋಷಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.

ನನ್ನ ಊಟ ಮೊದಲು ನಂತರ ಮಕ್ಕಳದ್ದು!

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾ, ಶಾಲೆಯಲ್ಲಿ ತಯಾರಿಸಲಾದ ಬಿಸಿಯೂಟವನ್ನು ಮಕ್ಕಳಿಗೆ ಬಡಿಸುವ ಮೊದಲು ನಾನು ಸೇವಿಸುತ್ತೇನೆ. ಇಂದು ಸಹ ನಾನು ಊಟ ಮಾಡಿದ್ದೇನೆ. ಮಕ್ಕಳು ಯಾವುದೋ ತರಕಾರಿಯ ತುಂಡೊಂದನ್ನು ಹಲ್ಲಿ ಎಂದು ಭಾವಿಸಿ ಗಾಬರಿ ಮಾಡಿಕೊಂಡಿದ್ದಾರೆ. ನನಗೆ ಅದನ್ನು ಮಕ್ಕಳು ತೋರಿಸಿದ್ದು, ಪರಿಶೀಲಿಸಲಾಗಿ ಅದು ಹಲ್ಲಿಯಲ್ಲ ಎಂದು ಸ್ಪಷ್ಟ ಪಡಿಸಿದರು. ಪೋಷಕರು ಗಾಬರಿಯಾಗಿ ತಮ್ಮ‌ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಬಂದಿದ್ದಾರೆ ಅಷ್ಟೇ. ಮಕ್ಕಳೆಲ್ಲ ಆರೋಗ್ಯವಾಗಿದ್ದಾರೆ. ನಮ್ಮ ಶಾಲೆಯಲ್ಲಿ‌ಮಕ್ಕಳ ಆರೋಗ್ಯಕ್ಕೆ ಹೆಚ್ವಿನ ಗಮನ ನೀಡಲಾಗುತ್ತದೆ ಎಂದರು.

ಇಓ ಜೆರಾಲ್ಡ್ ರಾಜೇಶ್, ಬಿಸಿಯೂಟದ ಜಿಲ್ಲಾ ಮಟ್ಟದ ಅಧಿಕಾರಿ ರೇವಣ್ಣ, ಶಿವಣ್ಣ, ತಹಸೀಲ್ದಾರ್ ಸುರೇಶ್ ಆಚಾರ್, ಸಿಪಿಐ ಧನಂಜಯ್, ಎಸ್ಐ ಜಗದೀಶ್ ದೂಳ್ ಶೆಟ್ಟಿ ಇದ್ದರು.

Share this article